Viral Video: ಜೋರ್ಡಾನ್‌ನ ಬಂದರಿನಲ್ಲಿ ವಿಷಾನಿಲ ಸೋರಿಕೆ; 12 ಜನ ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ
ಬಂದರಿನಲ್ಲಿ ಹಡಗಿನಲ್ಲಿ ಕ್ಲೋರಿನ್ ಟ್ಯಾಂಕ್‌ಗಳನ್ನು ಲೋಡ್ ಮಾಡುವಾಗ ಒಂದು ಕಂಟೇನರ್ ಹಡಗಿನ ಮೇಲೆ ಬಿದ್ದು ಸ್ಫೋಟಗೊಂಡಿದೆ. ಆಗ ಹಳದಿ ಬಣ್ಣದ ವಿಷಾನಿಲ ಎಲ್ಲೆಡೆ ಹರಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಜೋರ್ಡಾನ್: ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ (Aqaba Port) ಕ್ರೇನ್ನಲ್ಲಿ ಕ್ಲೋರಿನ್ ಟ್ಯಾಂಕ್‌ಗಳನ್ನು ಹಡಗಿನಲ್ಲಿ ಲೋಡ್ ಮಾಡುವಾಗ ಒಂದು ಟ್ಯಾಂಕ್ ಕೆಳಗೆ ಬಿದ್ದಿತು. ಇದರಿಂದ ವಿಷಕಾರಿ ಅನಿಲ (Toxic Gas Leak) ಸೋರಿಕೆಯಾಗಿ, ಹಳದಿ ಬಣ್ಣದ ದಟ್ಟ ಹೊಗೆ ಆವರಿಸಿತು. ಸೋರಿಕೆಯಾದ ವಿಷಾನಿಲ ಸೇವನೆಯಿಂದ 12 ಜನ ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಸಾಯನಿಕ ಸೋರಿಕೆಯಿಂದ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಕ್ರೇನ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದರಿಂದ ಕ್ಲೋರಿನ್ ರಾಸಾಯನಿಕ ತುಂಬಿದ ಟ್ಯಾಂಕ್‌ಗಳನ್ನು ಸಾಗಿಸುವಾಗ ಶೇಖರಣಾ ಕಂಟೇನರ್ ಕೆಳಗೆ ಬಿದ್ದಿದೆ. ಈ ಘಟನೆಯ ಸಿಸಿಟಿವಿ ಫೂಟೇಜ್ ಕಂಟೇನರ್ ಕೆಳಗೆ ಬೀಳುವುದನ್ನು ತೋರಿಸಿದೆ. ಬಳಿಕ ಆ ಕಂಟೇನರ್ ಹಡಗಿನ ಮೇಲೆ ಬಿದ್ದು ಸ್ಫೋಟಗೊಂಡಿದೆ. ಆಗ ಹಳದಿ ಅನಿಲದ ಹೊಗೆ ಎಲ್ಲೆಡೆ ಹರಡಿರುವುದು ಕಂಡುಬರುತ್ತದೆ. ಡಾಕ್‌ವರ್ಕ್‌ಗಳು ವಿಷಕಾರಿ ಹೊಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವುದನ್ನು ಸಹ ಕಾಣಬಹುದು.
At least 10 people have died and more than 250 injured after a toxic gas leak at Aqaba Port in Jordan. pic.twitter.com/kjTDaPkelw
— Suzanne (@suzanneb315) June 27, 2022
“ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಮಧ್ಯಾಹ್ನ ನಿಖರವಾಗಿ 15:15ಕ್ಕೆ ಅಕಾಬಾ ಬಂದರಿನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಕ್ಲೋರಿನ್ ರಾಸಾಯನಿಕವನ್ನು ಒಳಗೊಂಡಿರುವ ಟ್ಯಾಂಕ್ ಬಿದ್ದು ಸ್ಫೋಟವಾದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ” ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: ಆಂಧ್ರಪ್ರದೇಶದ ವಿಶಾಖಪಟ್ಟಣಂ: ವಿಷಕಾರಿ ಅನಿಲ ಸೋರಿಕೆಯಾಗಿ 140 ಜನರು ಅಸ್ವಸ್ಥ
ಈ ಘಟನೆಯ ನಂತರ ಬಂದರಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಅಕಾಬಾ ನಗರದ ನಿವಾಸಿಗಳಿಗೆ ಹೊರಗೆ ಬಾರದಂತೆ ಮತ್ತು ಕಿಟಕಿಗಳು, ಬಾಗಿಲುಗಳನ್ನು ಮುಚ್ಚಲು ಅಧಿಕಾರಿಗಳು ಸಲಹೆ ನೀಡಿದರು. ಕ್ಲೋರಿನ್ ಎಂಬುದು ಉದ್ಯಮದಲ್ಲಿ ಮತ್ತು ಮನೆಯ ಶುಚಿಗೊಳಿಸುವ ಉತ್ಪನ್ನಗಳಲ್ಲಿ ಬಳಸಲಾಗುವ ರಾಸಾಯನಿಕವಾಗಿದೆ. ಇದು ಸಾಮಾನ್ಯ ತಾಪಮಾನ ಮತ್ತು ಒತ್ತಡದಲ್ಲಿ ಹಳದಿ-ಹಸಿರು ಬಣ್ಣಕ್ಕೆ ತಿರುಗುವ ಅನಿಲವಾಗಿದೆ. ಕ್ಲೋರಿನ್ ಅನ್ನು ಉಸಿರಾಡಿದಾಗ, ನುಂಗಿದಾಗ ಅಥವಾ ಚರ್ಮದ ಸಂಪರ್ಕಕ್ಕೆ ಬಂದಾಗ, ದೇಹದಲ್ಲಿನ ಜೀವಕೋಶಗಳಿಗೆ ಹಾನಿ ಮಾಡುವ ಆಮ್ಲಗಳನ್ನು ಉತ್ಪಾದಿಸುತ್ತದೆ. ಈ ರಾಸಾಯನಿಕವನ್ನು ಹೆಚ್ಚಿನ ಮಟ್ಟದಲ್ಲಿ ಉಸಿರಾಡುವುದರಿಂದ ವ್ಯಕ್ತಿ ಸಾವನ್ನಪ್ಪುತ್ತಾನೆ.