ಅವಿಶ್ವಾಸ ಗೊತ್ತುವಳಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ: ಪಾಕ್ ಜನರಿಗೆ ಇಮ್ರಾನ್ ಖಾನ್ ಕರೆ

ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧ ಅವರ ಪಿ ಟಿ ಐ ಪಕ್ಷದ ಹಲವಾರು ಚುನಾಯಿತ ಪ್ರತಿನಿಧಿಗಳೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ  ತಾನು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಸಫಲವಾಗುತ್ತದೆ ಎಂದು ವಿರೋಧ ಪಕ್ಷ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಆದರೆ, ಗೊತ್ತುವಳಿ ಬಿದ್ದು ಹೋಗುತ್ತದೆ ಎಂಬ ಆತ್ಮವಿಶ್ವಾಸವನ್ನು ಇಮ್ರಾನ್ ಖಾನ್ ವ್ಯಕ್ತಪಡಿಸುತ್ತಿದ್ದಾರೆ.

ಅವಿಶ್ವಾಸ ಗೊತ್ತುವಳಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ: ಪಾಕ್ ಜನರಿಗೆ ಇಮ್ರಾನ್ ಖಾನ್ ಕರೆ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
Follow us
TV9 Web
| Updated By: Lakshmi Hegde

Updated on:Apr 03, 2022 | 9:38 AM

ನವದೆಹಲಿ: ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ನಿಸ್ಸಂದೇಹವಾಗಿ ಹತಾಷರಾಗಿದ್ದಾರೆ. ಶನಿವಾರ ಅವರು ಪಾಕಿಸ್ತಾನದ ಜನತೆಯೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ನ್ಯಾಶನಲ್ ಅಸೆಂಬ್ಲಿಯಲ್ಲಿ (National Assembly) ತಾವು ವಿಶ್ವಾಸ ಮತ (vote of confidence) ಯಾಚಿಸುವ ಮೊದಲು ದೇಶದಾದ್ಯಂತ ಪ್ರತಿಭಟನೆ ನಡೆಸುವಂತೆ ಜನರಿಗೆ ಕರೆ ನೀಡಿದ್ದಾರೆ. ಜನರೊಂದಿಗೆ ಆಯೋಜಿಸಲಾಗಿದ್ದ ಪ್ರಶ್ನೋತ್ತರ ಸಮಯದಲ್ಲಿ ಅವರು ವಿರೋಧ ಪಕ್ಷ ತಮ್ಮ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ವಿರೋಧಿಸಿ ಶನಿವಾರ ಮತ್ತು ರವಿವಾರದಂದು ಜನ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಬೇಕು ಎಂದು ಆಗ್ರಹಿಸುವಾಗ ವಿರೋಧಪಕ್ಷ ನಾಯಕರನ್ನು ವಂಚಕರೆಂದು ಉಲ್ಲೇಖಿಸಿದರು.

‘ಇಂಥ ಕೃತ್ಯಗಳು ಯಾವುದಾದರೂ ಬೇರೆ ದೇಶದಲ್ಲಿ ನಡಯುತ್ತಿದ್ದರೆ ಅಲ್ಲಿನ ಜನ ಬೀದಿಗಿಳಿಯುತ್ತಿದ್ದರು. ಶನಿವಾರ ಮತ್ತು ರವಿವಾರ ನೀವೆಲ್ಲ ಬೀದಿಗಳಿಗೆ ಬಂದು ಪ್ರತಿಭಟನೆ ನಡೆಸಬೇಕೆಂದು ಕೋರುತ್ತೇನೆ. ನಿಮ್ಮ ಮನಸಾಕ್ಷಿಗೆ ಅನುಗುಣವಾಗಿ ಮತ್ತು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೀವು ಪ್ರತಿಭಟನೆಗೆ ಇಳಿಯಬೇಕು,’ ಎಂದು ಇಮ್ರಾನ್ ಖಾನ್ ಹೇಳಿದರು.

ಪಾಕಿಸ್ತಾನದ ಯುವಜನತೆಗೂ ಇಮ್ರಾನ್ ಅವರು ಹೊರಗಿನ ಶಕ್ತಿಗಳು ತಮ್ಮ ದೇಶದಲ್ಲಿ ನಡೆಸುತ್ತಿರುವ ಕುತಂತ್ರದ ವಿರುದ್ಧ ಧ್ವನಿಯೆತ್ತಬೇಕೆಂದು ಆಗ್ರಹಿಸಿದರು. ವಿರೋಧ ಪಕ್ಷದ ನಾಯಕರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿರುವುದರಿಂದ ಅವುಗಳನ್ನು ತೊಡೆದುಹಾಕಲು ಅಧಿಕಾರ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದರು.

‘ವಿದೇಶಗಳ ಪಿತೂರಿಗಾರರು ಪಾಕಿಸ್ತಾನದ ರಾಜಕಾರಣಿಗಳನ್ನು ಕುರಿಗಳಂತೆ ಹರಾಜು ಹಾಕುತ್ತಿದ್ದಾರೆ,’ ಎಂದು ಹೇಳಿದ ಖಾನ್, ‘ಈ ವಂಚಕರನ್ನು ಪಾಕಿಸ್ತಾನದ ಯುವಜನತೆ ಕ್ಷಮಿಸಬಾರದೆಂದು,’ ಹೇಳಿದರು.

ಪಾಕಿಸ್ತಾನದಲ್ಲಿ ವಿರೋಧ ಪಕ್ಷದ ನಾಯಕರು ಇಮ್ರಾನ್ ಖಾನ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ ಬಳಿಕ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧ ಅವರ ಪಿ ಟಿ ಐ ಪಕ್ಷದ ಹಲವಾರು ಚುನಾಯಿತ ಪ್ರತಿನಿಧಿಗಳೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ  ತಾನು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಸಫಲವಾಗುತ್ತದೆ ಎಂದು ವಿರೋಧ ಪಕ್ಷ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಆದರೆ, ಗೊತ್ತುವಳಿ ಬಿದ್ದು ಹೋಗುತ್ತದೆ ಎಂಬ ಆತ್ಮವಿಶ್ವಾಸವನ್ನು ಇಮ್ರಾನ್ ಖಾನ್ ವ್ಯಕ್ತಪಡಿಸುತ್ತಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನದ ನ್ಯಾಶನಲ್ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಅವರ ಸರಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯನ್ನು ಏಪ್ರಿಲ್ 3ರವರಗೆ ಮುಂದೂಡಲಾಗಿದೆ. ಗುರುವಾರದಂದು ನ್ಯಾಶನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಹಾಕಿದ ಕೂಡಲ ಸದನದ ಕಲಾಪಗಳನ್ನು ಏಪ್ರಿಲ್ 3 ರವರೆಗೆ ಮುಂದೂಡಲಾಗಿತ್ತು.

ಪಾಕಿಸ್ತಾನದ ನ್ಯಾಶನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ ಆ ದೇಶದ ಮೂರನೇ ಪ್ರಧಾನ ಮಂತ್ರಿಯಾಗಿದ್ದಾರೆ.

ಇದನ್ನೂ ಓದಿ:  Imran Khan ಇಮ್ರಾನ್ ಖಾನ್ ರಾಷ್ಟ್ರವನ್ನುದ್ದೇಶಿಸಿ ಮಾಡಲಿದ್ದ ಭಾಷಣ ರದ್ದು; ಶಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ ಎಂದ ಬಿಲಾವಲ್ ಭುಟ್ಟೋ

Published On - 9:14 am, Sun, 3 April 22