ಪಾಕಿಸ್ತಾನದ ಸಂಸತ್ ಅಧಿವೇಶನ ಮುಂದೂಡಿಕೆ, ಮಾರ್ಚ್ 28ಕ್ಕೆ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡಿಸದೆ ಶುಕ್ರವಾರ ಪಾಕ್ ಸಂಸತ್ ಅಧಿವೇಶವನ ಮುಂದೂಡಲಾಗಿದೆ. ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆ ಡಾನ್ ವರದಿ ಮಾಡಿದೆ.
ಪಾಕಿಸ್ತಾನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡಿಸದೆ ಶುಕ್ರವಾರ ಮುಂದೂಡಲಾಗಿದೆ. ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ (Pakistan) ಮೂಲದ ಮಾಧ್ಯಮ ಸಂಸ್ಥೆ ಡಾನ್ ವರದಿ ಮಾಡಿದೆ. ಪ್ರಧಾನಿ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಸರ್ಕಾರವು ಆರ್ಥಿಕ ಬಿಕ್ಕಟ್ಟು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿತ್ತು. ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್, ಪಿಪಿಪಿ ಅಧ್ಯಕ್ಷ ಬಿಲಾಲ್ವಾಲ್ ಭುಟ್ಟೋ-ಜರ್ದಾರಿ ಮತ್ತು ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ಸದಸ್ಯರು ಇಸ್ಲಾಮಾಬಾದ್‌ನ ಸಂಸತ್ ಭವನದಲ್ಲಿ ಉಪಸ್ಥಿತರಿದ್ದರು ಎಂದು ಡಾನ್ ವರದಿ ಮಾಡಿದೆ. 69 ವರ್ಷದ ಖಾನ್ ಅವರು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾರೆ ಮತ್ತು ಕೆಲವು ಪಾಲುದಾರರು ಪಕ್ಷಗಳನ್ನು ಬದಲಾಯಿಸಲು ನಿರ್ಧರಿಸಿದರೆ ಅವರನ್ನು ತೆಗೆದುಹಾಕಬಹುದು. ಅವರು ತಮ್ಮ ಸುಮಾರು ಎರಡು ಡಜನ್ ಶಾಸಕರು ಮತ್ತು ಮಿತ್ರ ಪಕ್ಷಗಳಿಂದ ಬಂಡಾಯವನ್ನು ಎದುರಿಸುತ್ತಿದ್ದಾರೆ ಮತ್ತು ಅವರಿಗೆ ಬೆಂಬಲವನ್ನು ನೀಡಲು ಹಿಂಜರಿಯುತ್ತಾರೆ. ಪಾಕಿಸ್ತಾನದ ಯಾವೊಬ್ಬ ಪ್ರಧಾನಿಯೂ ಇದುವರೆಗೆ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ.
ತಮ್ಮ ಸರ್ಕಾರವನ್ನು ಉಳಿಸಲು ಹೆಣಗಾಡುತ್ತಿರುವ ಪ್ರಧಾನಿ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಕಾರಣ ಪ್ರಸ್ತುತ ರಾಜಕೀಯ ಅನಿಶ್ಚಿತತೆಯನ್ನು ಕೊನೆಗೊಳಿಸಲು ದೇಶದಲ್ಲಿ ಆರಂಭಿಕ ಚುನಾವಣೆಗಳನ್ನು ನಡೆಸಬಹುದು ಎಂದು ಗೃಹ ಸಚಿವ ಶೇಖ್ ರಶೀದ್ ಗುರುವಾರ ಹೇಳಿದರು. ಮುಂದಿನ ಸಾರ್ವತ್ರಿಕ ಚುನಾವಣೆಯು 2023 ರ ಅಂತ್ಯದ ವೇಳೆಗೆ ನಡೆಯಲಿದೆ.
ಎರಡು ದಿನಗಳ ಹಿಂದೆ ಇಮ್ರಾನ್ ಖಾನ್ ಪಾಕಿಸ್ತಾನದ ಅಸೆಂಬ್ಲಿಯಲ್ಲಿ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. “ಯಾವುದೇ ಸಂದರ್ಭದಲ್ಲೂ ನಾನು ರಾಜೀನಾಮೆ ನೀಡುವುದಿಲ್ಲ. ನಾನು ಕೊನೆಯ ಎಸೆತದವರೆಗೂ ಆಡುತ್ತೇನೆ. ಅವರು ಇನ್ನೂ ಒತ್ತಡದಲ್ಲಿರುವುದರಿಂದ ನಾನು ಒಂದು ದಿನ ಮುಂಚಿತವಾಗಿ ಅವರನ್ನು ಅಚ್ಚರಿಗೊಳಿಸುತ್ತೇನೆ” ಎಂದು ಇಮ್ರಾನ್ ಖಾನ್ ಪಾಕಿಸ್ತಾನದ ಸುದ್ದಿ ಚಾನೆಲ್ ಜಿಯೋ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಅದೇ ವೇಳೆ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ಯಶಸ್ವಿಯಾಗುವುದಿಲ್ಲ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ. “ನನ್ನ ಟ್ರಂಪ್ ಕಾರ್ಡ್ ಎಂದರೆ ನಾನು ಇನ್ನೂ ನನ್ನ ಯಾವುದೇ ಕಾರ್ಡ್‌ಗಳನ್ನು ಹಾಕಿಲ್ಲ” ಎಂದು ಅವರು ಹೇಳಿದರು. “ಮನೆಯಲ್ಲಿ ಕೂರುತ್ತೇನೆ ಎಂಬ ತಪ್ಪು ಕಲ್ಪನೆ ಯಾರಿಗೂ ಬೇಡ. ನಾನು ರಾಜೀನಾಮೆ ನೀಡುವುದಿಲ್ಲ. ನಾನೇಕೆ ನೀಡಲಿ? ಕಳ್ಳರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಬೇಕೇ?” ಅಧಿಕಾರದಿಂದ ಕೆಳಗಿಳಿಯಲು ಒತ್ತಾಯಿಸಿದರೆ ನಾನು ಮೌನವಾಗಿರುವುದಿಲ್ಲ ಎಂದು ಖಾನ್ ಹೇಳಿದ್ದಾರೆ. ಪ್ರಬಲವಾದ ಪಾಕಿಸ್ತಾನದ ಸೇನೆಯೊಂದಿಗೆ ವೈಮನಸ್ಸು ಹೊಂದಿರುವ ವರದಿಗಳನ್ನು ಪಾಕಿಸ್ತಾನದ ಪ್ರಧಾನಿ ನಿರಾಕರಿಸಿದ್ದಾರೆ. “ಸೇನೆ ಇಲ್ಲದೇ ಇದ್ದಿದ್ದರೆ ದೇಶ ಮೂರು ಭಾಗಗಳಾಗಿ ಒಡೆಯುತ್ತಿತ್ತು. ಸೇನೆಯನ್ನು ರಾಜಕೀಯ ಮಾಡುವುದಕ್ಕಾಗಿ ಟೀಕಿಸಬಾರದು ಎಂದು ಖಾನ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಡಿಜಿ-ಐಎಸ್‌ಐ ಲೆಫ್ಟಿನೆಂಟ್ ಜನರಲ್ ನವೀದ್ ಅಹ್ಮದ್ ಅಂಜುಮ್ ಸೇರಿದಂತೆ ಉನ್ನತ ಹಿರಿಯ ಜನರಲ್‌ಗಳು ಒಐಸಿ ಸಮ್ಮೇಳನದ ನಂತರ ಇಮ್ರಾನ್ ಖಾನ್‌ಗೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಯಾವುದೇ ಪರಿಸ್ಥಿತಿಯಲ್ಲಿಯೂ ರಾಜೀನಾಮೆ ನೀಡುವುದಿಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್
Published On - 1:46 pm, Fri, 25 March 22