ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದಿಂದ ಅಫ್ಘಾನ್ನಲ್ಲಿ ನೆಲೆಸಿರುವವರು ದೇಶ ಬಿಟ್ಟು ಹೋಗತೊಡಗಿದ್ದಾರೆ. ಸಾವಿರಾರು ಜನರು ಸಿಕ್ಕ ವಿಮಾನವನ್ನೆಲ್ಲ ಹತ್ತಿಕೊಂಡು ದೇಶ ಬಿಟ್ಟು ಹೋಗುತ್ತಿದ್ದಾರೆ. ಈ ನಡುವೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಒಂದೇ ಬಾರಿಗೆ ವಿಮಾನ ಹತ್ತಲು ಹೋಗಿ ಕಾಲ್ತುಳಿತಕ್ಕೆ ಒಳಗಾಗಿ, ವಿಮಾನದ ಚಕ್ರದ ಹಿಡಿಕೆಗಳಲ್ಲಿ ಜೋತಾಡುತ್ತಾ ಟೇಕಾಫ್ ಆದ ವಿಮಾನದೊಂದಿಗೆ ಮೇಲಕ್ಕೇರಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿತ್ತು. ಅಕ್ಷರಶಃ ಸಂತೆಯಂತಾಗಿದ್ದ ಕಾಬೂಲ್ ವಿಮಾನ ನಿಲ್ದಾಣದಲ್ಲಿ 7 ತಿಂಗಳ ಮಗುವೊಂದು ನಾಪತ್ತೆಯಾಗಿದೆ.
ಕಾಬೂಲ್ನಲ್ಲಿ ವಾಸವಾಗಿರುವ ಆ ಹೆಣ್ಣು ಮಗುವಿನ ಅಪ್ಪ-ಅಮ್ಮ ದೇಶ ಬಿಟ್ಟು ತೆರಳುವ ಗಡಿಬಿಡಿಯಲ್ಲಿ ತಮ್ಮ 7 ತಿಂಗಳ ಹೆಣ್ಣು ಮಗುವನ್ನು ಕಳೆದುಕೊಂಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಲೂ ಬಂದೂಕು ಹಿಡಿದು ನಿಂತಿರುವ ಸೈನಿಕರ ನಡುವೆ ಆ ಮಗುವನ್ನು ಹುಡುಕುವುದೇ ಕಷ್ಟಕರವಾಗಿದೆ. ಬಾಕ್ಸ್ನಲ್ಲಿ ಮಲಗಿದ್ದ 7 ತಿಂಗಳ ಮಗುವಿನ ಫೋಟೋವನ್ನು ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಯಾರಾದರೂ ಈ ಮಗುವನ್ನು ನೋಡಿದರೆ ಮಾಹಿತಿ ನೀಡಿ ಎಂದು ಪೋಸ್ಟ್ ಮಾಡಿರುವುದು ಅಲ್ಲಿನ ಭಯಾನಕ ಸ್ಥಿತಿಗೆ ಸಾಕ್ಷಿ ಹೇಳುವಂತಿದೆ.
7 ತಿಂಗಳ ಮಗುವೊಂದು ಅಪ್ಪ-ಅಮ್ಮನಿಂದ ಬೇರೆಯಾಗಿ ಅಳುತ್ತಾ ಕುಳಿತಿರುವ ಫೋಟೋಗಳು ಭಾರೀ ವೈರಲ್ ಆಗಿವೆ. ಆ ಮಗುವಿನ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆ ಮಗುವಿನ ಬಗ್ಗೆ ಇನ್ನೂ ಯಾವ ಮಾಹಿತಿಯೂ ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಿಕ್ಕಿಲ್ಲ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಗಲಾಟೆ, ಹಿಂಸಾಚಾರದಲ್ಲಿ 10ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆ ಮಗು ಜೀವಂತವಾಗಿದೆಯೋ ಅಥವಾ ಕಾಲ್ತುಳಿತದಲ್ಲಿ ಸಾವನ್ನಪ್ಪಿದೆಯೋ ಎಂಬುದು ಕೂಡ ಇನ್ನೂ ಗೊತ್ತಾಗಿಲ್ಲ.
A couple living in PD-5 #Kabul blame that their 7 Months Baby went missing from Kabul Airport yesterday during the chaos. Up to this instance they couldn’t find him. @AsvakaNews trying to help them find their baby through missing announcements on social media. pic.twitter.com/TDsJEXUXAR
— Aśvaka – آسواکا News Agency (@AsvakaNews) August 17, 2021
ಕಾಬೂಲ್‌ನಿಂದ ವಿಮಾನಗಳು ಹೊರಡುತ್ತಿದ್ದಂತೆ ಅಫ್ಘಾನ್ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದ ಜನರು ಸಿಕ್ಕ ಸಿಕ್ಕ ವಿಮಾನಗಳನ್ನು ಹತ್ತಿಕೊಂಡಿದ್ದಾರೆ. ಈ ವೇಳೆ ವಿಮಾನದ ಚಕ್ರಕ್ಕೂ ಸಿಲುಕಿ ಹಲವರು ಗಾಯಗೊಂಡಿದ್ದರು. ಇನ್ನು ಕೆಲವರು ಸಾವನ್ನಪ್ಪಿದ್ದರು. ಕಾಬೂಲ್‌ನಿಂದ ಅಮೆರಿಕಕ್ಕೆ ಬಂದ ಸಿ-17 ಗ್ಲೋಬ್ಮಾಸ್ಟರ್ ವಿಮಾನದ ಚಕ್ರದ ಸುತ್ತ ಮನುಷ್ಯರ ರಕ್ತ, ಮಾಂಸದ ತುಂಡುಗಳು ಅಂಟಿಕೊಂಡಿದ್ದವು.
ಕಾಬೂಲ್‌ನಿಂದ ಟೇಕಾಫ್ ಆಗಿದ್ದ ವಿಮಾನದಿಂದ ಕೆಳಗೆ ಬಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಘಟನೆ ನಡೆದಿದೆ. ವಿಮಾನದ ಟೈರ್ ಸಮೀಪದ ಹಿಡಿಕೆಗೆ ಕಟ್ಟಿಕೊಂಡಿದ್ದ ಈ ಪ್ರಯಾಣಿಕರು ವಿಮಾನ ಟೇಕಾಫ್ ಆದ ನಿಮಿಷಗಳ ಬಳಿಕ ಕೆಳಗೆ ಬಿದ್ದಿದ್ದರು. ಈ ವಿಮಾನವು ಕಾಬೂಲ್‌ನಿಂದ ಅಮೆರಿಕಕ್ಕೆ ತೆರಳುತ್ತಿತ್ತು. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲೀಬಾನ್ ಉಗ್ರರ ವಶಕ್ಕೆ ಬರುತ್ತಿದ್ದಂತೆ ಅಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ. ಸಾವಿರಾರು ಜನರು ದೇಶಬಿಟ್ಟು ಹೊರಗೆ ಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ನೂಕಾಟ-ತಳ್ಳಾಟ ಸಾಮಾನ್ಯವಾಗಿತ್ತು. ಜನರನ್ನು ನಿಯಂತ್ರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿತ್ತು.
ಇದನ್ನೂ ಓದಿ: Afghanistan: ತಾಲಿಬಾನಿಗಳಿಗೆ ತಲೆಬಾಗಲ್ಲ; ಈಗ ನಾನೇ ನಿಮ್ಮ ಅಧ್ಯಕ್ಷ: ಆಫ್ಘನ್ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಘೋಷಣೆ
ಅಫ್ಘಾನಿಸ್ತಾನದಿಂದ ಬಂದ ಅಮೆರಿಕದ ಮಿಲಿಟರಿ ವಿಮಾನದ ಚಕ್ರದ ಸುತ್ತ ಅಂಟಿತ್ತು ಮನುಷ್ಯರ ಪಳೆಯುಳಿಕೆ!
(Afghanistan Crisis: 7 month old Baby Separated from parents during chaos at Kabul Airport photo goes viral)
Published On - 4:54 pm, Wed, 18 August 21