ಯುನೈಟೆಡ್ ಕಿಂಗ್ಡಮ್ನಲ್ಲಿ (United Kingdom) ಶಾಲಾ ಬಾಲಕನೊಬ್ಬ ಸೀನಿದಾಗ (sneeze) ಅವನ ಮೂಗಿನಿಂದ (nose) ಹೊರಬಿದ್ದಿದ್ದು ಏನು ಗೊತ್ತಾ? 5-ಪೆನ್ಸ್ ನಾಣ್ಯ! ಅದರಲ್ಲೇನಿದೆ ವಿಶೇಷ ಮೂಗಲ್ಲಿ ಹಾಕ್ಕೊಂಡಿರ್ತಾನೆ ಸೀನಿದಾಗ ಹೊರ ಬಂದಿರುತ್ತದೆ ಅಂತ ನೀವು ಅಂದುಕೊಳ್ಳುತ್ತಿರಬಹುದು. ವಿಷಯ ಅದಲ್ಲ ಮಾರಾಯ್ರೇ, ಅವನು ಮೂಗಲ್ಲಿ ನಾಣ್ಯ ತೂರಿಸಿಕೊಂಡಿದ್ದು ಸತ್ಯ, ಅದರೆ ಅದು 10 ವರ್ಷಗಳ ಹಿಂದೆ!
ಮ್ಯಾಂಚೆಸ್ಟರ್ ಈವ್ನಿಂಗ್ ನ್ಯೂಸ್ ಪತ್ರಿಕೆಯ ವರದಿಯೊಂದರ ಪ್ರಕಾರ ಈಗ 14 ವರ್ಷದವನಾಗಿರುವ ಉಮೇರ್ ಖಮರ್ ಹೆಸರಿನ ಹುಡುಗ ತಾನು ಚಿಕ್ಕ ವಯಸ್ಸಿನ ಬಾಲಕನಾಗಿದ್ದಾಗ ನಾಣ್ಯವನ್ನು ಮೂಗಿನಲ್ಲಿ ತೂರಿಸಿಕೊಂಡ ಅಸ್ಪಷ್ಟ ನೆನಪಿದೆ ಎಂದು ಹೇಳಿದ್ದಾನೆ. ಮೂಗು ಸೋರುವಿಕೆಯ ತೊಂದರೆಯಿಂದಾಗಿ ಅವನನ್ನು ಅನೇಕ ಬಾರಿ ವೈದ್ಯರಲ್ಲಿಗೆ ಕರೆದೊಯ್ದಾಗ ಯಾವತ್ತೂ ನಾಣ್ಯ ಪತ್ತೆಯಾಗಿರಲಿಲ್ಲ, ಈಗಷ್ಟೇ ಅದು ಹೊರಬಿದ್ದಿದೆ ಎಂದು ಉಮೇರ್ ಅಮ್ಮ ಹೇಳಿದ್ದಾರೆ.
ಕಳೆದ ರವಿವಾರ ಅಂದರೆ ಜೂನ್ 19 ರಂದು ದಕ್ಷಿಣ ಲಂಡನ್ನಿನ ಕ್ರಾಯ್ಡನ್ ನಿವಾಸಿ ಉಮೇರ್ ನಿಗೆ ಮೂಗಿನ ಮೇಲ್ಭಾಗದಲ್ಲಿ ಏನೋ ಸಿಕ್ಕಿಕೊಂಡ ಹಾಗೆ ಭಾಸವಾಯಿತಂತೆ. ಮೂಗಲ್ಲಿ ತುಂಬಾ ನೋವಾಗುತ್ತಿದೆ ಅಂತ ತನ್ನಮ್ಮನಿಗೆ ಹೇಳಿದಾಗ ಅವರು ಜೋರಾಗಿ ಉಸಿರು ಹೊರಹಾಕುವಂತೆ ಸಲಹೆ ನೀಡಿದರಂತೆ.
ಅದಾದ ಮೇಲೆ ಒಂದು ಮೂಗಿನ ಹೊಳ್ಳೆಯಿಂದ ಉಸಿರೆಳೆದುಕೊಂಡು ಮತ್ತೊಂದರಿಂದ ಹೊರ ಹಾಕುವುದನ್ನು ಮಾಡಿದನಂತೆ. ಹಾಗೆ ಮಾಡುತ್ತಿರುವಾಗಲೇ ನಾಣ್ಯ ಅವನ ಮೂಗಿನಿಂದ ಹೊರಬಿದ್ದಿದೆ.
‘ಯಾವುದೋ ಗಟ್ಟಿಯಾದ ವಸ್ತು ನನ್ನ ಮೂಗಿನ ಮೇಲ್ಭಾಗದಲ್ಲಿ ಸಿಕ್ಕಿಕೊಂಡಿದೆ ಅಂತ ಅನಿಸಿದಾಗ ನಾನು ಮಾಳಿಗೆ ಮೇಲೆ ಹೋಗಿ ಮೂಗಿನ ಒಂದು ರಂಧ್ರದಿಂದ ಉಸಿರೆಳೆದುಕೊಂಡು ಮತ್ತೊಂದರಿಂದ ಜೋರಾಗಿ ಉಸಿರು ಹೊರಹಾಕುವುದನ್ನು ಆರಂಭಿಸಿದೆ,’ ಎಂದು ಉಮೇರ್ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.
ಆಮೇಲೆ ಎರಡೂ ಕಿವಿಗಳಲ್ಲಿ ಹತ್ತಿಯ ಬಡ್ ಗಳನ್ನು ಇಟ್ಟುಕೊಂಡು ಉಮೇರ್ ಜೋರಾಗಿ ಉಸಿರು ಹೊರಹಾಕುತ್ತಾ ಜೋರಾಗಿ ಸೀನಿದ್ದಾನೆ. ಆ ರಭಸಕ್ಕೆ 5-ಪೆನ್ಸ್ ನಾಣ್ಯ ಹೊರಬಿದ್ದಿದೆ.
‘ನಾಣ್ಯ ಹೊರಬಿದ್ದ ಬಳಿಕ ನೋವೆಲ್ಲ ಮಾಯವಾಗಿ ನನಗೆ ಹಾಯೆನಿಸಿತು’ ಎಂದು ಅವನು ಹೇಳಿದ್ದಾನೆ.
ಅವನ ಅಮ್ಮ ಅಫ್ಶೀನ್ ಖಮರ್, ‘ಅಪ್ಪಟ ಸೋಜಿಗ ಮತ್ತು ವಿಚಿತ್ರ ಸಂಗತಿ’ ಎಂದು ಘಟನೆಯನ್ನು ವಿವರಿಸಿದ್ದಾರೆ. ಎಲ್ಲವೂ ಇದ್ದಕ್ಕಿದ್ದಂತೆ ನಡೆದು ಹೋಯಿತು, ಹೀಗಾದೀತು ಅಂತ ನಾನು ನಿರೀಕ್ಷಿಸಿಯೇ ಇರಲಿಲ್ಲ. ನಾನು ಅವನಿಗೆ ಲಂಚ್ ಮಾಡಲು ಬಾ ಅಂತ ಕರೆದಾಗ ಅವನು ಮೂಗು ಹಿಡಿದಕೊಂಡೇ ಬಂದ. ಆಗಲೇ ನಾನವನಿಗೆ ಜೋರಾಗಿ ಉಸಿರು ಹೊರಹಾಕಲು ಹೇಳಿದೆ,’ ಎಂದು ಅಫ್ಶೀನ್ ಪತ್ರಿಕೆಗೆ ತಿಳಿಸಿದ್ದಾರೆ.
ಸುಮಾರು 15 ನಿಮಿಷಗಳ ನಂತರ ಅವನು ಕೆಳಗೆ ಬಂದ ಅವನು ಹಾಗೆ ನಿಂತುಕೊಂಡೇ, 5-ಪೆನ್ಸ್ ನಾಣ್ಯ ಹೊರಬಂತು ಅವನು ಹೇಳಿದಾಗ ನಾವೆಲ್ಲ ಊಟ ಮಾಡುವುದನ್ನೇ ನಿಲ್ಲಿಸಿದೆವು. ನಾನು ಒಂದು ರೀತಿಯಲ್ಲಿ ಆಘಾತಕ್ಕೊಳಗಾಗಿದ್ದೆ. ‘ನಿಜ ಹೇಳ್ತಾ ಇದ್ದೀಯಾ?’ ಅಂತ ಅವನಿಗೆ ಕೇಳಿದ ಹಾಗೆ ನೆನಪು. ಅವನು ನಿರಾಳ ಮನೋಭಾವ ಮತ್ತು ಗಂಭೀರ ಸ್ವರೂಪದ ಹುಡುಗ. ಹಾಗೆಲ್ಲ ತಮಾಷೆ ಮಾಡುವ ಸ್ವಭಾವ ಅವನದಲ್ಲ. ನನ್ನಲ್ಲಿ ಉಂಟಾದ ಆಘಾತದ ಬಗ್ಗೆ ನೀವು ಊಹಿಸಿಕೊಳ್ಳಬಹುದು,’ ಎಂದು ಅಫ್ಶೀನ್ ಪತ್ರಿಕೆಗೆ ಹೇಳಿದ್ದಾರೆ.
‘ಪುಟ್ಬಾಲ್ ಆಡುವಾಗ ಉಸಿರಾಟದ ಸಮಸ್ಯೆಯಾಗುತ್ತದೆ ಅಂತ ಅವನು ಹೇಳುತ್ತಿದ್ದ ಎಂದು ಅಫ್ಶೀನ್ ಹೇಳಿದ್ದಾರೆ. ಅವನನ್ನು ಹಲವಾರು ಬಾರಿ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದೆ, ಆದರೆ ಒಮ್ಮೆಯೂ ಅವನ ಮೂಗು ಚೆಕ್ ಮಾಡಬೇಕು ಅನ್ನೋದು ನನಗೆ ಹೊಳೆಯಲಿಲ್ಲ’ ಎಂದು ಅವರು ಹೇಳಿದ್ದಾರೆ.
‘ಉಮೇರ್ ಇಂಥ ಹುಚ್ಚಾಟಗಳನ್ನು ಮಾಡಿ ನಮ್ಮಿಂದ ಮುಚ್ಚಿಸುತ್ತಾನೆ ಅಂತ ನಾವ್ಯಾವತ್ತೂ ಭಾವಿಸಿರಲಿಲ್ಲ’ ಎಂದು ಅಫ್ಶೀನ್ ಹೇಳಿದ್ದಾರೆ.
ಅದರೆ, ಲಂಡನಲ್ಲಿರುವ ಗೈಸ್ ಮತ್ತು ಸೆಂಟ್ ಥಾಮಸ್ ಆಸ್ಪತ್ರೆಯಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞರಾಗಿರುವ ಪ್ರೊಫೆಸರ್ ಕ್ಲೈರ್ ಹಾಪ್ಕಿನ್ಸ್ ಇದೇ ಮ್ಯಾಂಚೆಸ್ಟರ್ ಈವ್ನಿಂಗ್ ನ್ಯೂಸ್ ಪತ್ರಿಕೆ ಜೊತೆ ಮಾತಾಡುತ್ತಾ, ‘ಮಕ್ಕಳಿಗೆ ಮೂಗಲ್ಲಿ ವಸ್ತುಗಳನ್ನು ತೂರಿಸಿಕೊಳ್ಳುವುದು ಒಂದು ಚಟ. 5-ಪೆನ್ಸ್ ನಾಣ್ಯದ ಸೈಜು ಮೂಗಲ್ಲಿ ತೂರಿಸಿಕೊಳ್ಳಲು ಹೇಳಿ ಮಾಡಿಸಿದ ಹಾಗಿದ್ದು ಅದು ಒಳಗಡೆ ಹೋಗಿ ಕಾಣೆಯಾದ ಬಳಿಕ ಮಕ್ಕಳು ಅದನ್ನು ಮರೆತುಬಿಡುತ್ತಾರೆ,’ ಅಂತ ಹೇಳಿದ್ದಾರೆ.
ಇದನ್ನೂ ಓದಿ: Russia Default: ಕಳೆದ 104 ವರ್ಷದಲ್ಲಿ ವಿದೇಶಿ ಸಾಲ ತೀರಿಸಲು ಮೊದಲ ಬಾರಿಗೆ ವಿಫಲವಾದ ರಷ್ಯಾ