ಜಿನೀವಾ: ಫೆಬ್ರುವರಿ 24ರಂದು ರಷ್ಯನ್ ಸೇನೆ (Russian troops) ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ನಂತರ ಉಕ್ರೇನಿನ ಮಕ್ಕಳು ಪೈಕಿ ಅರ್ಧಕ್ಕೂ ಹೆಚ್ಚಿನವರು ಬೇರೆ ದೇಶಗಳಿಗೆ ಇಲ್ಲವೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿರುವರೆಂದು ವಿಶ್ವಸಂಸ್ಥೆ (UN) ಗುರುವಾರ ಹೇಳಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಯುದ್ಧವು ಉಕ್ರೇನಿನ 75 ಲಕ್ಷ ಮಕ್ಕಳ ಪೈಕಿ 43 ಲಕ್ಷ ಮಕ್ಕಳು ದೇಶ ತೊರೆಯುವಂತೆ ಮಾಡಿದೆ, ಎಂದು ವಿಶ್ವಸಂಸ್ಥೆಯ ಮಕ್ಕಳ ಅಂಗ ಯೂನಿಸೆಫ್ (UNICEF) ಹೇಳಿದೆ.
ರಷ್ಯಾದ ಅತಿಕ್ರಮಣ ಶುರುವಾದ ಬಳಿಕ ದೇಶ ತೊರೆದಿರುವ ಇಲ್ಲವೇ ತಮ್ಮ ಮನೆಗಳನ್ನು ಬಿಟ್ಟು ಬೇರೊಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿರುವ ಸುಮಾರು ಒಂದು ಕೋಟಿ ಜನರಲ್ಲಿ ಮಕ್ಕಸ ಸಂಖ್ಯೆ ಸುಮಾರು ಅರ್ಧದಷ್ಟಿದೆ. ಸುಮಾರು 18 ಲಕ್ಷ ಮಕ್ಕಳು ನಿರಾಶ್ರಿತರಾಗಿ ಬೇರೆ ಬೇರೆ ದೇಶಗಳಲ್ಲಿ ಆಶ್ರಯ ಪಡೆದಿದ್ದರೆ, ಸುಮಾರು 25 ಲಕ್ಷ ಮಕ್ಕಳು ಯುದ್ಧಗ್ರಸ್ತ ಪ್ರದೇಶದಲ್ಲಿದ್ದ ತಮ್ಮ ಮನೆಗಳನ್ನು ತೊರೆದು ಸುರಕ್ಷಿತವಾದ ಪ್ರದೇಶಗಳ ಕಡೆ ಹೋಗಿದ್ದಾರೆ ಎಂದು ಯುನಿಸೆಫ್ ಹೇಳಿದೆ.
ಎರಡನೇ ಮಹಾಯುದ್ಧದ ನಂತರ ಅತಿದೊಡ್ಡ ಪ್ರಮಾಣದಲ್ಲಿ ಮಕ್ಕಳ ಸ್ಥಳಾಂತರಕ್ಕೆ ರಷ್ಯಾ ಉಕ್ರೇನ್ ಮೇಲೆ ಸಾರಿರುವ ಯುದ್ಧ ಕಾರಣವಾಗಿದೆ ಎಂದು ಯುನಿಸೆಫ್ ಮುಖ್ಯಸ್ಥೆ ಕ್ಯಾಥರೀನ್ ರಸ್ಸೆಲ್ ಹೇಳಿದ್ದಾರೆ. ‘ಈ ಕಠೋರ ಸತ್ಯ ಮುಂದಿನ ಪೀಳಿಗೆಗಳ ಶಾಶ್ವತ ಪರಿಣಾಮಗಳನ್ನು ಬೀರಬಹುದಾಗಿದೆ,’ ಎಂದು ರಸ್ಸೆಲ್ ಎಚ್ಚರಿಸಿದ್ದಾರೆ.
ಮಕ್ಕಳ ಸುರಕ್ಷತೆ, ಯೋಗಕ್ಷೇಮ ಮತ್ತು ಅಗತ್ಯ ಸೇವೆಗಳ ಲಭ್ಯತೆ ಮೊದಲಾದವೆಲ್ಲ ಅವ್ಯಾಹತ ಮತ್ತು ಭಯಾನಕ ಹಿಂಸಾಚಾರದ ಬೆದರಿಕೆಗೆ ಒಳಗಾಗಿವೆ, ಎಂದು ಅವರು ಹೇಳಿದ್ದಾರೆ. ರಷ್ಯಾದ ಯುದ್ಧ ಟ್ಯಾಂಕರ್ ಗಳು ಉಕ್ರೇ ಗಡಿ ಪ್ರವೇಶಿಸಿದ ಒಂದು ತಿಂಗಳ ನಂತರ ರಸ್ಸೆಲ್ ಈ ಕಾಮೆಂಟ್ಗಳನ್ನು ಮಾಡಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿ ಈಗಾಗಲೇ ಸಾವಿರಾರು ಉಕ್ರೇನ್ ನಾಗರಿಕರು ಬಲಿಯಾಗಿದ್ದಾರೆ.
ಯುದ್ಧದಲ್ಲಿ 81 ಮಕ್ಕಳು ಹತರಾಗಿದ್ದಾರೆ ಮತ್ತು 108 ಮಕ್ಕಳು ಗಾಯಗೊಂಡಿರರುವರೆಂದು ಹೇಳಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯು ವಾಸ್ತವದಲ್ಲಿ ಈ ಸಂಖ್ಯೆ ಜಾಸ್ತಿಯಾಗಿರುವ ಸಾಧ್ಯತೆ ಇದೆಯೆಂದು ಹೇಳಿದೆ. ಈಗ ಜಾರಿಯಲ್ಲಿರುವ ಯುದ್ಧವು ನಾಗರಿಕ ಮೂಲಭೂತ ಸೌಕರ್ಯಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ ಮತ್ತು ಅವರಿಗೆ ಸೌಲಭ್ಯಗಳಿಂದ ವಂಚಿತರನ್ನಾಗಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಹೇಳಿಕೆಯೊಂದರ ಪ್ರಕಾರ ರಷ್ಯಾದ ಸೇನೆಯು ಆಸ್ಪತ್ರೆಗಳು, ಕ್ಲಿನಿಕ್ ಗಳು ಮತ್ತು ಅಂಬ್ಯುಲೆನ್ಸ್ ಗಳು ಸೇರಿದಂತೆ ಉಕ್ರೇನಿನ 64 ಆರೋಗ್ಯ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿದೆ. ಉಕ್ರೇನಿನ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 500 ಕ್ಕೂ ಹೆಚ್ಚು ಶಾಲೆಗಳು, ಶಿಕ್ಷಣ ಸೌಲಭ್ಯಗಳು ರಷ್ಯನ್ ಸೇನೆಯ ದಾಳಿಯಲ್ಲಿ ಹಾಳಾಗಿವೆ.
ಪ್ರಸ್ತುತವಾಗಿ ಉಕ್ರೇನಿನ 14 ಲಕ್ಷ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ ಮತ್ತು ಸಮಾರು 46 ಲಕ್ಷ ಜನಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದ್ದು ಕೆಲ ದಿನಗಳ ನಂತರ ಅದರಿಂದಲೂ ವಂಚಿತರಾಗುವ ಅಪಾಯವನ್ನು ಅವರು ಎದುರಿಸುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ. 2 ರಿಂದ 6 ವರ್ಷದೊಳಗಿನ ಸುಮಾರು ನಾಲ್ಕೂವರೆ ಲಕ್ಷ ಮಕ್ಕಳು ಆಹಾರದ ಕೊರತೆಯಿಂದ ಕಂಗಾಲಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗ ತಿಳಿಸಿದೆ.
ನವಜಾತ ಶಿಶುಗಳು , ಬೆಳೆಯುತ್ತಿರುವ ಮಕ್ಕಳಿಗೆ ನೀಡಲಾಗುವ ಪೋಲಿಯೋ ಮತ್ತು ಮೀಸಲ್ಸ್ ಸೇರಿದಂತೆ ನಿಯಮಿತ ಲಸಿಕಾಕರಣ ಪ್ರಮಾಣದಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ ಅಂತ ಯುನಿಸೆಫ್ ಹೇಳಿದೆ. ಈ ಸ್ಥಿತಿಯು ಲಸಿಕೆಗಳಿಂದ ತ್ವರಿತವಾಗಿ ತಡೆಗಟ್ಟಬಹುದಾದ ರೋಗಗಳು ಧುತ್ತನೆ ತಲೆದೋರುವುದಕ್ಕೆ ಕಾರಣವಾಗಬಹುದು ಅದರಲ್ಲೂ ವಿಶೇಷವಾಗಿ ಜನರು ಹಿಂಸಾಚಾರದಿಂದ ತಪ್ಪಿಸಿಕೊಂಡು ಆಶ್ರಯ ಪಡೆಯುತ್ತಿರುವ ಜನದಟ್ಟಣೆಯ ಪ್ರದೇಶಗಳಲ್ಲಿ,’ ಎಂದು ಅದು ಹೇಳಿದೆ.
ವಿಶ್ವಸಂಸ್ಥೆಯ ಏಜೆನ್ಸಿಯು ತಕ್ಷಣ ಕದನ ವಿರಾಮ ಘೋಷಿಸಿ ಮಕ್ಕಳನ್ನು ಹಾನಿಯಿಂದ ರಕ್ಷಿಸಬೇಕೆಂಬ ತನ್ನ ಮನವಿಯನ್ನು ಪುನರುಚ್ಚರಿಸಿತು. ‘ಮಕ್ಕಳು ಅವಲಂಬನೆಯ ಮೂಲಸೌಕರ್ಯಗಳಾದ ಶಾಲೆಗಳು, ಆಸ್ಪತ್ರೆಗಳು ಮತ್ತು ನಾಗರಿಕರಿಗೆ ಆಶ್ರಯ ನೀಡುವ ಕಟ್ಟಡಗಳು ಯಾವತ್ತೂ ದಾಳಿಗೆ ಒಳಗಾಗಬಾರದು,’ ಎಂದು ಯುನಿಸೆಫ್ ಒತ್ತಿ ಹೇಳಿದೆ.
ಕೆಲವೇ ವಾರಗಳಲ್ಲಿ ಈ ಯುದ್ಧವು ಉಕ್ರೇನ್ ಮಕ್ಕಳ ಬದುಕನ್ನು ವಿನಾಶಗೊಳಿಸಿಬಿಟ್ಟಿದೆ, ಎಂದು ರಸ್ಸೆಲ್ ಹೇಳಿದ್ದಾರೆ. ‘ಅತ್ಯಂತ ತ್ವರಿತವಾಗಿ ಮಕ್ಕಳಿಗೆ ಶಾಂತಿ ಮತ್ತು ರಕ್ಷಣೆ ಬೇಕಾಗಿದೆ, ಅವರಿಗೆ ಅವರ ಹಕ್ಕುಗಳನ್ನು ಮರಳಿ ನೀಡಬೇಕಾಗಿದೆ,’ ಎಂದು ರಸ್ಸೆಲ್ ಹೇಳಿದ್ದಾರೆ.