ಪಾಕ್ ಪ್ರಧಾನಿ ವಿರುದ್ಧ ಅವಿಶ್ವಾಸ ಗೊತ್ತುವಳಿ: ಏನಾದ್ರೂ ಸರಿ ರಾಜೀನಾಮೆ ಕೊಡಲ್ಲ ಎಂದ ಇಮ್ರಾನ್ ಖಾನ್
ಪಾಕ್ ಸಂಸತ್ತಿನ ವಿಶ್ವಾಸಮತ ಯಾಚನೆ ಕಲಾಪದ ಬಗ್ಗೆ ಭಾರತೀಯರಲ್ಲಿಯೂ ಕುತೂಹಲ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ರಾಜಕೀಯ ವಲಯದ ನಾಟಕೀಯ ಬೆಳವಣಿಗೆಗಳ ಕುರಿತು ನೀವು ತಿಳಿಯಬೇಕಾದ 10 ಅಂಶಗಳಿವು.
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಕಠಿಣ ಪರೀಕ್ಷೆಯೊಂದನ್ನು ಎದುರಿಸುತ್ತಿದ್ದಾರೆ. ಎಲ್ಲ ಪ್ರತಿಪಕ್ಷಗಳೂ ಭಿನ್ನಮತ ಮರೆತು ಒಂದಾಗಿವೆ. ಇಂದು (ಮಾರ್ಚ್ 25) ಪಾಕಿಸ್ತಾನದ ಸಂಸತ್ತು ಸಭೆ ಸೇರಲಿದೆ. ಇಮ್ರಾನ್ ಖಾನ್ ಅವರ ತೆಹ್ರೀಕ್-ಎ-ಇನ್ಸಾಫ್ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳು ದೂರಿವೆ. ಹಲವು ಸಂಸದರು ಪಕ್ಷಾಂತರ ಮಾಡಿದ್ದು, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳು ಇಮ್ರಾನ್ ಖಾನ್ ಹೆಣಗುತ್ತಿದ್ದಾರೆ. ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ನಡೆಯುವ ಯಾವುದೇ ಬೆಳವಣಿಗೆಯು ಭಾರತದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪಾಕ್ ಸಂಸತ್ತಿನ ವಿಶ್ವಾಸಮತ ಯಾಚನೆ ಕಲಾಪದ ಬಗ್ಗೆ ಭಾರತೀಯರಲ್ಲಿಯೂ ಕುತೂಹಲ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ರಾಜಕೀಯ ವಲಯದ ನಾಟಕೀಯ ಬೆಳವಣಿಗೆಗಳ ಕುರಿತು ನೀವು ತಿಳಿಯಬೇಕಾದ 10 ಅಂಶಗಳಿವು.
- ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ‘ಏನು ಬೇಕಾದರೂ ಆಗಲಿ, ನಾನು ರಾಜೀನಾಮೆ ಕೊಡುವುದಿಲ್ಲ’ ಎಂದು ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ.. ಹೋರಾಟವಿಲ್ಲದೆ ನಾನು ಎಂದಿಗೂ ಶರಣಾಗುವುದಿಲ್ಲ. ಕೆಲ ದ್ರೋಹಿಗಳ ಒತ್ತಡವನ್ನು ಸುಮ್ಮನೆ ಏಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
- ಪಾಕಿಸ್ತಾನದ ಸಂಸತ್ತು ಗುರುವಾರ ರಾತ್ರಿ 15 ಅಂಶಗಳ ಅಜೆಂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಯೂ ಸೇರಿದೆ.
- ಆರ್ಥಿಕತೆಯನ್ನೂ ಇಮ್ರಾನ್ ಖಾನ್ ಸಮರ್ಪಕವಾಗಿ ನಿರ್ವಹಿಸಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಮನೆಮಾಡಿದ್ದು, ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ವಿರೋಧ ಪಕ್ಷಗಳು ಒಗ್ಗೂಡಲು ಸಹ ಇದು ಮುಖ್ಯಕಾರಣವಾಗಿದೆ.
- ಇಮ್ರಾನ್ ಖಾನ್ ಅವರ 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಸದಸ್ಯರು ಇತ್ತೀಚೆಗೆ ಪಕ್ಷಾಂತರ ಮಾಡಿದ್ದರು. ಹಣದುಬ್ಬರ ನಿಯಂತ್ರಿಸಲು ಇಮ್ರಾನ್ ವಿಫಲರಾಗಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ಪಕ್ಷಾಂತರ ಮಾಡಿರುವವರಿಗೆ ಆಜೀವ ನಿಷೇಧ ಹೇರಬೇಕು ಎಂದು ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಬೇಕು ಎಂದು ಭಿನ್ನಮತೀಯರನ್ನು ಕೋರಿದ್ದರು.
- ಪಾಕಿಸ್ತಾನದ ಸಂಸತ್ತು 342 ಸದಸ್ಯಬಲ ಹೊಂದಿದೆ. ಅಧಿಕಾರಕ್ಕೆ ಬರಲು 172 ಸದಸ್ಯ ಬಲ ಬೇಕು. ಇಮ್ರಾನ್ ಖಾನ್ರ ಪಿಟಿಐ ನೇತೃತ್ವದ ಮೈತ್ರಿಕೂಟವು 179 ಸದಸ್ಯಬಲ ಹೊಂದಿದೆ. ಪಿಟಿಐ ಪಕ್ಷದ 155 ಸಂಸದರು ಸಂಸತ್ತಿನಲ್ಲಿದ್ದಾರೆ.
- ಅವಿಶ್ವಾಸ ಗೊತ್ತುವಳಿಯಲ್ಲಿ ಪಾಲ್ಗೊಳ್ಳುವುದಾಗಿ ಮೂರು ಪ್ರಮುಖ ಮಿತ್ರಪಕ್ಷಗಳು ಹೇಳಿಕೆ ನೀಡಿವೆ. ಪಾಕಿಸ್ತಾನದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು 163 ಸ್ಥಾನಗಳನ್ನು ಹೊಂದಿವೆ. ಪಿಟಿಐ ಪಕ್ಷ ತೊರೆದಿರುವ ಸಂಸದರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದರೆ ಇಮ್ರಾನ್ ಖಾನ್ ಸರ್ಕಾರವನ್ನು ಸುಲಭವಾಗಿ ಬೀಳಿಸಬಹುದು ಎಂದು ಹೇಳಲಾಗುತ್ತಿದೆ.
- ಪಾಕಿಸ್ತಾನದ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ.
- ಪಾಕಿಸ್ತಾನದಲ್ಲಿ ಮುಂದಿನ ಮಹಾಚುನಾವಣೆಯು 2023ರಂದು ನಡೆಯಬೇಕಿತ್ತು. ಆದರೆ ಅವಧಿಗೆ ಮೊದಲೇ ಚುನಾವಣೆ ನಡೆಯಬಹುದು ಎಂದು ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
- ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಯಾಗಿದ್ದರೂ ಅಲ್ಲಿನ ಮಿಲಿಟರಿಯ ಬೆಂಬಲ ಇರುವವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ. ಇಮ್ರಾನ್ ಖಾನ್ ಪ್ರಧಾನಿಯಾಗಲು ಸಹ ಅಲ್ಲಿನ ಮಿಲಿಟರಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಆಡಳಿತ ಮತ್ತು ರಾಜಕಾರಣದ ಆಂತರಿಕ ವಿಚಾರಗಳಲ್ಲಿ ಅಲ್ಲಿನ ಮಿಲಿಟರಿ ಹಲವು ವರ್ಷಗಳಿಂದ ಮಧ್ಯಪ್ರವೇಶಿಸುತ್ತಿದೆ.
- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರೋಧಿಸಿದ್ದರು. ಇದೀಗ ಮತ್ತೆ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಪಾಕಿಸ್ತಾನದ ಆಡಳಿತಗಾರರು ಒತ್ತಡದಲ್ಲಿದ್ದಾಗಲೆಲ್ಲಾ ಭಾರತವನ್ನು ದೂರುವ ಮೂಲಕ ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಯತ್ನಿಸುವುದು ವಾಡಿಕೆಯೇ ಆಗಿದೆ.
ಇದನ್ನೂ ಓದಿ: ಪಾಕಿಸ್ತಾನ ಪ್ರಧಾನಿಯನ್ನು ಬೆನ್ನತ್ತಿದ ಸಂಕಷ್ಟ; 50 ಸಾವಿರ ರೂ.ದಂಡ ವಿಧಿಸಿದ ಚುನಾವಣಾ ಆಯೋಗ
ಇದನ್ನೂ ಓದಿ: ಪಾಕಿಸ್ತಾನಕ್ಕೆ ಅನಧಿಕೃತವಾಗಿ ಔಷಧ ರಫ್ತು; ಬೆಂಗಳೂರಿನ ಎನ್ಸಿಬಿ ಅಧಿಕಾರಿಗಳಿಂದ ನಾಲ್ವರ ಬಂಧನ
Published On - 11:44 am, Fri, 25 March 22