ಬೆಂಗಳೂರು: ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

Updated on: Jun 08, 2025 | 6:52 PM

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರಘಟ್ಟದಲ್ಲಿರುವ ಡ್ರ್ಯಾಗನ್ ಫ್ರೂಟ್ ತೋಟಕ್ಕೆ ಭೇಟಿ ನೀಡಿದರು. ಐಟಿ ಉದ್ಯೋಗವನ್ನು ತೊರೆದು ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಯಶಸ್ವಿಯಾಗಿರುವ ನೀರ್ಜಾ ವಾಲಿಯಾ ಅವರನ್ನು ಅವರು ಶ್ಲಾಘಿಸಿದರು. ಯುವಕರು ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು. 'ವಿಕಾಸಿತ್ ಕೃಷಿ ಸಂಕಲ್ಪ ಅಭಿಯಾನ'ದ ಭಾಗವಾಗಿ ಈ ಭೇಟಿ ನಡೆದಿದೆ.

ಬೆಂಗಳೂರು, ಜೂನ್​ 08: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರವಿವಾರ (ಜೂ.08) ರಾಜ್ಯ ಪ್ರವಾಸ ಕೈಗೊಂಡರು. ವಿಕಾಸಿತ್ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಸಚಿವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರಘಟ್ಟದಲ್ಲಿನ ಡ್ರ್ಯಾಗನ್ ಫ್ರೂಟ್ ಜಮೀನಿಗೆ ಭೇಟಿ ನೀಡಿದರು. ಐಟಿ ಉದ್ಯೋಗ ಬಿಟ್ಟು, ನೀರ್ಜಾ ವಾಲಿಯಾ ಅವರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದ ಡ್ರ್ಯಾಗನ್​ ಫ್ರೂಟ್​ನ್ನು ಕಂಡು ಶಿವರಾಜ್ ಸಿಂಗ್ ಚೌಹಾಣ್ ಸಂತಸಗೊಂಡರು. ರೈತ ಮಹಿಳೆಯನ್ನು ಶ್ಲಾಘಿಸಿದರು. ಈ ಕುರಿತು ಕೇಂದ್ರ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ.

“’ವಿಕಾಸಿತ್ ಕೃಷಿ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ನಾನು ಇಂದು ಕರ್ನಾಟಕಕ್ಕೆ ಭೇಟಿ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರಘಟ್ಟದಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಈ ಸಮಯದಲ್ಲಿ, ನಾನು ಮುನಿರಾಜ್ ಜಿ ಅವರ ತೋಟಕ್ಕೂ ಭೇಟಿ ನೀಡಿದ್ದೆ. ಅವರು ತಮ್ಮ ಕುಟುಂಬದೊಂದಿಗೆ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಾರೆ.”

“ಅನೇಕ ಯುವ ವೃತ್ತಿಪರರು ಕೃಷಿಯಲ್ಲಿ ಉತ್ತಮ ಭವಿಷ್ಯವನ್ನು ಕಾಣುತ್ತಿದ್ದಾರೆ ಮತ್ತು ಡ್ರ್ಯಾಗನ್ ಫ್ರೂಟ್ ಮತ್ತು ಇತರ ಸಾಂಪ್ರದಾಯಿಕವಲ್ಲದ ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಗಳಿಸುತ್ತಿದ್ದಾರೆ. ತನ್ನ ಐಟಿ ಉದ್ಯೋಗವನ್ನು ತೊರೆದ ನೀರ್ಜಾ ವಾಲಿಯಾ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಶ್ಲಾಘನೀಯ.”

“ಕೃಷಿಯ ಕಡೆಗೆ ಯುವಕರಲ್ಲಿ ಆಸಕ್ತಿ ಹೆಚ್ಚುತ್ತಿರುವುದು ಮತ್ತು ಅವರು ಹೊಸ ತಂತ್ರಗಳ ಮೂಲಕ ಅಪಾರ ಲಾಭವನ್ನು ಗಳಿಸುತ್ತಿರುವುದು ಬಹಳ ಸಂತೋಷದ ವಿಷಯ ಎಂದು ಪೋಸ್ಟ್​ ಮಾಡಿದ್ದಾರೆ.”