ವಕ್ಫ್ ಗುಮ್ಮ: ಅನ್ವರ್ ಮಾಣಿಪ್ಪಾಡಿ ವರದಿ ಮೇಲೆ SIT ಅಥವಾ CBI ತನಿಖೆಗೆ ಆಗ್ರಹಿಸಿದ ಬೊಮ್ಮಾಯಿ
ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನೇ ವಿಪಕ್ಷ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ತಕ್ಷಣ ಎಸ್ ಐಟಿ ಅಥವಾ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ, (ನವೆಂಬರ್ 03): ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ರೈತರು ಆತಂಕಗೊಂಡಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ವಿಪಕ್ಷ ಬಿಜೆಪಿ, ಸಿದ್ದರಾಮ್ಯಯ ಸರ್ಕಾರ ವಿರುದ್ಧ ಮುಗಿಬಿದ್ದಿದೆ. ಅಲ್ಲದೇ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ, ಇನ್ನು ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರದ ಅವಧಿಯಲ್ಲೂ ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದೆ. ಇನ್ನು ವಕ್ಫ್ ಬೋರ್ಡ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಸಹ ಮಾಜಿ ಸಿಎಂ ಸಿದ್ದರಾಮಯ್ಯನವರ ಹಳೇ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ. ಇದಕ್ಕೆ ಇದೀಗ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ನಾನು ಯಾವುದೇ ವಕ್ಫ್ ಮೀಟಿಂಗ್ ಮಾಡಿಲ್ಲ. ಅನ್ವರ್ ಮಾಣಿಪ್ಪಾಡಿ ವರದಿ ಕುರಿತು ನಾನು ಮಾತಾಡಿದ್ದೇನೆ. ವರದಿಯಲ್ಲಿರೋದನ್ನ ಹಿಂಪಡೆಯಬೇಕು ಅಂದಿದ್ದೇನೆ. ರೈತರ ವಿಚಾರವಾಗಿ ನಾನು ಮಾತಾಡಿಲ್ಲ. ನಮ್ಮ ಕಾಲದಲ್ಲಿ ಯಾವುದೇ ರೀತಿ ನೋಟಿಸ್ ಕೊಟ್ಟಿಲ್ಲ. ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದು ತೋರಿಸಿ, ಸಚಿವ ಜಮೀರ್ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸಿಎಂ ಸಿದ್ದರಾಮಯ್ಯನವರು ಹೇಳಿದ್ದು ಕಣ್ಣೊರೆಸುವ ತಂತ್ರ. ರೈತರಿಗೆ ಮತ್ತೆ ನೋಟಿಸ್ ಕೊಡಲ್ಲ ಅಂತಾ ಗ್ಯಾರಂಟಿ ಏನು? ಕಾಳಜಿ ಇದ್ರೆ ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದುಪಡಿಸಲಿ. ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ತಕ್ಷಣ ಎಸ್ ಐಟಿ ಅಥವಾ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.