ಬರ್ಲಿನ್: ಜರ್ಮನಿಯಲ್ಲಿ 101 ವರ್ಷ ವಯಸ್ಸಿನ ಅಜ್ಜಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಕೊವಿಡ್-19 ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆ ಮೂಲಕ, ಜರ್ಮನಿ ಮತ್ತು ಐರೋಪ್ಯ ಒಕ್ಕೂಟ ದೇಶಗಳಲ್ಲಿ ನಡೆಯುತ್ತಿರುವ ಲಸಿಕೆ ವಿತರಣೆಗೆ ಶುಭಾರಂಭ ದೊರೆತಂತೆ ಆಯಿತು.
ಜರ್ಮನಿಯ ಪೂರ್ವ ರಾಜ್ಯದ ವೃದ್ಧಾಪ್ಯ ಕೇಂದ್ರದಲ್ಲಿರುವ ಎಡಿತ್ ಕ್ವೊಯಿಝಲ್ಲ (101) ಫೈಜರ್- ಬಯೋಎನ್ಟೆಕ್ ಲಸಿಕೆ ಪಡೆದ ಮೊದಲಿಗರಾದರು. ಅವರೊಂದಿಗೆ ವೃದ್ಧಾಪ್ಯ ಕೇಂದ್ರದ ಇತರ 50 ಮಂದಿಯೂ ಲಸಿಕೆ ಚುಚ್ಚಿಸಿಕೊಂಡಿದ್ದಾರೆ. ಫೈಜರ್-ಬಯೋಎನ್ಟೆಕ್ ಲಸಿಕೆಯು ಪಾಶ್ಚಿಮಾತ್ಯ ದೇಶಗಳಲ್ಲಿ ವಿತರಣೆಗೆ ಅನುಮತಿ ಪಡೆದುಕೊಂಡ ಮೊದಲ ಲಸಿಕೆಯಾಗಿದೆ.
ಬ್ರಿಟನ್ ಸರ್ಕಾರ ಡಿಸೆಂಬರ್ 2ರಂದು ಲಸಿಕೆ ವಿತರಣೆಗೆ ಅನುಮತಿ ನೀಡಿತ್ತು. ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (EMA) ಡಿಸೆಂಬರ್ 21ರಂದು ಲಸಿಕೆಯ ವಿತರಣೆಗೆ ಅನುಮತಿ ಸೂಚಿಸಿತ್ತು. ಅದೇ ದಿನ, ಡಿಸೆಂಬರ್ 27ರಿಂದ ಸಾರ್ವಜನಿಕರಿಗೆ ಚುಚ್ಚುಮದ್ದು ನೀಡುವ ಬಗ್ಗೆಯೂ ಐರೋಪ್ಯ ಒಕ್ಕೂಟ ಸಲಹೆ ನೀಡಿತ್ತು. ನಿನ್ನೆ ಹತ್ತು ಸಾವಿರದಷ್ಟು ಲಸಿಕೆ ಡೋಸ್ಗಳು ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ತಲುಪಿದ್ದು, ವಿತರಣೆಗೆ ಸುಲಭವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.