ಅಮೆರಿಕದೊಂದಿಗಿನ ಶಾಂತಿ ಮಾತುಕತೆ ಅಂತಿಮವಾಗಿಲ್ಲ, ಇವತ್ತೇ ಸಹಿ ಹಾಕಲ್ಲ ಎಂದ ಇರಾನ್
ಅಮೆರಿಕ ಮತ್ತು ಇರಾನ್ ನಡುವೆ ಶಾಶ್ವತ ಶಾಂತಿ ಒಪ್ಪಂದಕ್ಕಾಗಿ ವರ್ಚುವಲ್ ಸಭೆ ನಡೆಯಲಿದೆ. ಡಿಜಿಟಲ್ ಸಹಿ, 60 ದಿನಗಳ ಕದನ ವಿರಾಮ ವಿಸ್ತರಣೆ ಮತ್ತು ಹಾರ್ಮೋಸ್ ಜಲಸಂಧಿ ಮುಕ್ತಗೊಳಿಸುವ ಪ್ರಸ್ತಾವನೆಗಳಿವೆ. ಆದರೆ, ಇರಾನ್ ಕಡೆಯಿಂದ ಒಪ್ಪಂದದ ಬಗ್ಗೆ ಅಸ್ಪಷ್ಟತೆ, ವಿಶೇಷವಾಗಿ ಅಣು ಕಾರ್ಯಕ್ರಮದ ಚರ್ಚೆ ಬಗ್ಗೆ ಭಿನ್ನ ನಿಲುವುಗಳಿವೆ. ಪಾಕ್ ಪ್ರಧಾನಿ ಶರೀಫ್ ಒಪ್ಪಂದದ ಸನಿಹದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಟೆಹ್ರಾನ್, ಜೂನ್ 14: ಅಮೆರಿಕ ಮತ್ತು ಇರಾನ್ ನಡುವೆ ಶಾಶ್ವತ ಶಾಂತಿ ಒಪ್ಪಂದದ ಕುರಿತು ಮಹತ್ವದ ವರ್ಚುವಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉಭಯ ದೇಶಗಳು ಮಾತ್ರವಲ್ಲದೆ, ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳ ಪ್ರತಿನಿಧಿಗಳು ಸಹ ಭಾಗಿಯಾಗಲಿದ್ದಾರೆ. ಒಪ್ಪಂದದ ಪತ್ರದಲ್ಲಿ ಪರಸ್ಪರ ಡಿಜಿಟಲ್ ಸಹಿ ಹಾಕಿ ಶಾಂತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ. ಈ ವರ್ಚುವಲ್ ಸಭೆಯಲ್ಲಿ ಯುದ್ಧ ಅಂತ್ಯದ ಬಗ್ಗೆ ಘೋಷಣೆ ಆಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಒಪ್ಪಂದದಂತೆ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸಲಾಗುವುದು. ಈ ಪ್ರಕ್ರಿಯೆಯೊಂದಿಗೆ ಹಾರ್ಮೋಸ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲಾಗುವುದು. ಮುಂದಿನ ವಾರದಿಂದ ತಾಂತ್ರಿಕ ಮಟ್ಟದ ಮಾತುಕತೆಗಳು ಆರಂಭವಾಗಲಿದ್ದು, ಕದನ ವಿರಾಮದ ಅವಧಿಯಲ್ಲೇ ಪರಮಾಣು ಕಾರ್ಯಕ್ರಮದ ಬಗ್ಗೆಯೂ ಮಾತುಕತೆ ನಡೆಯಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಎಂದಿಗೂ ಅಣುವಸ್ತ್ರ ಹೊಂದುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಖರೀದಿ ಮತ್ತು ಸಂಶೋಧನೆ ಸೇರಿದಂತೆ ಯಾವುದೇ ರೀತಿಯಲ್ಲಿ ಅಣುವಸ್ತ್ರ ನಿಷೇಧಕ್ಕೆ ಒಪ್ಪಂದದಲ್ಲಿ ಒತ್ತು ನೀಡುವ ಸಾಧ್ಯತೆಯಿದೆ. ಇರಾನ್ ಒಳಗೆ ಯುರೇನಿಯಂ ದುರ್ಬಲಗೊಳಿಸುವ ಪ್ರಸ್ತಾಪವೂ ಇದ್ದು, ಒಪ್ಪಂದದ ಬಳಿಕ ಇರಾನ್‌ನ ನ್ಯೂಕ್ಲಿಯರ್ ಡಸ್ಟ್ ಧ್ವಂಸವಾಗಲಿದೆ. ಪರಮಾಣು ತ್ಯಾಜ್ಯವನ್ನು ನಾಶಪಡಿಸಲು ಅಮೆರಿಕ ಯೋಜನೆ ರೂಪಿಸುತ್ತಿದೆ.
ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಕಡೆಯಿಂದ ಇನ್ನೂ ಸ್ಪಷ್ಟ ಮತ್ತು ಏಕರೂಪದ ನಿಲುವು ಕಂಡುಬಂದಿಲ್ಲ. ಇರಾನ್‌ನ ವಿದೇಶಾಂಗ ಇಲಾಖೆಯ ವಕ್ತಾರ ಬಗಾಯಿ ಅವರು, ಅಮೆರಿಕ-ಇರಾನ್ ನಡುವಿನ ಒಪ್ಪಂದಕ್ಕೆ ಇಂದು ಸಹಿ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಅವರು ತಳ್ಳಿಹಾಕದಿದ್ದರೂ, ಒಪ್ಪಂದದಲ್ಲಿ ಪರಮಾಣು ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಇರಾನ್ ನಾಯಕರಲ್ಲೇ ಒಪ್ಪಂದದ ಬಗ್ಗೆ ದ್ವಂದ್ವಗಳಿವೆ ಎಂಬುದನ್ನು ಸೂಚಿಸುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

