ವಿವಿಧ ದೇಶಗಳಿಂದ ಶಸ್ತ್ರಾಸ್ತ್ರ ಸಹಾಯ ಒದಗಲಿದೆ ಎಂದ ಉಕ್ರೇನ್; ಕದನದಲ್ಲಿ ಇದುವರೆಗೆ ಆದ ಸಾವು-ನೋವೆಷ್ಟು?

Russia Ukraine War: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಈವರೆಗೆ 3,500 ರಷ್ಯನ್ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ. ದೇಶಕ್ಕೆ ವಿವಿಧ ಕಡೆಗಳಿಂದ ಶಸ್ತ್ರಾಸ್ತ್ರಗಳು ಹರಿದುಬರುತ್ತಿವೆ ಎಂದು ಉಕ್ರೇನ್ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

ವಿವಿಧ ದೇಶಗಳಿಂದ ಶಸ್ತ್ರಾಸ್ತ್ರ ಸಹಾಯ ಒದಗಲಿದೆ ಎಂದ ಉಕ್ರೇನ್; ಕದನದಲ್ಲಿ ಇದುವರೆಗೆ ಆದ ಸಾವು-ನೋವೆಷ್ಟು?
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (ಪ್ರಾತಿನಿಧಿಕ ಚಿತ್ರ, Credits: AP)
Follow us
| Updated By: shivaprasad.hs

Updated on:Feb 26, 2022 | 4:00 PM

ಕೈವ್: ಉಕ್ರೇನ್ ಮೇಲೆ ಗುರುವಾರ ರಷ್ಯಾ ಯುದ್ಧ ಸಾರಿದ (Russia Ukraine War) ನಂತರ ಎರಡೂ ದೇಶಗಳ ನಡುವೆ ತೀವ್ರ ಬಿಕ್ಕಟ್ಟು ನಿರ್ಮಾಣವಾಗಿದೆ. ಎರಡೂ ದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಉಕ್ರೇನ್ ರಕ್ಷಣಾ ಸಚಿವಾಲಯ ಶನಿವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ‘‘ರಷ್ಯಾದ ಪಡೆಗಳ ಆಕ್ರಮಣದ ವಿರುದ್ಧ  ರಕ್ಷಣೆಗಾಗಿ ಒಟ್ಟು 14 ವಿಮಾನಗಳು, 102 ಟ್ಯಾಂಕ್‌ಗಳು ಮತ್ತು ಹೆಚ್ಚಿನದನ್ನು ನಾಶಪಡಿಸಲಾಗಿದೆ’’ ಎಂದು ಹೇಳಿಕೊಂಡಿದೆ. ಅಲ್ಲದೇ 3,500 ಕ್ಕೂ ಹೆಚ್ಚು ‘ರಷ್ಯನ್ ಆಕ್ರಮಣಕಾರರನ್ನು’ ಕೊಲ್ಲಲಾಗಿದೆ ಎಂದೂ ತಿಳಿಸಿದೆ. ಉಕ್ರೇನ್‌ನ ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ಟ್ವಿಟರ್ ಪುಟವೊಂದು ಉಕ್ರೇನ್‌ನ ಮಿಲಿಟರಿ ತನ್ನ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯ ರಷ್ಯಾದ ಪಡೆಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಪುಟದ ಟ್ವೀಟ್ ಪ್ರಕಾರ, ರಷ್ಯಾದ 14 ವಿಮಾನಗಳು, 8 ಹೆಲಿಕಾಪ್ಟರ್‌ಗಳು, 102 ಟ್ಯಾಂಕ್‌ಗಳು, 536 ಶಸ್ತ್ರಸಜ್ಜಿತ ವಾಹನಗಳು ಮತ್ತು 15 ಫಿರಂಗಿ ವ್ಯವಸ್ಥೆಗಳನ್ನು ಉಕ್ರೇನ್ ನಾಶಪಡಿಸಿದೆ. 3,500 ರಷ್ಯಾದ ಸೈನಿಕರನ್ನು ಹತ್ಯೆ ಮಾಡಲಾಗಿದ್ದು, 200 ಜನರನ್ನು ಸೆರೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದೆ. ಈ ಟ್ವೀಟ್ ಅನ್ನು ಉಕ್ರೇನ್ ರಕ್ಷಣಾ ಸಚಿವಾಲಯವು ಮರುಟ್ವೀಟ್ ಮಾಡಿದೆ. ಆದರೆ ತನ್ನ ಸೇನೆಯ ಸಾವು-ನೋವು, ನಷ್ಟದ ಕುರಿತು ರಷ್ಯಾ ಅಧಿಕೃತವಾಗಿ ಹೇಳಿಕೊಂಡಿಲ್ಲ.

  1. ಯುದ್ಧದಲ್ಲಿ 198 ಉಕ್ರೇನಿಯನ್ನರು ಹತ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಉಕ್ರೇನ್ ತನ್ನ 198 ಜನರನ್ನು ಕಳೆದುಕೊಂಡಿದೆ ಎಂದು ಮೂಲಗಳು ಹೇಳಿವೆ. ಇದರಲ್ಲಿ ಸೈನಿಕರು, ನಾಗರಿಕರು ಸೇರಿದ್ದಾರೆ. 1115 ಜನರಿಗೆ ಗಾಯಗಳಾಗಿದ್ದು ಇದರಲ್ಲಿ 33 ಮಕ್ಕಳೂ ಸೇರಿದ್ದಾರೆ. ಆದರೆ ರಾಯಿಟರ್ಸ್ ಪ್ರಕಾರ, ನಾಗರಿಕರಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ರಷ್ಯಾವು ನಾಗರಿಕ ನೆಲೆಗಳ ಮೇಲೆ ದಾಳಿ ಮಾಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
  2. ನಾಗರಿಕ ನೆಲೆಗಳ ಮೇಲೆ ದಾಳಿ ಮಾಡುತ್ತಿಲ್ಲ ಎಂದ ರಷ್ಯಾ: ರಷ್ಯಾವು ತಾನು ನಾಗರಿಕ ನೆಲೆಗಳ ಮೇಲೆ ದಾಳಿ ಮಾಡುತ್ತಿಲ್ಲ ಎಂದು ಹೇಳಿಕೊಂಡಿದೆ. ಅದು ಹೇಳಿಕೆ ನೀಡಿರುವ ಪ್ರಕಾರ, ಇದುವರೆಗೆ ಉಕ್ರೇನ್​ನ 821 ಸೇನಾ ಯುನಿಟ್​​ಗಳನ್ನು ಧ್ವಂಸಗೊಳಿಸಲಾಗಿದೆ. 24 ಏರ್​ ಡಿಫೆನ್ಸ್​ ಕ್ಷಿಪಣಿಗಳನ್ನು ಮತ್ತು 48 ರಾಡಾರ್​ ಕೇಂದ್ರಗಳನ್ನು ಕೂಡ ಧ್ವಂಸಗೊಳಿಸಿದ್ದಾಗಿ ರಷ್ಯಾ ಹೇಳಿಕೆ ನೀಡಿದೆ.
  3. ಶಸ್ತ್ರಾಸ್ತ್ರಗಳು ಸದ್ಯದಲ್ಲೇ ಉಕ್ರೇನ್ ತಲುಪಲಿವೆ ಎಂದು ಝೆಲೆನ್ಸ್ಕಿ: ವಿವಿಧ ದೇಶಗಳಿಂದ ಶಸ್ತ್ರಾಸ್ತ್ರಗಳು ಉಕ್ರೇನ್​ಅನ್ನು ಸದ್ಯದಲ್ಲೇ ತಲುಪಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಸಂವಾದದ ನಂತರ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ‘‘ದೇಶಕ್ಕೆ ಹೆಚ್ಚಿನ ಶಸ್ತ್ರಾಸ್ತ್ರಗಳು ಬರಲಿವೆ. ನಮ್ಮ ಪಾಲುದಾರರಿಂದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಉಕ್ರೇನ್‌ಗೆ ಬರುವ ದಾರಿಯಲ್ಲಿವೆ. ಯುದ್ಧ-ವಿರೋಧಿ ಒಕ್ಕೂಟವು ಕಾರ್ಯನಿರ್ವಹಿಸುತ್ತಿದೆ!’’ ಎಂದು ಹೇಳಿದ್ದಾರೆ.
  4. ಉಕ್ರೇನ್​ಗೆ 200 ಏರ್​ಡಿಫೆನ್ಸ್​​ ರಾಕೆಟ್​ಗಳನ್ನು ಪೂರೈಸಲಿದೆ ನೆದರ್ಲ್ಯಾಂಡ್: ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​ಗೆ ನೆದರ್​ಲ್ಯಾಂಡ್ ಶೀಘ್ರದಲ್ಲೇ 200 ಏರ್​ ಡಿಫೆನ್ಸ್​ ರಾಕೆಟ್​​ಗಳನ್ನು ಪೂರೈಸಲಿದೆ. ಈ ಬಗ್ಗೆ ಡಚ್​ ಸರ್ಕಾರ ತನ್ನ ಸಂಸತ್ತಿನಲ್ಲಿ ಲಿಖಿತವಾಗಿ ಪ್ರಕಟಣೆ ಹೊರಡಿಸಿದೆ.
  5. ಅಮೇರಿಕಾದಿಂದ ಉಕ್ರೇನ್​ಗೆ 600 ಮಿಲಿಯನ್ ಡಾಲರ್ ನೆರವು: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಉಕ್ರೇನ್‌ಗೆ 600 ಮಿಲಿಯನ್‌ ಡಾಲರ್​​ನಷ್ಟು ಸಹಾಯವನ್ನು ಬಿಡುಗಡೆ ಮಾಡುವ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದೆ. ಒಟ್ಟು ಮೊತ್ತದಲ್ಲಿ, ಕನಿಷ್ಠ 250 ಮಿಲಿಯನ್ ಡಾಲರ್ ಒಟ್ಟಾರೆ ನೆರವು ಮತ್ತು ಉಳಿದ 350 ಮಿಲಿಯನ್​ ಮೊತ್ತದಲ್ಲಿ ಡಾಲರ್ ರಕ್ಷಣಾ ಇಲಾಖೆಯ ಸೇವೆಗಳು, ಮಿಲಿಟರಿ ಶಿಕ್ಷಣ ಮತ್ತು ತರಬೇತಿ ಮೊದಲಾದವುಗಳನ್ನು ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.
  6. ಉಕ್ರೇನ್​ನ ಮೊದಲ ನಗರ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡ ರಷ್ಯಾ ಸೇನೆ: ರಷ್ಯಾದ ಪಡೆಗಳು ಉಕ್ರೇನ್​ನ ಆಗ್ನೇಯ ಭಾಗದ ಮೆಲಿಟೊಪೋಲ್ ನಗರವನ್ನು ವಶಪಡಿಸಿಕೊಂಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿದೆ.

ಇದನ್ನೂ ಓದಿ:

Russia Ukraine Crisis Live: ಉಕ್ರೇನ್​ ಮೇಲೆ ರಷ್ಯಾ ದಾಳಿ; ಯುದ್ಧ ಭೂಮಿಯಿಂದ ಪಾರಾಗಿ ದೇಶಕ್ಕೆ ಮರಳುತ್ತಿರುವ 219 ಭಾರತೀಯರು

Ukraine Crisis: ರಷ್ಯಾ ಸೇನೆಯ ಆಕ್ರಮಣ ತಡೆಯಲು ಸೇತುವೆಯ ಮೇಲೆ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ

Published On - 3:57 pm, Sat, 26 February 22