ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 38ಕ್ಕೆ ಏರಿಕೆ

ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲಿ ಇಂದು 7.7 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಈ ಪ್ರಕೃತಿ ವಿಕೋಪದಿಂದಾಗಿ ನೂರಾರು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಈ ಪ್ರಬಲ ಭೂಕಂಪಕ್ಕೆ ಕನಿಷ್ಠ 38 ಜನರು ಬಲಿಯಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ. ಈ ಭೂಕಂಪದಿಂದಾಗಿ ಇಂಡೋನೇಷ್ಯಾ ಸುನಾಮಿ ಎಚ್ಚರಿಕೆಯನ್ನು ಹೊರಡಿಸಿದೆ.

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 38ಕ್ಕೆ ಏರಿಕೆ
Indonesia Earthquake
Image Credit source: TV9

Updated on: Aug 15, 2026 | 4:27 PM

ಬಾಲಿ, ಆಗಸ್ಟ್ 15: ಇಂಡೋನೇಷ್ಯಾದಲ್ಲಿ (Indonesia Earthquake) ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಂದು ಮುಂಜಾನೆ ಉಂಟಾದ ಈ ಪ್ರಬಲ ಭೂಕಂಪದ ಕುರಿತು ಸ್ಥಳೀಯ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಮುದ್ರದಾಳದಲ್ಲಿ ಸಂಭವಿಸಿದ ಈ ಭೂಕಂಪದ ನಂತರ ಆಗ್ನೇಯ ಏಷ್ಯಾದ ಇಂಡೋನೇಷ್ಯಾ ದೇಶದ ಹಲವು ಭಾಗಗಳಲ್ಲಿ ಸುನಾಮಿ ಅಲೆಗಳು ಕಂಡುಬಂದವು.

ಬಂದರು ನಗರಿ ಮಾಉಮೇರೆಯಲ್ಲಿ (Maumere) ರಕ್ಷಣಾ ಸಿಬ್ಬಂದಿ 38 ಶವಗಳನ್ನು ಹೊರಗೆ ತಂದಿದ್ದಾರೆ ಎಂದು ಎಎಫ್‌ಪಿ (AFP) ವರದಿ ಮಾಡಿದೆ. ಜೊತೆಗೆ 13 ಜನರು ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಇಬ್ಬರು ಸಿಲುಕಿಕೊಂಡಿದ್ದಾರೆ. ಮಾಉಮೇರೆಯು ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲಿರುವ ಸಿಕ್ಕಾ ರೇಜೆನ್ಸಿಯ ಪ್ರಮುಖ ಪಟ್ಟಣವಾಗಿದೆ.

ಇದನ್ನೂ ಓದಿ: ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ; 3,000ಕ್ಕೂ ಹೆಚ್ಚು ಜನ ನಾಪತ್ತೆ

ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಹತ್ತಿರದಲ್ಲಿದ್ದ ನಗೆಕಿಯೊ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ರಕ್ಷಣಾ ತಂಡಗಳಿಗೆ ಆ ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ. ಭೂಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದ್ದು, ಮತ್ತೊಂದು ರಕ್ಷಣಾ ತಂಡವು ದೋಣಿಯ ಮೂಲಕ ಆ ಪ್ರದೇಶವನ್ನು ತಲುಪಲು ಯತ್ನಿಸುತ್ತಿದೆ.

ನಗೆಕಿಯೊ ಪ್ರದೇಶದಲ್ಲಿ ಸುಮಾರು 2,000 ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ ಹಲವಾರು ಮನೆಗಳು, ಗೋದಾಮುಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us