ವಾಷಿಂಗ್ಟನ್: ಅಮೆರಿಕಾದಲ್ಲಿ (United States) ಜನವರಿ 11ರಂದು ತಾಂತ್ರಿಕ ದೋಷದಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನ ಕಂಪ್ಯೂಟರ್ನಲ್ಲಿ ದೋಷ ಕಂಡುಬಂದಿದ್ದರಿಂದ ಅಮೆರಿಕಾದಲ್ಲಿ ಎಲ್ಲ ವಿಮಾನಗಳನ್ನೂ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಲೈವ್ ಪ್ರೈಮರಿ ಡೇಟಾಬೇಸ್ ಮತ್ತು ಬ್ಯಾಕಪ್ ಡೇಟಾಬೇಸ್ ನಡುವಿನ ಸಿಂಕ್ರೊನೈಸೇಶನ್ ಅನ್ನು ಸರಿಪಡಿಸಲು ಸಿಬ್ಬಂದಿ ಕೆಲಸ ಮಾಡುತ್ತಿರುವಾಗ ಸಮಸ್ಯೆ ಸಂಭವಿಸಿತ್ತು. ಆಗ ಗುತ್ತಿಗೆ ಸಿಬ್ಬಂದಿ ಆಕಸ್ಮಿಕವಾಗಿ ಫೈಲ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್ಎಎ)ನಲ್ಲಿ ತಾಂತ್ರಿಕ ದೋಷದಿಂದ ಕಂಪ್ಯೂಟರ್ ಸ್ಥಗಿತಗೊಂಡ ನಂತರ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸಲಾಗಿತ್ತು. ಜನವರಿ 11ರ ಬೆಳಗ್ಗೆ 6:30ಕ್ಕೂ ಮುನ್ನ ಅಮೆರಿಕಾಕ್ಕೆ ಬರುವ ಅಥವಾ ಹೊರಗೆ ಹೋಗುವ ಸುಮಾರು 5,400 ವಿಮಾನಗಳು ವಿಳಂಬವಾಗಿತ್ತು. ಕಂಪ್ಯೂಟರ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ರಾಷ್ಟ್ರೀಯ ವಾಯುಪ್ರದೇಶದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ನಾವು ಪರಿಶೀಲನೆ ನಡೆಸುತ್ತಿದ್ದೇವೆ ಮತ್ತು ಈಗ ಸಿಸ್ಟಮ್ ಅನ್ನು ಮರುಲೋಡ್ ಮಾಡುತ್ತಿದ್ದೇವೆ ಎಂದು ಎಫ್ಎಎ ತಿಳಿಸಿತ್ತು.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ; ಅಲ್ಲೇ ಇದ್ದ ಸೋನು ಸೂದ್ ಮಾಡಿದ್ದೇನು?
ಎಫ್ಎಎನ ತಾಂತ್ರಿಕ ದೋಷದಿಂದ ಪೈಲಟ್ಗಳು ವಿಮಾನ ನಿಲ್ದಾಣದ ಸಂಪರ್ಕ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಕೆಲಕಾಲ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು. ಸೈಬರ್ ದಾಳಿಯಿಂದ ಈ ರೀತಿ ಆಗಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ, ಶ್ವೇತಭವನ ಈ ಸುದ್ದಿಯನ್ನು ತಳ್ಳಿಹಾಕಿತ್ತು. ಸುಮಾರು 5,400ಕ್ಕೂ ಹೆಚ್ಚು ವಿಮಾನಗಳು ಹಾರಾಟವನ್ನು ನಿಲ್ಲಿಸಿದ್ದವು. ಇದಕ್ಕೆ ಕಾರಣವೇನೆಂದು ತಿಳಿಯಲು ತನಿಖಾ ತಂಡವನ್ನು ರಚಿಸಲಾಗಿತ್ತು.
ಇದನ್ನೂ ಓದಿ: Pee-Gate: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾಗೆ 4 ತಿಂಗಳು ವಿಮಾನಯಾನ ನಿಷೇಧ
ಈ ಬಗ್ಗೆ ಗುರುವಾರ ಸ್ಪಷ್ಟನೆ ನೀಡಿರುವ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA), ಪ್ರಾಥಮಿಕ ಪರಿಶೀಲನೆಯ ಪ್ರಕಾರ ಗುತ್ತಿಗೆ ಸಿಬ್ಬಂದಿ “ಆಕಸ್ಮಿಕವಾಗಿ ಫೈಲ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇದುವರೆಗೆ ಸೈಬರ್ ದಾಳಿ ಅಥವಾ ದುರುದ್ದೇಶಪೂರಿತ ಉದ್ದೇಶದ ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದು ಹೇಳಿದೆ. ಅಲ್ಲದೆ, ಈ ಘಟನೆಯ ಬಗ್ಗೆ ಇನ್ನೂ ತನಿಖೆ ಮುಂದುವರೆಯುತ್ತಿದೆ.