ಪಾದಯಾತ್ರೆ ಆರಂಭಿಸುವ ಮೊದಲು ಮೈಸೂರಲ್ಲಿ ಚಾಮುಂಡೇಶ್ವರಿ ಸನ್ನಿಧಿಗೆ ಮಾಸ್ಕ್ ಧರಿಸದೆ ತೆರಳಿ ಪೂಜೆ ಸಲ್ಲಿಸಿದರು ಶಿವಕುಮಾರ
ಎರಡನೇ ಅಲೆ ಬಂದಾಗ ನಾವೆಲ್ಲ ಹೀಗೆ ಯಾಮಾರಿದ್ದರಿಂದಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ರಸ್ತೆಗಳಲ್ಲಿ, ಬೀದಿಗಳಲ್ಲಿ ಜನ ಬಿದ್ದು ಸಾಯುವ ಸ್ಥಿತಿ ನಿರ್ಮಾಣವಾಗಿತ್ತು. ಪುನಃ ಅದೇ ಸ್ಥಿತಿ ಎದುರಾದರೆ ಯಾರೂ ಆಶ್ಚರ್ಯಪಡಬೇಕಿಲ್ಲ. ಯಾಕೆಂದರೆ, ಅದಕ್ಕಾಗಿ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ!!
ಮೇಕೆದಾಟು ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆ ಅರಂಭಿಸುವ ಮೊದಲು ಮೈಸೂರಲ್ಲಿ ಸೋಮವಾರದಂದು ಒಂದು ಸಮಾವೇಶವನ್ನು ನಡೆಸುವ ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು. ಡಿಕೆಶಿ ಅವರೊಂದಿಗೆ ಅನೇಕ ಕಾರ್ಯಕರ್ತರು ಸಹ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದರು. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಖುದ್ದು ಶಿವಕುಮಾರ ಸೇರಿದಂತೆ ಅನೇಕ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ನಮ್ಮ ನಾಯಕನೇ ಧರಿಸಿಲ್ಲ ನಾವ್ಯಾಕೆ ಧರಿಸೋಣ ಅನ್ನೋದು ಕಾರ್ಯಕರ್ತರ ಧೋರಣೆಯಾಗಿರಬಹುದು. ಕೋವಿಡ್-19 ಎರಡನೇ ಅಲೆ ಬಂದಾಗ ನಾವೆಲ್ಲ ಹೀಗೆ ಯಾಮಾರಿದ್ದರಿಂದಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ರಸ್ತೆಗಳಲ್ಲಿ, ಬೀದಿಗಳಲ್ಲಿ ಜನ ಬಿದ್ದು ಸಾಯುವ ಸ್ಥಿತಿ ನಿರ್ಮಾಣವಾಗಿತ್ತು. ಪುನಃ ಅದೇ ಸ್ಥಿತಿ ಎದುರಾದರೆ ಯಾರೂ ಆಶ್ಚರ್ಯಪಡಬೇಕಿಲ್ಲ. ಯಾಕೆಂದರೆ, ಅದಕ್ಕಾಗಿ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ!!
ದೇವಿಗೆ ಪೂಜೆ ಸಲ್ಲಿಸಿದ ನಂತರ ಶಿವಕುಮಾರ ಮಾಧ್ಯಮದವರೊಂದಿಗೆ ಮಾತಾಡಿದರು. ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದು ಕನ್ನಡಿಗರ ಸಂಪ್ರದಾಯ ಅಂತ ಹೇಳಿದ ಅವರು, ರಾಜ್ಯದ ಹಿತಕ್ಕೋಸ್ಕರ, ಕುಡಿಯುವ ನೀರಿಗೋಸ್ಕರ ಮತ್ತು ಕಾವೇರಿ ಜಲಾನಯನ ಪ್ರದೇಶದ ರೈತರಿಗೋಸ್ಕರ ಈ ಹೋರಾಟ ಮಾಡುತ್ತಿರುವುದಾಗಿ ಎಂದರು.
ಇದೇ ಸಮಯದಲ್ಲಿ ಅವರು ಮೇಕೆದಾಟು ಅಂದರೆ ಏನು ಮತ್ತು ಯೋಜನೆ ಜಾರಿಗೊಂಡ ಬಳಿಕ ಕನ್ನಡಿಗರಿಗೆ ಅಗುವ ಪ್ರಯೋಜನಗಳ ಮೇಲೆ ಬೆಳಕು ಚೆಲ್ಲಿದರು. ಮೇಕೆದಾಟು ಯೋಜನೆಯ ಒಂದು ಗಡಿ ಮೈಸೂರು ಜಿಲ್ಲೆಯಾದರೆ ಮತ್ತೊಂದು ಗಡಿ ಬೆಂಗಳೂರು ಎಂದು ಮಾಜಿ ನೀರಾವರಿ ಸಚಿವ ಹೇಳಿದರು. ಸರ್ವೋಚ್ಛ ನ್ಯಾಯಾಲಯ ಅದಾಗಲೇ ಯೋಜನೆಗೆ ಒಪ್ಪಿಗೆ ನೀಡಿದೆ ಅದರೆ ಸರ್ಕಾರ ಮೀನಮೇಷ ಎಣಿಸುತ್ತಾ ಕಾಲಹರಣ ಮಾಡುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ಮತ್ತು ಜೆಡಿ(ಎಸ್) ನಾಯಕರು ತಮ್ಮ ಪಾದಯಾತ್ರೆಯನ್ನು ಒಂದು ಗಿಮ್ಮಿಕ್ ಅನ್ನುತ್ತಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ಸಿಡಿಮಿಡಿಗೊಂಡ ಶಿವಕುಮಾರ, ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಎಲ್ ಕೆ ಅಡ್ವಾಣಿ ಅವರು ಕೈಗೊಂಡ ರಥಯಾತ್ರೆಗೆ ಏನು ಕರೆಯಬೇಕು ಎಂದು ಕೇಳಿದರು.
ಹಿಂದೆ, ದೇವೇಗೌಡರು ಹಲವು ಬಾರಿ ಪಾದಯಾತ್ರೆ ಮಾಡಿದ್ದಾರೆ, ಈಗ ಕುಮಾರಣ್ಣ ಸಹ ಅದನ್ನು ಕೈಗೊಳ್ಳುವ ಯೋಚನೆ ಮಾಡುತ್ತಿದ್ದಾರೆ. ಬಿ ಎಸ್ ಯಡಿಯೂರಪ್ಪನವರು ಐದೈದು ಸದಸ್ಯರ ಗುಂಪು ಮಾಡಿ ಪಾದಯಾತ್ರೆ ಮಾಡಿದರು, ಆಗ ಕೋವಿಡ್-19 ಸೋಂಕು ತಟಸ್ಥವಾಗಿತ್ತೇ ಎಂದು ಅವರು ಕೇಳಿದರು.
ಇದನ್ನೂ ಓದಿ: 10 ರೂ ಕೊಟ್ಟು ಖರೀದಿಸಿದ್ದ ಕೋಳಿ ಮರಿಗೆ 52 ರೂ ಟಿಕೆಟ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್