ಕೆಂಗೇರಿಯಲ್ಲಿ ಮೆಟ್ರೋ ಪಿಲ್ಲರ್ಗೆ ಕೆಎಸ್ಅರ್ಟಿಸಿ ಬಸ್ ಢಿಕ್ಕಿ, 29 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆ ಎಸ್ ಆರ್ ಟಿ ಸಿ ಬಸ್ಸು ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು ಮತ್ತು ಬಸ್ಸಲ್ಲಿ ಒಟ್ಟು 45 ಜನ ಪ್ರಯಾಣಕರಿದ್ದರು. ಸಣ್ಣ ಪುಟ್ಟ ಗಾಯ ಅನುಭವಿಸಿದವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ಮೊನ್ನೆಯಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಾಗಿ (BBMP) ಅಧಿಕಾರವಹಿಸಿಕೊಂಡ ತುಷಾರ ಗಿರಿನಾಥ (Tushar Girinath) ಅವರು ತಮ್ಮ ಮೊದಲ ಆದ್ಯತೆ ನಗರದ ರಸ್ತೆಗಳಲ್ಲಿ ವಾಹನ ಓಡಿಸುವವರನ್ನು ಯಮಕಿಂಕರಂತೆ ಕಾಡುತ್ತಿರುವ ಗುಂಡಿಗಳನ್ನು ಮುಚ್ಚುವುದು ಮತ್ತು ರಸ್ತೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದು ಅಂತ ಹೇಳಿದ್ದರು. ಈ ದಿಶೆಯಲ್ಲಿ ಅವರು ಇನ್ನೂ ಕಾರ್ಯೋನ್ಮುಖರಾದಂತೆ ಕಾಣುವುದಿಲ್ಲ ಮಾರಾಯ್ರೇ. ಸೋಮವಾರ ರಾತ್ರಿ 1:30ಕ್ಕೆ ನಡೆದ ಒಂದು ದುರ್ಘಟನೆ ನಾವು ಹೇಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರ ಚಾಲಕ ರಸ್ತೆ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ ನಗರದ ಕೆಂಗೇರಿಯಲ್ಲಿ (Kengeri) ಭಾರತ್ ಪೆಟ್ರೋಲ್ ಬಂಕ್ ಬಳಿ ರಸ್ತೆ ಬದಿಯ ಡಿವೈಡರ್ ಹತ್ತಿ ಮೆಟ್ರೋ ಪಿಲ್ಲರ್ ಗೆ ಢಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಯಾರೂ ಸತ್ತಿಲ್ಲವಾದರೂ ಗಾಯಗೊಂಡಿರುವ 29 ಜನರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆ ಎಸ್ ಆರ್ ಟಿ ಸಿ ಬಸ್ಸು ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು ಮತ್ತು ಬಸ್ಸಲ್ಲಿ ಒಟ್ಟು 45 ಜನ ಪ್ರಯಾಣಕರಿದ್ದರು. ಸಣ್ಣ ಪುಟ್ಟ ಗಾಯ ಅನುಭವಿಸಿದವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಿನ ಜಾವವಾಗಿದ್ದರಿಂದ ದುರ್ಘಟನೆ ಸಂಭವಿಸಿದಾಗ ಪ್ರಯಾಣಿಕರೆಲ್ಲ ಗಾಢ ನಿದ್ರೆಯಲ್ಲಿದ್ದರು. ಸದರಿ ಅಫಘಾತವು ಪೆಟ್ರೋಲ್ ಬಂಕ್ ಮುಂದೆ ಅಳಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಸರ್ಜಾಪುರದಲ್ಲಿ ಭಾರಿ ಮಳೆ, ಗಾಳಿಗೆ ಕುಸಿದು ಬಿದ್ದ ಜಾಹಿರಾತು ಹೋರ್ಡಿಂಗ್ಸ್; ಅಪಘಾತದ ಬಳಿಕ ಬಯಲಾಯ್ತು ಹೋರ್ಡಿಂಗ್ಸ್ ಮಾಫಿಯಾ