ನಮ್ಮ ನಾಯಕರು ತೆಗೆದುಕೊಂಡ ಕೆಟ್ಟ ನಿರ್ಧಾರಗಳಿಗೆ ನನ್ನ ಬೆಂಬಲವಿಲ್ಲ, ನಾನೊಬ್ಬ ಸ್ವಾಭಿಮಾನಿ: ಮರಿತಿಬ್ಬೇಗೌಡ, ಜೆಡಿ(ಎಸ್)-ಎಮ್ಎಲ್ಸಿ
ಪಕ್ಷದ ನಾಯಕರು ತೆಗೆದುಕೊಳ್ಳುವ ಕೆಟ್ಟ ನಿರ್ಧಾರಗಳಿಗೆ ತಾನೊಬ್ಬ ಸ್ವಾಭಿಮಾನಿಯಾಗಿ ಬೆಂಬಲ ಸೂಚಿಸುವುದಿಲ್ಲ ಎಂದು ಅವರು ಹೇಳಿದರು. ಅಧಿಕಾರಾವಧಿ ಮುಗಿಯುವವರೆಗೆ ಪಕ್ಷದಲ್ಲಿ ಮುಂದುವರಿಯುವುದಾಗಿ ಮರಿತಿಬ್ಬೇಗೌಡ ಹೇಳಿದರು.
ಮಂಡ್ಯ: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ(ಎಸ್) ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಚುನಾವಣಾ ಅಭಿಯಾನವನ್ನು ಈಗಲೇ ಶುರುಮಾಡಿದ್ದರೆ ಅವರ ಪಕ್ಷದ ಕೆಲ ನಾಯಕರು ಬೇರೆ ಯೋಚೆನೆಯಲ್ಲಿದ್ದಾರೆ. ಪಕ್ಷದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ (Marithibbegowda) ಅವರು ತಮ್ಮ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಸೋಮವಾರ ಮಂಡ್ಯನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಮರಿತಿಬ್ಬೇಗೌಡರು ವಿಧಾನ ಪರಿಷತ್ ಪದವೀಧರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜೆಡಿ(ಎಸ್) ಅಭ್ಯರ್ಥಿಗೆ ವೋಟು ಹಾಕದಿರಲು ಮತದಾರರನ್ನು ವಿನಂತಿಸಿಕೊಳ್ಳುವುದಾಗಿ ಹೇಳಿದರು. ಪಕ್ಷದ ಅಭ್ಯರ್ಥಿ ಹೆಚ್ ಕೆ ರಾಮು (HK Ramu) ಅವರ ಪರ ಮತ ಚಲಾಯಿಸದಿರುವಂತೆ ತಮ್ಮ ಬೆಂಬಲಿಗರ ಸಭೆಯಲ್ಲಿ ಮರಿತಿಬ್ಬೇಗೌಡ ಹೇಳಿದ್ದಾರೆ.
ಯಾಕೆ ಈ ನಿರ್ಧಾರ ಅಂತ ಮಾಧ್ಯಮದವರು ಕೇಳಿದಾಗ ಪಕ್ಷದ ನಾಯಕರು ತೆಗೆದುಕೊಳ್ಳುವ ಕೆಟ್ಟ ನಿರ್ಧಾರಗಳಿಗೆ ತಾನೊಬ್ಬ ಸ್ವಾಭಿಮಾನಿಯಾಗಿ ಬೆಂಬಲ ಸೂಚಿಸುವುದಿಲ್ಲ ಎಂದು ಅವರು ಹೇಳಿದರು. ಅಧಿಕಾರಾವಧಿ ಮುಗಿಯುವವರೆಗೆ ಪಕ್ಷದಲ್ಲಿ ಮುಂದುವರಿಯುವುದಾಗಿ ಹೇಳಿದ ಅವರು ಕ್ಷೇತ್ರದಲ್ಲಿ ತಮಗೆ ಬೆಂಬಲಿಗರಿದ್ದಾರೆ, ಹಿತೈಷಿಗಳಿದ್ದಾರೆ ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಚುನಾವಣಾ ಅಧಿಸೂಚನೆ ಹೊರಬಿದ್ದ ನಂತರ ಯಾವ ಪಕ್ಷದ ಜೊತೆ ಹೋಗಬೇಕು, ಯಾವ ಅಭ್ಯರ್ಥಿಗೆ ಬೆಂಬಲಿಸಬೇಕು ಅಂತ ನಿರ್ಧರಿಸುತ್ತೇವೆ, ಇದುವರೆಗೆ ತಮ್ಮನ್ನು ಯಾವ ಪಕ್ಷದವರೂ ಸಂಪರ್ಕಿಸಿಲ್ಲ ಎಂದು ಮರಿತಿಬ್ಬೇಗೌಡ ಹೇಳಿದರು.