ನಮಗೆ ಸಹಾಯ ಮಾಡಿದವರನ್ನು ತಾಲಿಬಾನಿಗಳ ಮರ್ಜಿಗೆ ಬಿಡಲು ಆಗದು: ಅಫ್ಘಾನಿಸ್ತಾನದ 20 ಸಾವಿರ ಮಂದಿಯ ಪುನರ್ವಸತಿಗೆ ಬ್ರಿಟನ್ ನಿರ್ಧಾರ

ನಮ್ಮ ಪ್ರಯತ್ನದಲ್ಲಿ ಜೊತೆಗೂಡಿದ್ದವರ ಋಣ ನಮ್ಮ ಮೇಲೆ ಇದೆ. ನಾವು ಅವರನ್ನು ತಾಲಿಬಾನಿಗಳ ಮರ್ಜಿಗೆ ಬಿಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ.

ನಮಗೆ ಸಹಾಯ ಮಾಡಿದವರನ್ನು ತಾಲಿಬಾನಿಗಳ ಮರ್ಜಿಗೆ ಬಿಡಲು ಆಗದು: ಅಫ್ಘಾನಿಸ್ತಾನದ 20 ಸಾವಿರ ಮಂದಿಯ ಪುನರ್ವಸತಿಗೆ ಬ್ರಿಟನ್ ನಿರ್ಧಾರ
ತಾಲಿಬಾನ್ ಹೋರಾಟಗಾರ (ಎಡಚಿತ್ರ) ಮತ್ತು ಬೊರಿಸ್ ಜಾನ್ಸನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 18, 2021 | 6:51 PM

ಲಂಡನ್: ತಾಲಿಬಾನ್ ಆಡಳಿತಕ್ಕೆ ಹೆದರಿ ಅಫ್ಘಾನಿಸ್ತಾನದಿಂದ ಹೊರಗೆ ಬರುತ್ತಿರುವ 20 ಸಾವಿರ ಮಂದಿಗೆ ಬ್ರಿಟನ್​ನಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಮೊದಲ ವರ್ಷ 5 ಸಾವಿರ ಮಂದಿಯನ್ನು ಸ್ವೀಕರಿಸುತ್ತೇವೆ. ದೀರ್ಘಾವಧಿಯಲ್ಲಿ ಒಟ್ಟು 20 ಸಾವಿರ ಮಂದಿಗೆ ನೆಲೆ ಒದಗಿಸುತ್ತೇವೆ ಎಂದು ಬ್ರಿಟನ್ ಹೇಳಿದೆ. ಅಫ್ಘಾನಿಸ್ತಾನ ಸರ್ಕಾರ ಪತನದ ಬಗ್ಗೆ ಚರ್ಚಿಸಲು ಬುಧವಾರ ವಿಶೇಷ ಅಧಿವೇಷನವೂ ನಡೆಯಿತು. ರಜೆಯಲ್ಲಿದ್ದ ಸಂಸದರಿಗೆ ಸಂಸತ್ತಿಗೆ ಬರುವಂತೆ ಆಹ್ವಾನ ಕಳಿಸಲಾಗಿತ್ತು.

ಅಫ್ಘಾನಿಸ್ತಾನದಲ್ಲಿರುವ ಬ್ರಿಟನ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು 900 ಬ್ರಿಟಿಷ್ ಸೈನಿಕರನ್ನು ನಿಯೋಜಿಸಲಾಗಿದೆ. ಕಾಬೂಲ್​ನಲ್ಲಿರುವ ಬ್ರಿಟನ್​ನ ದೂತಾವಾಸ ಕಚೇರಿಯ ಸಿಬ್ಬಂದಿಗೆ ಸ್ವದೇಶಕ್ಕೆ ಮರಳುವಂತೆ ಸೂಚಿಸಲಾಗಿದೆ. ತಾಲಿಬಾನ್ ಆಡಳಿತದಿಂದ ತೊಂದರೆ ಅನುಭವಿಸುವ ಅಫ್ಘಾನ್ ಮಹಿಳೆಯರು, ಮಕ್ಕಳು ಮತ್ತು ಇತರರಿಗೆ ಮೊದಲ ಆದ್ಯತೆ ನೀಡಲಾಗುವುದು. ಅವರಿಗೆ ಬ್ರಿಟನ್​ನಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ವರ್ಷಗಳಲ್ಲಿ ಪುನರ್ವಸತಿ ನಿರ್ಧಾರವನ್ನು ಪರಾಮರ್ಶಿಸಲಾಗುವುದು. ದೀರ್ಘಾವಧಿಯಲ್ಲಿ ಗರಿಷ್ಠ 20 ಸಾವಿರ ಮಂದಿಗೆ ನಾವು ಆಶ್ರಯ ನೀಡಲು ಉದ್ದೇಶಿಸಿದ್ದೇವೆ ಎಂದು ಗೃಹ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. 2014ರಿಂದ ಈವರೆಗೆ ಸಿರಿಯಾದ ಒಟ್ಟು 20,000 ನಿರಾಶ್ರಿತರಿಗೆ ಬ್ರಿಟನ್ ನೆಲೆ ಒದಗಿಸಿದೆ. ಇದೇ ಮಾದರಿಯಲ್ಲಿ ಅಫ್ಘಾನ್ ನಿರಾಶ್ರಿತರಿಗೂ ನೆಲೆ ಒದಗಿಸಲು ಬ್ರಿಟನ್ ಮುಂದಾಗಿದೆ.

ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್​ ಡಬ್ಲ್ಯು ಬುಷ್ ಘೋಷಿಸಿದ್ದ ‘ಭಯೋತ್ಪಾದನೆಯ ವಿರುದ್ಧ ಯುದ್ಧ’ದಲ್ಲಿ (War on Terror) ಬ್ರಿಟನ್ ಮುಖ್ಯ ಸಹವರ್ತಿ ರಾಷ್ಟ್ರವಾಗಿತ್ತು. ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಬ್ರಿಟನ್ 9,500 ಸಿಬ್ಬಂದಿಯನ್ನು ನಿಯೋಜಿಸಿತ್ತು. ಅಫ್ಘಾನಿಸ್ತಾನದ 137 ಸ್ಥಳಗಳಲ್ಲಿ ಬ್ರಿಟನ್​ ಸೇನಾ ನಿಯೋಜನೆ ಇತ್ತು. ಅಫ್ಘಾನಿಸ್ತಾನದಲ್ಲಿ ನಡೆಸಿದ ಯುದ್ಧಕ್ಕೆ ಬ್ರಿಟನ್​ ಸಾಕಷ್ಟು ಬೆಲೆಯನ್ನೂ ತೆರಬೇಕಾಯಿತು. ಬ್ರಿಟನ್​ನ 450 ಸೇನಾ ಸಿಬ್ಬಂದಿ ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದರು.

ಬ್ರಿಟನ್​ನಿಂದ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಕಾರಣವಾದ ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ನೇತೃತ್ವದಲ್ಲಿ ಅಂತಿಮಗೊಂಡಿದ್ದ ಶಾಂತಿ ಮಾತುಕತೆಯ ಬಗ್ಗೆ ಬ್ರಿಟನ್​ನ ಹಿರಿಯ ಮಿಲಿಟರಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತಪ್ಪು ನಿರ್ಧಾರದ ಕಾರಣದಿಂದಲೇ ತಾಲಿಬಾನ್ ವಿರೋಧವೇ ಇಲ್ಲದೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹಲವರು ವಿಶ್ಲೇಷಿಸಿದ್ದಾರೆ.

ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್​ ದೇಶಗಳು ಅಫ್ಘಾನಿಸ್ತಾನದಲ್ಲಿ ಹೊಂದಿರುವ ಗುಪ್ತಚರ ವ್ಯವಸ್ಥೆಯನ್ನು ಬಳಸಿಕೊಂಡು ತಾಲಿಬಾನ್​ನಿಂದ ಆತಂಕ ಎದುರಿಸುತ್ತಿರುವವರನ್ನು ಗುರುತಿಸಲಾಗುವುದು. ತಾಲಿಬಾನ್ ನಾಯಕರು ಕ್ಷಮಾದಾನ ಘೋಷಿಸಿದ್ದು, ಪ್ರತೀಕಾರ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ವಿಶ್ವದ ಯಾವ ದೇಶಗಳೂ ನಂಬುತ್ತಿಲ್ಲ.

ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು ಜಿ7 ನಾಯಕರ ಸಭೆ ಕರೆಯಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗ್ರಹಿಸಿದ್ದಾರೆ. ವಿವಿಧ ದೇಶಗಳು ಈ ನಿಟ್ಟಿನಲ್ಲಿ ಸಮಗ್ರವಾಗಿ ಯೋಚಿಸಬೇಕು. ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬೇಕು ಎಂದು ಸಲಹೆ ಮಾಡಿದ್ದಾರೆ. ಅಫ್ಘಾನಿಸ್ತಾನವನ್ನು ಉತ್ತಮ ಸ್ಥಳವಾಗಿಸಬೇಕು ಎಂಬ ನಮ್ಮ ಪ್ರಯತ್ನದಲ್ಲಿ ಜೊತೆಗೂಡಿದ್ದವರ ಋಣ ನಮ್ಮ ಮೇಲೆ ಇದೆ. ನಾವು ಅವರನ್ನು ತಾಲಿಬಾನಿಗಳ ಮರ್ಜಿಗೆ ಬಿಡಲು ಸಾಧ್ಯವಿಲ್ಲ ಎಂದು ಬೊರಿಸ್ ಜಾನ್ಸನ್ ಹೇಳಿದ್ದಾರೆ.

ಬ್ರಿಟನ್ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಈ ನಿರ್ಧಾರವು ಸಾಕಷ್ಟು ಜೀವಗಳನ್ನು ಉಳಿಸಲಿದೆ ಎಂದು ತಿಳಿಸಿದ್ದಾರೆ.

(Britain Decides to Take 20000 Afghans Refugees creates Under Resettlement Scheme)

ಇದನ್ನೂ ಓದಿ: Taliban In Afghanistan: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಇದ್ದರೆ ಇಡೀ ಜಗತ್ತಿಗೆ ಕೊರೊನಾ ಇದ್ದಂತೆ ಏಕೆ?

ಇದನ್ನೂ ಓದಿ: ವಿಡಿಯೊ: ತಾಲಿಬಾನ್ ಧ್ವಜ ಕಿತ್ತೆಸೆದು ಜಲಾಲಾಬಾದ್ ನಿವಾಸಿಗಳ ಆಕ್ರೋಶ: ಪ್ರತಿಭಟನೆ ನಡೆಸಿದವರ ಮೇಲೆ ಗುಂಡು ಹಾರಾಟ