ಬೈಂದೂರು ಏತ ನೀರಾವರಿ ಸಭೆಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
ಏತ ನೀರಾವರಿ ಯೋಜನೆ ಅವೈಜ್ಞಾನಿಕವಾಗಿ ನಡೆದು ಸ್ಥಳೀಯ ರೈತರಿಗೆ ತೊಂದರೆಯಾಗುತ್ತಿದೆ ಎಂದು ಒಂದು ತಂಡದವರು ಆಕ್ರೋಶ ವ್ಯಕ್ತಪಡಿಸಿದಾಗ ಇನ್ನೊಂದು ತಂಡದಿಂದ ಮೈಕ್ ಕಸಿದು ರಂಪಾಟ ನಡೆಸಿ ಅದು ಗಲಾಟೆಗೆ ಕಾರಣವಾದ ಘಟನೆ ಬೈಂದೂರು ಏತ ನೀರಾವರಿ ಸಭೆಯಲ್ಲಿ ನಡೆದಿದೆ. ನಂತರ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಸಭೆ ಮುಂದುವರಿಯಲು ಅನುವು ಮಾಡಿಕೊಟ್ಟರು.
ಉಡುಪಿ, ಫೆಬ್ರವರಿ 5: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಬೈಂದೂರು ಏತ ನೀರಾವರಿ ಸಭೆಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಹೇರಂಜಾಲು ಏತನೀರಾವರಿ ಯೋಜನೆ ವೈಫಲ್ಯ, ಸ್ಥಳೀಯ ರೈತರಿಗೆ ಆಗುತ್ತಿರುವ ತೊಂದರೆ ಕುರಿತು ಸಭೆ ಕರೆಯಲಾಗಿತ್ತು. ಸಭೆ ನಡೆಯುವ ವೇಳೆ ಎರಡು ತಂಡಗಳ ನಡುವೆ ಹೊಯ್ ಕೈಯ್ ನಡೆದಿದೆ.
ಹೇರಂಜಾಲು ಶ್ರೀ ದುರ್ಗಾ ಗಣೇಶೋತ್ಸವ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಎರಡು ತಂಡಗಳ ನಡುವೆ ತಳ್ಳಾಟ, ನೂಕಾಟ ಉಂಟಾಗಿ ಒಂದಿಷ್ಟು ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಸಕಾಲದಲ್ಲಿ ಗಲಾಟೆ ನಿಲ್ಲಿಸಿ ಸಭೆ ಮುಂದುವರೆಯುವಂತೆ ಮಾಡಿದರು. ಗಲಾಟೆಯ ವಿಡಿಯೋ ಇಲ್ಲಿದೆ.
ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ರೈತ ಮುಖಂಡರಾದ ಎಸ್.ಪ್ರಕಾಶ್ ಚಂದ್ರ ಶೆಟ್ಟಿ, ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮತ್ತೊಂದು ತಂಡದವರು ಅವರ ಕೈಯಿಂದ ಮೈಕ್ ಕಸಿದು ಎಳೆದಾಟ ನಡೆಸಿದರು. ಇದು ಹೊಯ್ಕೈಗೆ ಕಾರಣವಾಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ