ಸತ್ಯವನ್ನು ಅರಗಿಸಿಕೊಳ್ಳಲಾಗದಷ್ಟು ದುರಹಂಕಾರ ಕಾಂಗ್ರೆಸ್ ಪಕ್ಷದಲ್ಲಿ ಮನೆ ಮಾಡಿದೆ: ಪ್ರಲ್ಹಾದ್ ಜೋಶಿ

Updated on: Aug 12, 2025 | 3:32 PM

ಸೋಮವಾರ ಮಾಧ್ಯಮಗಳೊಂದಿಗೆ ಮಾತಾಡಿದ್ದ ರಾಜಣ್ಣ, ತನ್ನನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಹಿಂದೆ ದೊಡ್ಡ ಪಿತೂರಿ ಮತ್ತು ಕುತಂತ್ರ ಅಡಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ ಪಿತೂರಿಯಿಂದ ರಾಜಣ್ಣ ಮಂತ್ರಿ ಸ್ಥಾನ ಕಳೆದುಕೊಂಡರೇ? ನಾವು ಕಾಂಗ್ರೆಸ್ ಪಕ್ಷಕ್ಕೆ ಅದನ್ನೇ ಕೇಳುತ್ತಿದ್ದೇವೆ, ರಾಜಣ್ಣ ಮಾಡಿರುವ ತಪ್ಪೇನು? ಸತ್ಯ ಹೇಳುವುದನ್ನು ಕಾಂಗ್ರೆಸ್ ಸಹಿಸಲಾರದೇ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.

ದೆಹಲಿ, ಆಗಸ್ಟ್ 12: ಸುದ್ದಿಸಂಸ್ಥೆ ಪಿಟಿಐನೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇವಲ ಸತ್ಯ ಮಾತಾಡಿದ್ದಕ್ಕಾಗಿ ಕರ್ನಾಟಕ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ (KN Rajanna) ಅವರನ್ನು ವಜಾ ಮಾಡಲಾಗಿದೆ ಎಂದು ಹೇಳಿದರು. ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಪವರ್ ಪಾಯಿಂಟ್ ಪ್ರಸೆಂಟೇಶನ್ ನೀಡಿದ ಬಳಿಕ ರಾಜಣ್ಣ, ರಾಹುಲ್ ಮಾಡಿದ ಅರೋಪಗಳನ್ನು ಪ್ರಶ್ನಿಸಿ, ಮತದಾರರ ಪಟ್ಟಿ ತಯಾರಾಗುವಾಗ ತಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು, ಆಗೆಲ್ಲ ಸುಮ್ಮನಿದ್ದು ಈಗ ಮತಗಳ್ಳತನ ನಡೆದಿದೆ ಎಂದರೆ ಹೇಗೆ? ಅಂತ ಕೇಳಿದ್ದರು ಎಂದು ಜೋಶಿ ಹೇಳುತ್ತಾರೆ. ಅಸಲಿಗೆ ರಾಜಣ್ಣ ಅವರಿಗೆ ಹೈಕಮಾಂಡ್ ರಾಜೀನಾಮೆ ಸಲ್ಲಿಸುವಂತೆ ಹೇಳಿದೆ ಅಂತ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು ಮತ್ತು ರಾಜಣ್ಣ ಅದಕ್ಕಾಗಿ ಮುಂದಾಗಿದ್ದರು. ನಂತರ ಅವರಿಗೆ ನೀವು ರಾಜೀನಾಮೆ ನೀಡೋದು ಬೇಡ, ನಿಮ್ಮನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ ಅಂತ ತಿಳಿಸಲಾಗುತ್ತದೆ ಎಂದ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ದುರಹಂಕಾರ ಯಾವ ಮಟ್ಟದಲ್ಲಿ ಹುದುಗಿದೆ ಅಂತ ಇದರಿಂದ ಗೊತ್ತಾಗುತ್ತದೆ ಅಂತ ಹೇಳುತ್ತಾರೆ. ಇದು ವೋಟ್ ಕಳುವಿನ ವಿಷಯವಲ್ಲ, ಗಮನವನ್ನು ಕದಿಯುವ ಪ್ರಯತ್ನ ಎಂದು ಪ್ರಲ್ಹಾದ್ ಜೋಶಿ ಹೇಳುತ್ತಾರೆ.

ಇದನ್ನೂ ಓದಿ:  Karnataka Assembly session: ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಿರುವುದಕ್ಕೆ ವಿವರಣೆ ಕೇಳಿದ ವಿಪಕ್ಷ ನಾಯಕರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 12, 2025 03:29 PM