Imran Khan: 69 ವರ್ಷದ ಇಮ್ರಾನ್​ ಖಾನ್​ಗೆ ಪಾಕ್​ನಲ್ಲಿ ಇನ್ನೇನಿದೆ ಆಟ ಬಾಕಿ? ಭರವಸೆ ಇರೋದು ಬಾಜ್ವಾ ಮೇಲಷ್ಟೇ

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ಗೆ ಏಪ್ರಿಲ್ 3ನೇ ತಾರೀಕಿನಂದು ಅವಿಶ್ವಾಸ ನಿರ್ಣಯದ ಅಗ್ನಿಪರೀಕ್ಷೆ. 69 ವರ್ಷದ ಈ ಮಾಜಿ ಕ್ರಿಕೆಟಿಗನ ಪಾಲಿಗೆ ರಾಜಕೀಯದಲ್ಲಿ ಇನ್ನು ಹೆಚ್ಚಿಗೆ ಆಟ ಉಳಿದಂತಿಲ್ಲ.

Imran Khan: 69 ವರ್ಷದ ಇಮ್ರಾನ್​ ಖಾನ್​ಗೆ ಪಾಕ್​ನಲ್ಲಿ ಇನ್ನೇನಿದೆ ಆಟ ಬಾಕಿ? ಭರವಸೆ ಇರೋದು ಬಾಜ್ವಾ ಮೇಲಷ್ಟೇ
ಇಮ್ರಾನ್ ಖಾನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Apr 03, 2022 | 8:42 AM

ಆ ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಪೂರ್ಣಾವಧಿ ಮುಗಿಸಿಲ್ಲ. ಅಷ್ಟೇ ಅಲ್ಲ, ಯಾವ ಪ್ರಧಾನಿಯೂ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಯೂ ಆಗಿಲ್ಲ. ಆದರೆ ಅವಿಶ್ವಾಸದ ಸವಾಲು ಎದುರಿಸುತ್ತಿರುವ ಮೂರನೇ ಪ್ರಧಾನಿ ಈಗಿನವರು. ಗೊತ್ತಾಯ್ತಾ ಇದು ಯಾವ ದೇಶ ಎಂಬ ಸಂಗತಿ. ಹೌದು, ಅದು ಪಾಕಿಸ್ತಾನ. ಈಗ ಅಲ್ಲಿನ ಪ್ರಧಾನಿ ಆಗಿರುವ ಇಮ್ರಾನ್​ ಖಾನ್ (Imran Khan)​ ಕಾಲಿನ ಮೇಲೆ ಸುಡು ಸುಡು ನೀರು ಬಿದ್ದವರಂತೆ ಚಡಪಡಿಸಿ ಹೋಗುತ್ತಿದ್ದಾರೆ. ವಿಪಕ್ಷಗಳೆಲ್ಲ ಒಟ್ಟಾಗಿ ಸೇರಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಏಪ್ರಿಲ್​ 3ರಂದು ಪಾಕಿಸ್ತಾನದ ಸಂಸತ್​ನಲ್ಲಿ ಆಖೈರು ತೀರ್ಮಾನ ಆಗಲಿದೆ. ಇದರಲ್ಲಿ ಕುತೂಹಲ ಏನೂ ಉಳಿದಿಲ್ಲ. ಇಮ್ರಾನ್ ಖಾನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಒಗಾಯಿಸಿ ಆಚೆ ಬರುವುದೊಂದೇ ಮಾರ್ಗ. ಆದರೆ ಈ ಮನುಷ್ಯನ ಹೇಳಿಕೆಗಳು, ಭೀಕರವಾದ ಭಾಷಣಗಳು ಕೇಳುತ್ತಿದ್ದರೆ ಅಲ್ಲಿನ ಸೇನೆ ಹಾಗೂ ಅದರ ಮುಖ್ಯಸ್ಥ ಜನರಲ್ ಬಾಜ್ವಾ ಬಗ್ಗೆ ಅಪರಿಮಿತವಾದ ವಿಶ್ವಾಸ ಇಟ್ಟಂತಿದೆ.

ಪಾಕಿಸ್ತಾನ ಅಂತೊಂದು ದೇಶ ಅಸ್ತಿತ್ವಕ್ಕೆ ಬಂದ 73 ಚಿಲ್ಲರೆ ವರ್ಷದಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಆಡಳಿತ ನಡೆಸಿದ್ದೆಲ್ಲ ಮಿಲಿಟರಿ ಸರ್ವಾಧಿಕಾರಿಗಳೇ. ಕಳೆದ ಒಂದು ವಾರದಲ್ಲಿ ಈಗಿನ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಮೂರ್ಮೂರು ಸಲ ಇಮ್ರಾನ್​ ಖಾನ್​ರನ್ನು ಭೇಟಿಯಾದ ಸುದ್ದಿ ಇದೆ. ಇನ್ನು ಇಮ್ರಾನ್ ಮಾತು ಕೇಳುವುದಾದರೆ, ಇಂಗ್ಲಿಷಿನ “ಎಸ್ಟಾಬ್ಲಿಷ್​ಮೆಂಟ್” ಎಂಬ ಪದವನ್ನು ಬಳಸಿ, ತನಗೆ ಮೂರು ಆಯ್ಕೆ ನೀಡಿದೆ ಎಂದಿದ್ದಾರೆ. ಏನದು ಆಯ್ಕೆ ಅಂತ ನೋಡೋದಾದರೆ ರಾಜೀನಾಮೆ, ಅವಿಶ್ವಾಸ (ಮತ) ಅಥವಾ ಚುನಾವಣೆ ಎಂದಿದ್ದಾರೆ. ಇಮ್ರಾನ್ ಖಾನ್ ಹೇಳುತ್ತಿರುವುದು ಅದೇ ಪಾಕ್ ಸೈನ್ಯದ ಬಗ್ಗೆ ಅನ್ನೋದು ಬಹುತೇಕ ಖಚಿತ. ಆದರೆ ಈ ಬಗ್ಗೆ ಸೈನ್ಯವೂ ತುಟಿ ಬಿಚ್ಚಲ್ಲ. ಈ ಹಿಂದೆ ಕೂಡ ಇಮ್ರಾನ್​ ಆಯ್ಕೆ ಆಗಿದ್ದೇ ಸೈನ್ಯದ ಕೃಪೆಯಿಂದ ಎನ್ನಲಾಗಿತ್ತು. ಆದರೆ ಅದನ್ನು ಸೇನೆ, ಇಮ್ರಾನ್ ನಿರಾಕರಿಸಿ, ಸುಮ್ಮನಾಗಿಸಿದ್ದರು. ಈಗ ತನ್ನನ್ನು ಅದೇ ಸೇನೆ ರಕ್ಷಿಸಬಹುದು ಎಂಬ ಭರವಸೆ ಇಮ್ರಾನ್​ ಖಾನ್​ಗೆ.

ಅಮೆರಿಕ ಮಸಲತ್ತು ತನ್ನ ವಿರುದ್ಧ ಅಮೆರಿಕ ಮಸಲತ್ತು ಮಾಡಿದೆ, ಪಾಕಿಸ್ತಾನದ ವಿರೋಧ ಪಕ್ಷದ ಜನಪ್ರತಿನಿಧಿಗಳನ್ನು ಆಡುಗಳ ರೀತಿಯಲ್ಲಿ 15-20 ಬಿಲಿಯನ್​ ನೀಡಿ ಖರೀದಿಸಿದೆ, ಇದು ಪಾಕಿಸ್ತಾನವನ್ನು ಸರ್ವನಾಶ ಮಾಡುವ ತಂತ್ರ. ಯುವಕರೇ ಈ ಅವಿಶ್ವಾಸ ಮತದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಅಂತ 69 ವರ್ಷ ವಯಸ್ಸಿನ ಇಮ್ರಾನ್ ಹೇಳಿದ್ದಾರೆ. ಯಾವಾಗ ಇಮ್ರಾನ್ ಖಾನ್ ಏನೇನೋ ಮಾತನಾಡುವುದಕ್ಕೆ ತೊಡಗಿದರೋ ಅಲ್ಲಿನ ಸರ್ಕಾರದ ಕಾನೂನು ವಿಭಾಗದಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ. ಅಧಿಕೃತ ರಹಸ್ಯ ಕಾಯ್ದೆ ಅಡಿಯಲ್ಲಿ ಬರುವ ವರ್ಗೀಕೃತ ವಿಷಯಗಳನ್ನು ಮಾತನಾಡಿದರೋ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಶಾಶ್ವತವಾಗಿ ಪಾಕಿಸ್ತಾನದ ಅಸೆಂಬ್ಲಿಗೆ ಸ್ಪರ್ಧಿಸುವ ಅರ್ಹತೆಯನ್ನೇ ಕಳೆದುಕೊಳ್ಳುತ್ತೀರಾ ಎಂದು ಹೇಳಲಾಗಿದೆ.

ಇರಲಿ, ತನ್ನದೊಂದು ಪಂಚ್ ಡೈಲಾಗ್ ಎಂಬಂತೆ, ನಾನೊಬ್ಬ ಕ್ರಿಕೆಟರ್. ಕೊನೆ ಬಾಲ್ ತನಕ ಸೋಲನ್ನು ಒಪ್ಪುವುದಿಲ್ಲ ಎಂದಿದ್ದಾರೆ ಇಮ್ರಾನ್ ಖಾನ್. ನಿಜ, ಪಾಕಿಸ್ತಾನಕ್ಕೆ 1992ರಲ್ಲಿ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಅವರೇ. ಆದರೆ ಆ ಚರಿಷ್ಮಾವನ್ನು ಪಾಕ್​ ಪ್ರಧಾನಿಯಾದ ನಂತರ ಪೂರ್ತಿ ಹಾಳು ಮಾಡಿಕೊಂಡಿದ್ದಾರೆ. ಆ ದೇಶದ ಆರ್ಥಿಕ ಸ್ಥಿತಿ ಹೇಗಿದೆಯೆಂದರೆ, ಅವರಿವರ ಮನೆಯಿಂದ ಹಾಲು, ಸಕ್ಕರೆ, ಸಾಸಿವೆ, ಬೇಳೆ, ಅಕ್ಕಿ ಅಂತ ಕಡ ತರುತ್ತಾರಲ್ಲ, ಹಾಗೆ ಎಲ್ಲಿ ಸಾಲ ಸಿಕ್ಕರೂ ತಂದು ದೇಶದ ಮರ್ಯಾದೆ ಉಳಿಸಿಕೊಳ್ಳಬೇಕಿದೆ. ಮಿಲಿಯನ್- ಬಿಲಿಯನ್ ಡಾಲರ್​ಗಟ್ಟಲೆ ಸಾಲ. ತನ್ನದೇ ರಾಯಭಾರ ಕಚೇರಿ ಸಿಬ್ಬಂದಿಗೆ ವೇತನ ಪಾವತಿಸಲು ಕಷ್ಟ. ಅಮೆರಿಕ ಪ್ರವಾಸದ ವೇಳೆ ಹೋಟೆಲ್​ನಲ್ಲಿ ಉಳಿದುಕೊಳ್ಳುವುದಕ್ಕೂ ಹೆಚ್ಚಿನ ಖರ್ಚು ಎಂದು ಇಮ್ರಾನ್ ಖಾನ್ ಲೆಕ್ಕ ಹಾಕುವಂತಾಗಿದ್ದು ಮರೆಯುವುದಕ್ಕೆ ಸಾಧ್ಯವೇ ಇಲ್ಲ.

ಇಮ್ರಾನ್ ಖಾನ್ ಬರುವ ಮುಂಚೆ ಪಾಕಿಸ್ತಾನ ಸಮೃದ್ಧವಾಗಿತ್ತಾ? ಹಾಗಂತ ಇಮ್ರಾನ್ ಖಾನ್ ಬರುವ ಮುಂಚೆ ಪಾಕಿಸ್ತಾನ ಸಮೃದ್ಧವಾಗಿತ್ತಾ ಅಂತೀರಾ? ಖಂಡಿತಾ ಇಲ್ಲ. ಆದರೆ ಇಂಥ ಮಾನಗೇಡಿ ಸ್ಥಿತಿ ಇರಲಿಲ್ಲ. ಅಲ್ಲಿ- ಇಲ್ಲಿ ಬೇಡಿ ತಂದು, ದಿನ ದೂಡಬೇಕಾದ ಕರ್ಮ ಇರಲಿಲ್ಲ. ಅದಕ್ಕೆ ಅಫ್ಘಾನಿಸ್ತಾನದಿಂದ ಅಮೆರಿಕವು ಸೇನೆ ಹಿಂದಕ್ಕೆ ಕರೆಸಿಕೊಂಡಿದ್ದು ಕಾರಣ ಇರಬಹುದು. ಅದುವರೆಗೂ ಅಮೆರಿಕಕ್ಕೆ ಬೆಣ್ಣೆ ಹಚ್ಚಿಕೊಂಡೇ ಹೇಗೋ ಅದುವರೆಗಿನ ಅಧಿಕಾರಸ್ಥರು, ರಾಜಕಾರಣಿಗಳು ಹಾಲು-ಮೊಸರು-ತುಪ್ಪ ಅಂತ ಯಥೇಚ್ಛವಾಗಿ ಉಂಡೆದ್ದರು. ಈಗ ಇಮ್ರಾನ್ ಖಾನ್​ ಅಂತೂ ಅಮೆರಿಕ ಪಾಲಿಗೆ ಉಂಡೆದ್ದ ಮೇಲೆ ಉಳಿದ ಬಾಳೆಲೆಗೆ ಸಮಾನ. ಪಾಕಿಸ್ತಾನಕ್ಕೆ ಸಹಾಯ ಮಾಡುವ ಚೀನಾ ಎಷ್ಟು ಸಮಯ ಕೈ ಹಿಡಿಯಲು ಸಾಧ್ಯ? ಇರೋದನ್ನೆಲ್ಲ ಚೀನಾಗೆ ಮಾರಿಕೊಳ್ಳುತ್ತಾ ಬಂದಿರುವ ಪಾಕಿಸ್ತಾನಕ್ಕೆ ಭಯೋತ್ಪಾದನೆ ಎಂಬ ಟ್ಯೂಮರ್ ಬೇರೆ ಇದೆ.

ನಯಾ ಪಾಕಿಸ್ತಾನ್ ಬಗ್ಗೆ ಘೋಷಣೆಗಳನ್ನು ಮಾಡಿದ್ದ ಇಮ್ರಾನ್​ ಖಾನ್​ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದ ಮರುಕ್ಷಣ ವಿರೋಧಿಗಳಿಂದ ಈ ಮಾಜಿ ಕಪ್ತಾನನ ಬೇಟೆ ಶುರುವಾಗುತ್ತದೆ. ಹೇಗೆ ಈ ಹಿಂದಿನ ಪ್ರಧಾನಿಗಳು, ಸೇನಾ ನಾಯಕರು ಲಂಡನ್​ಗೆ ಜೂಟ್ ಹೇಳಿದರೋ ಅದೇ ರೀತಿ ಇಮ್ರಾನ್​ ಖಾನ್​ ಸಹ ಮಾಡುತ್ತಾರೇನೋ? ಗೊತ್ತಿಲ್ಲ. ಏಕೆಂದರೆ, ಅಧಿಕಾರ ಕಳೆದುಕೊಂಡ ಮೇಲೆ ಪಾಕಿಸ್ತಾನದಲ್ಲಂತೂ ಬದುಕು ಬಹಳ ಕಷ್ಟವಾಗುತ್ತದೆ. ಆದರೂ ಏಪ್ರಿಲ್ 3ರ ಭಾನುವಾರ ಪಾಕ್ ಸಂಸತ್ತಿನಲ್ಲಿ ಏನೋ ಮ್ಯಾಜಿಕ್ ಆಗಬಹುದು ಎಂಬ ನಿರೀಕ್ಷೆ ಇಮ್ರಾನ್ ಖಾನ್ ಪರವಾಗಿ ಇರುವವರಿಗೇನೋ ಇದೆ. ಆದರೆ ಸನ್ನಿವೇಶವಂತೂ ಸುಲಭ ಇಲ್ಲ.

ಇದನ್ನೂ ಓದಿ: 45 ನಿಮಿಷಗಳ ಭಾಷಣದಲ್ಲಿ ‘ನಾನು, ನನಗೆ ನನ್ನ’ ಎಂದು 213 ಬಾರಿ ಹೇಳಿದ ಇಮ್ರಾನ್ ಖಾನ್; ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್