ಇನ್ನೂ 20 ವರ್ಷ ವಿರೋಧ ಪಕ್ಷದ ಕುರ್ಚಿಯಲ್ಲೇ ಇರ್ತೀರಿ; ಕಾಂಗ್ರೆಸ್ ವಿರುದ್ಧ ಗುಡುಗಿದ ಅಮಿತ್ ಶಾ
ಇಂದು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವೇಳೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಲು ಎದ್ದು ನಿಂತಾಗ ಕಾಂಗ್ರೆಸ್ ಮಾತು ಮುಂದುವರೆಸಲು ಬಿಡದೆ ಅಡ್ಡಿಪಡಿಸಿತು. ಇದಕ್ಕೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಮ್ಮ ಪಕ್ಷದಲ್ಲಿ ವಿದೇಶಿಯರ ಮಾತಿಗೆ ಎಷ್ಟು ಬೆಲೆಯಿದೆ ಎಂಬುದು ನಮಗೆ ಗೊತ್ತು ಎಂದು ಗುಡುಗಿದ್ದಾರೆ.
ನವದೆಹಲಿ, ಜುಲೈ 28: ಸಂಸತ್ ಅಧಿವೇಶನದಲ್ಲಿ (Parliament Session) ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಬಣದ ನಡುವೆ ಆಪರೇಷನ್ ಸಿಂಧೂರ್ (Operation Sindoor) ಕುರಿತಾದ ಚರ್ಚೆ ಬಿರುಸಿನಲ್ಲಿ ಸಾಗಿದೆ. ಇಂದು ಸಂಜೆ ಸದನದಲ್ಲಿ ಆಪರೇಷನ್ ಸಿಂಧೂರ್ ಕುರಿತು ಚರ್ಚೆಯ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಕಾಂಗ್ರೆಸ್ ಸಂಸದರು ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, “ನಿಮಗೆ ನಮ್ಮ ದೇಶದ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರ ಮೇಲೆ ನಂಬಿಕೆ ಇಲ್ಲ, ಆದರೆ ಬೇರೆ ಯಾವುದೋ ದೇಶದವರು ಹೇಳಿದ ಮಾತು ನಂಬುತ್ತೀರಿ. ಇದಕ್ಕೆ ನನ್ನ ಆಕ್ಷೇಪವಿದೆ. ನಿಮ್ಮ ಪಕ್ಷದಲ್ಲಿ ವಿದೇಶಿಯರ ಮಹತ್ವ ಏನೆಂಬುದು ನನಗೆ ಗೊತ್ತಿದೆ. ಆದರೆ ನಿಮ್ಮ ಪಕ್ಷದ ಆ ಎಲ್ಲಾ ವಿಷಯಗಳನ್ನು ಈ ಸದನದ ಮೇಲೆ ಕೂಡ ಹೇರುವುದು ಸರಿಯಲ್ಲ. ಇದೇ ಕಾರಣಕ್ಕಾಗಿ ನೀವು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತಿದ್ದೀರಿ, ಮುಂದಿನ 20 ವರ್ಷವೂ ನೀವು ಅಲ್ಲಿಯೇ ಇರುತ್ತೀರಿ” ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ