ಪಾಕಿಸ್ತಾನ (Pakistan)ದ ವಾಯುವ್ಯ ಭಾಗದಲ್ಲಿರುವ ದುರ್ಗಮ ಹಳ್ಳಿಯೊಂದರಲ್ಲಿ ಭಾನುವಾರ ಸಂಜೆ ಮೂರು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿ 17 ಮಂದಿ ಮೃತಪಟ್ಟಿದ್ದಾರೆ. ಮೂರೂ ಮನೆಗಳೂ ಜಖಂಗೊಂಡಿವೆ. ಶನಿವಾರ ರಾತ್ರಿಯಿಂದಲೇ ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ವಿಪರೀತ ಮಳೆ ಪ್ರಾರಂಭವಾಗಿತ್ತು. ಭಾನುವಾರ ಮುಂಜಾನೆಯವರೆಗೂ ಇದು ಮುಂದುವರಿದಿತ್ತು. ಈ ವೇಳೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ತೋರ್ಗಡ್ ಎಂಬ ಹಳ್ಳಿಯಲ್ಲಿ ಮೂರು ಮಣ್ಣಿನ ಮನೆಗಳಿಗೆ ಸಿಡಿಲು ಬಡಿದು ಅವಘಡ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹಜಾರಾ ವಿಭಾಗದ ವ್ಯಾಪ್ತಿಯಲ್ಲಿ ಬರುವ ಈ ಕೆಲವು ಪರ್ವತ ಆವೃತ ಜಿಲ್ಲೆಗಳಲ್ಲಿ ಮಳೆಗಾಲದ ಸಮಯದಲ್ಲಿ ಯಾವಾಗಲೂ ಭೂಕುಸಿತ ಸೇರಿ ಮಳೆ ಸಂಬಂಧಿ ಅವಘಡಗಳು ನಡೆಯುತ್ತಲೇ ಇರುತ್ತವೆ. ಹಾಗೇ ಈ ಬಾರಿ ಸಿಡಿಲಿಗೆ 17 ಜನ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಡಿಲಿನಿಂದಾಗಿ ಮೂರು ಮನೆಗಳೂ ಕುಸಿದುಬಿದ್ದಿದ್ದು, ಅದರ ಅವಶೇಷಗಳಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಲ್ಲಿಗೆ ಆಗಮಿಸಿದ್ದ ರಕ್ಷಣಾ ತಂಡಗಳ ಜತೆ ಸ್ಥಳೀಯರು ಕೈಜೋಡಿಸಿದ್ದರು. ಗಾಯಗೊಂಡ ಇಬ್ಬರನ್ನು ಸಮೀಪದ ಅಬ್ಬೋಟ್ಟಾಬಾದ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಈ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಸುಲಭವಾಗಿರಲಿಲ್ಲ. ಅವಘಡ ನಡೆದ ಹಳ್ಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಸಾಮಗ್ರಿಗಳು, ಸಿಬ್ಬಂದಿಯನ್ನು ತತ್ಕ್ಷಣವೇ ಕಳಿಸಿದೆ. ಆದರೆ ಇಲ್ಲಿ ವಿಪರೀತ ಮಳೆಯಿಂದಾಗಿ ಅಲ್ಲಲ್ಲಿ ಒಂದೇಸಮ ಮಣ್ಣುಕುಸಿತ ಆಗುತ್ತಿದ್ದು, ತಲುಪುವುದೂ ಕಷ್ಟವಾಗಿತ್ತು. ಹಾಗೇ, ರಕ್ಷಣಾ ಕಾರ್ಯಾಚರಣೆಯೂ ವಿಳಂಬವಾಯಿತು. ಇಲ್ಲಿನ ರಸ್ತೆಗಳೆಲ್ಲ ಬ್ಲಾಕ್ ಆಗಿದ್ದು, ಮಣ್ಣು-ಕಲ್ಲು, ಬುಡಸಮೇತ ಬಿದ್ದ ಮರಗಳೆಲ್ಲ ರಸ್ತೆಗೆ ಬಿದ್ದಿವೆ. ಅದನ್ನೆಲ್ಲ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಖೈಬರ್ ಪಖ್ತುಂಖ್ವಾ, ಪಂಜಾಬ್, ಇಸ್ಲಮಾಬಾದ್ ಮತ್ತು ಬಲೂಚಿಸ್ತಾದ ಪೂರ್ವಭಾಗಗಳಲ್ಲಿ, ವಿಪತ್ತು ನಿರ್ವಹಣಾ ಪ್ರಾಧಿಕಾರ ಮಳೆಯ ಎಚ್ಚರಿಕೆ ನೀಡಿದೆ. ಸ್ಥಳೀಯರು ಜಾಗರೂಕರಾಗಿ ಇರಬೇಕು ಎಂದು ಹೇಳಿದೆ.
ಇದನ್ನೂ ಓದಿ: Crime: ರೇಪಿಸ್ಟ್ ಎಂದು ರೇಗಿಸಿದ ಕಾರಣಕ್ಕೆ ಕೊಲೆ; ಅಣ್ಣ, ತಮ್ಮ ಸೇರಿದಂತೆ ಮೂವರು ಆರೋಪಿಗಳ ಬಂಧನ
Virat Kohli: ಆರ್ಸಿಬಿ ತಂಡ ಸೇರಿಕೊಂಡ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್