ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಬನ್ನೇರುಘಟ್ಟ ಝೂನಲ್ಲಿ ಎರಡು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿದ್ದು, ಸಂತಸದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಝೂನ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಮಾಹಿತಿ ನೀಡಿದ್ದು, ಜೀಬ್ರಾ ಮರಿಗಳ ಜನನ ಉದ್ಯಾನವನಕ್ಕೆ ಮತ್ತಷ್ಟು ಆಕರ್ಷಣೆ ಹೆಚ್ಚಿಸಲಿದೆ. ಅದರ ಜೊತೆಗೆ, ಪ್ರವಾಸಿಗರನ್ನು ಸೆಳೆಯುವಲ್ಲಿ ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.
ಆನೇಕಲ್, ಮಾರ್ಚ್ 16: ಬೆಂಗಳೂರಿನ ಸಮೀಪದ ಬನ್ನೇರುಘಟ್ಟ ಮೃಗಾಲಯದಲ್ಲಿ (Bannerghatta Biological Park) ಹೊಸ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ನಿರ್ಮಾಣವಾಗಿದೆ. ಉದ್ಯಾನವನದಲ್ಲಿರುವ ಎರಡು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿದ್ದು, ಪ್ರಾಣಿ ಪ್ರಿಯರಲ್ಲಿ ಸಂತೋಷ ಮೂಡಿಸಿದೆ. ಉದ್ಯಾನವನದಲ್ಲಿರುವ ಕೋಕಿಲ ಎಂಬ ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದ್ದು, ಕಾವೇರಿ ಎಂಬ ಮತ್ತೊಂದು ಜೀಬ್ರಾ ಕೂಡ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಜೀಬ್ರಾಗಳ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ಉದ್ಯಾನವನದಲ್ಲಿರುವ ಜೀಬ್ರಾಗಳಲ್ಲಿ ಹೆಣ್ಣು ಜೀಬ್ರಾಗಳೇ ಹೆಚ್ಚು ಇದ್ದು, ಹೊಸ ಮರಿಗಳ ಆರೋಗ್ಯದ ಮೇಲೂ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಮರಿಗಳು ಆರೋಗ್ಯವಾಗಿದ್ದು, ತಾಯಿ ಜೀಬ್ರಾಗಳ ಜೊತೆಗೆ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಕೆಲವು ಜೀಬ್ರಾಗಳನ್ನು ಇತರ ಉದ್ಯಾನವನಗಳಿಗೆ ನೀಡುವ ಮೂಲಕ ಬೇರೆ ಅಪರೂಪದ ಪ್ರಾಣಿಗಳನ್ನು ತರಲು ಕೂಡ ಚಿಂತನೆ ನಡೆಸಲಾಗಿದೆ ಎಂದು ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.