ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ನಲ್ಲಿ ಸೇರಿದ್ದಾರೆ 20 ಸಾವಿರ ವಿದೇಶಿ ಸ್ವಯಂ ಸೇವಕರು; ಭಾರತದವರೂ ಇದ್ದಾರೆ !
ತಾವು ಇಂಟರ್ನ್ಯಾಷನಲ್ ಬ್ರಿಗೇಡ್ ರಚನೆ ಮಾಡುತ್ತಿದ್ದೇವೆ. ಉಕ್ರೇನ್ ಪರ ಹೋರಾಟ ಮಾಡಲು ಇಚ್ಛೆ ಇರುವ, ಪೂರ್ವ ಯುರೋಪ್ನ ಇತರ ದೇಶಗಳ ನಾಗರಿಕರು, ಸೈನಿಕರು ಈ ಬ್ರಿಗೇಡ್ ಸೇರ್ಪಡೆಯಾಗಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದರು.
ರಷ್ಯಾ (Russia) ವಿರುದ್ಧ ಹೋರಾಟದಲ್ಲಿ ಉಕ್ರೇನ್ ಸೇನೆಯಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಕೈಜೋಡಿಸಿದ್ದಾರೆ. ಇವರೊಂದಿಗೆ ಸುಮಾರು 52 ಇತರ ದೇಶಗಳ 20 ಸಾವಿರ ಸೈನಿಕರು ಕೈಜೋಡಿಸಿದ್ದಾರೆ. ಅಂದರೆ ಇವರೆಲ್ಲ ಉಕ್ರೇನ್ನಲ್ಲಿ ನೆಲದಲ್ಲಿ ನಿಂತು ರಷ್ಯಾ ಸೈನಿಕರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಉಕ್ರೇನ್ನ ಪ್ರಮುಖ ಇಂಗ್ಲಿಷ್ ಪತ್ರಿಕೆಯಾದ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ. ಅಷ್ಟೇ ಅಲ್ಲ, ಇವರೆಲ್ಲ ಉಕ್ರೇನ್ ಪೌರತ್ವ ಪಡೆಯಲು ಇಚ್ಛಿಸಿದ್ದೇ ಆದರೆ, ಅರ್ಜಿ ಸಲ್ಲಿಸಬಹುದು ಎಂದು ಅಲ್ಲಿನ ಸರ್ಕಾರ ಹೇಳಿದ್ದಾಗಿಯೂ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.
ಟ್ವಿಟರ್ ಅಕೌಂಟ್ನಲ್ಲಿ ಕೂಡ ಪೋಸ್ಟ್ ಮಾಡಿರುವ ಕೀವ್ ಇಂಡಿಪೆಂಡೆಂಟ್ ಪತ್ರಿಕೆ, ಈಗಾಗಲೇ ಹಲವು ವಿದೇಶಿಯರು ಉಕ್ರೇನ್ನಲ್ಲಿದ್ದು, ಅವರೀಗ ರಷ್ಯಾ ದಾಳಿಯ ವಿರುದ್ಧ ಹೋರಾಟಕ್ಕೆ ಕೈಗೆ ಬಂದೂಕು ಎತ್ತಿಕೊಂಡಿದ್ದಾರೆ. ಅವರು ಬಯಸಿದರೆ ಉಕ್ರೇನ್ ಪೌರತ್ವವನ್ನೂ ನೀಡಲಾಗುವುದು ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಕಿರಿಯ ಸಚಿವ ಯೆವ್ಹೆನ್ ಯೆನಿನ್ ಹೇಳಿದ್ದಾರೆ. ಈಗಾಗಲೇ ಸುಮಾರು 20 ಸಾವಿರ ವಿದೇಶಿಯರು ಉಕ್ರೇನ್ ಸೈನ್ಯ ಸೇರಿಕೊಂಡಿದ್ದಾರೆ ಎಂದು ಹೇಳಿದೆ.
⚡️Foreign volunteers will be able to obtain Ukrainian citizenship if they want to, First Deputy Interior Minister Yevhen Yenin said on March 9.
Twenty thousand foreign volunteers have joined Ukrainian forces to fight Russia since March 6.
— The Kyiv Independent (@KyivIndependent) March 9, 2022
ಫೆಬ್ರವರಿ 24ರಿಂದ ರಷ್ಯಾ ಉಕ್ರೇನ್ ಮೇಲೆ ದಂಡೆತ್ತಿ ಹೋಗಿದೆ. ಅದಾಗಿ ಮೂರನೇ ದಿನಕ್ಕೆ ಅಂದರೆ ಫೆ.27ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶವನ್ನುದ್ದೇಶಿಸಿ ಮಾತನಾಡಿ, ತಾವು ಇಂಟರ್ನ್ಯಾಷನಲ್ ಬ್ರಿಗೇಡ್ ರಚನೆ ಮಾಡುತ್ತಿದ್ದೇವೆ. ಉಕ್ರೇನ್ ಪರ ಹೋರಾಟ ಮಾಡಲು ಇಚ್ಛೆ ಇರುವ, ಪೂರ್ವ ಯುರೋಪ್ನ ಇತರ ದೇಶಗಳ ನಾಗರಿಕರು, ಸೈನಿಕರು ಈ ಬ್ರಿಗೇಡ್ ಸೇರ್ಪಡೆಯಾಗಬಹುದು. ಹೀಗೆ ಸ್ವಯಂಸೇವಕರಾಗಿ ಬರಲು ಇಚ್ಛಿಸುವವರು ತಮ್ಮ ದೇಶದಲ್ಲಿರುವ ಉಕ್ರೇನ್ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಾಯಿಸಿ, ಇಲ್ಲಿಗೆ ಬರಬಹುದು ಎಂದು ಹೇಳಿದ್ದರು. ಈ ಕರೆಗೆ ವಿದೇಶಗಳ ಅನೇಕರ ಸ್ವಯಂಸೇವಕರು ಉಕ್ರೇನ್ಗೆ ತಲುಪಿದ್ದಾರೆ. ಭಾರತದ ಕೆಲವರೂ ಕೂಡ ಉಕ್ರೇನ್ನಲ್ಲಿದ್ದು ರಷ್ಯಾ ವಿರುದ್ಧ ಯುದ್ಧದಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ರಷ್ಯಾ ವಿರುದ್ಧದ ಉಕ್ರೇನ್ ಹೋರಾಟ ಬೆಂಬಲಿಸಿ ಶಸ್ತ್ರ ಹಿಡಿಯಲು ಸಿದ್ಧರಾದ ಕೆಲ ಭಾರತೀಯರು