VIDEO: ಬುಮ್ರಾರನ್ನೇ ಬೆಚ್ಚಿ ಬೀಳಿಸಿದ ವೈಭವ್ ಸೂರ್ಯವಂಶಿ
Rajasthan Royals vs Mumbai Indians: ಐಪಿಎಲ್ನ 13ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ 150 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 11 ಓವರ್ಗಳಲ್ಲಿ 123 ರನ್ಗಳಿಸಿ ಸೋಲೊಪ್ಪಿಕೊಂಡಿತು. ಈ ಸೋಲಿನ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಬೌಲರ್ಗಳ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನೆಗೂ ಜಸ್ಪ್ರೀತ್ ಬುಮ್ರಾ ಹಾಗೂ ವೈಭವ್ ಸೂರ್ಯವಂಶಿಯ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಬುಮ್ರಾರನ್ನು ಬೆಂಡೆತ್ತುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾನೆ. ಅದು ಸಹ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ.
ಅಂದರೆ ಇದೇ ಮೊದಲ ಬಾರಿ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ಜಸ್ಪ್ರೀತ್ ಬುಮ್ರಾರನ್ನು ಎದುರಿಸಿದ್ದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ ಬಾಲ್ನಲ್ಲೇ ಸಿಕ್ಸ್ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಗುವಾಹಟಿಯಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್ನ ದ್ವಿತೀಯ ಓವರ್‌ನಲ್ಲಿ ಬುಮ್ರಾ ದಾಳಿಗಿಳಿದಿದ್ದರು. ಬುಮ್ರಾ ಎಸೆದ ಮೊದಲ ಎಸೆತವನ್ನೇ ಯಾವುದೇ ಭಯವಿಲ್ಲದೆ ಎದುರಿಸಿದ ವೈಭವ್, ಲಾಂಗ್-ಆನ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸಿದರು.
ಇದಾದ ಬಳಿಕ ಅದೇ ಓವರ್‌ನಲ್ಲಿ ಬುಮ್ರಾ ಎಸೆದ ಶಾರ್ಟ್ ಪಿಚ್ ಎಸೆತವನ್ನು ಚಾಣಾಕ್ಷತನದಿಂದ ಪುಲ್ ಮಾಡಿದ ವೈಭವ್, ಚೆಂಡನ್ನು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್ ಸ್ಟ್ಯಾಂಡ್ಸ್ ಗೆ ಅಟ್ಟಿದರು.
ಈ ಮೂಲಕ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ 14 ರನ್ ಕಬಳಿಸುವ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಅಪ್ರತಿಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಈ ದೃಶ್ಯ ಕಂಡು ಬುಮ್ರಾ ಕೂಡ ಒಂದು ಕ್ಷಣ ದಂಗಾಗಿ, ನಂತರ ಮುಗುಳ್ನಗುತ್ತಾ ಆ ಹುಡುಗನ ಧೈರ್ಯವನ್ನು ಮೆಚ್ಚಿಕೊಂಡರು.
ವೈಭವ್ ಸೂರ್ಯವಂಶಿಯ ಈ ಭರ್ಜರಿ ಸಿಕ್ಸರ್ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವ ದಾಂಡಿಗನ ಆರ್ಭಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಮಳೆಯ ಕಾರಣ 11 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ವೈಭವ್ ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದರು. ಇದರಲ್ಲಿ ಒಟ್ಟು 5 ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 11 ಓವರ್ಗಳಲ್ಲಿ 150 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್ಗಳಲ್ಲಿ 123 ರನ್ಗಳಿಸಿ 27 ರನ್ಗಳಿಂದ ಸೋಲೊಪ್ಪಿಕೊಂಡಿದೆ.

