ಅಫ್ಘಾನಿಸ್ತಾನದಲ್ಲಿ ನಾಳೆ ನೂತನ ಸರ್ಕಾರ ರಚನೆ ಸಾಧ್ಯತೆ; ತಾಲಿಬಾನ್- ಹಕ್ಕಾನಿ ನೆಟ್​ವರ್ಕ್​ ನಡುವೆ ಪೈಪೋಟಿ

ಪಾಕಿಸ್ತಾನ ಬೆಂಬಲಿತ ಹಕ್ಕಾನಿ ನೆಟ್ ವರ್ಕ್ ಹಾಗೂ ಅಫ್ಘಾನ್ ಮೂಲದ ತಾಲಿಬಾನಿಗಳ ಮಧ್ಯೆ ಹೊಸ ಸರ್ಕಾರದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಅಫ್ಘಾನಿಸ್ತಾನದಲ್ಲಿ ನಾಳೆ ನೂತನ ಸರ್ಕಾರ ರಚನೆ ಸಾಧ್ಯತೆ; ತಾಲಿಬಾನ್- ಹಕ್ಕಾನಿ ನೆಟ್​ವರ್ಕ್​ ನಡುವೆ ಪೈಪೋಟಿ
ಖಲೀಲ್ ಹಕ್ಕಾನಿ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 02, 2021 | 9:32 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ರಚನೆಯ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಬೂಲ್‌ನ ಪ್ರೆಸಿಡೆನ್ಸಿಯಲ್ ಪ್ಯಾಲೇಸ್​ನಲ್ಲಿ ಈಗಾಗಲೇ ಹೊಸ ಸರ್ಕಾರ ರಚನೆಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಪಾಕಿಸ್ತಾನ ಬೆಂಬಲಿತ ಹಕ್ಕಾನಿ ನೆಟ್ ವರ್ಕ್ ಹಾಗೂ ಅಫ್ಘಾನ್ ಮೂಲದ ತಾಲಿಬಾನಿಗಳ ಮಧ್ಯೆ ಹೊಸ ಸರ್ಕಾರದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಪಂಜಶೀರ್ ಪ್ರಾಂತ್ಯದಲ್ಲಿ 350 ಮಂದಿ ತಾಲಿಬಾನ್ ಉಗ್ರರನ್ನು ಹತ್ಯೆಗೈಯಲಾಗಿದೆ.

ಗಾಂಧಾರ ನಾಡು ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗಿ 18 ದಿನ ಕಳೆದಿದೆ. ಅಮೆರಿಕನ್ ಸೈನಿಕರು ಸಂಪೂರ್ಣವಾಗಿ ಅಫ್ಘಾನಿಸ್ತಾನ ಬಿಟ್ಟು ಆಮೆರಿಕಕ್ಕೆ ವಾಪಾಸಾಗುತ್ತಿದ್ದಂತೆ, ಇತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ, ಸಿದ್ಧತೆಯನ್ನು ಆರಂಭಿಸಲಾಗಿದೆ. ಕಳೆದ ವಾರವೇ ಮೂರು ದಿನಗಳ ಕಾಲ ತಾಲಿಬಾನ್ ಸಂಘಟನೆಯ ಜನ್ಮಸ್ಥಳ ಕಂದಹಾರ್​ನಲ್ಲಿ ತಾಲಿಬಾನ್ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇರಾನ್ ಮಾದರಿಯಲ್ಲಿ ಹೊಸ ಸರ್ಕಾರ ರಚಿಸಬೇಕೆಂಬ ತೀರ್ಮಾನ ಕೈಗೊಂಡಿದ್ದಾರೆ. ಇರಾನ್ ನಲ್ಲಿ ಸುಪ್ರೀಂ ಲೀಡರ್ ಇರುವಂತೆ, ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರಕ್ಕೆ ಮುಲ್ಲಾ ಹೇಬಿತುಲ್ಲಾ ಅಖುಂದಾಜಾ ಸುಪ್ರೀಂ ಲೀಡರ್ ಆಗಿರುತ್ತಾರೆ.

ಸುಪ್ರೀಂ ಲೀಡರ್ ರಾಷ್ಟ್ರದ ಅಧ್ಯಕ್ಷ ಸ್ಥಾನಕ್ಕಿಂತ ಉನ್ನತ ಹುದ್ದೆ. ಸುಪ್ರೀಂ ಲೀಡರ್​ಗೆ ಮೂವರು ಡೆಪ್ಯುಟಿ ಲೀಡರ್​ಗಳಿದ್ದಾರೆ. ಸುಪ್ರೀಂ ಲೀಡರ್‌ ಅಡಿಯಲ್ಲಿ ರಾಷ್ಟ್ರಾಧ್ಯಕ್ಷ, ಪ್ರಧಾನಿ, ಸಚಿವರು ಕೆಲಸ ಮಾಡಬೇಕು. ತಾಲಿಬಾನ್ ರಾಜಕೀಯ ವ್ಯವಹಾರಗಳ ಡೆಪ್ಯುಟಿ ಲೀಡರ್ ಮುಲ್ಲಾ ಅಬ್ದುಲ್ ಘನಿ ಬಾರದರ್ ಅಫ್ಘನಿಸ್ತಾನದ ಹೊಸ ರಾಷ್ಟ್ರಾಧ್ಯಕ್ಷರಾಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಮುಲ್ಲಾ ಘನಿ ಬಾರದರ್ ಹಾಗೂ ಹಕ್ಕಾನಿ ನೆಟ್ ವರ್ಕ್ ನಡುವೆಯೇ ಈಗ ಅಧಿಕಾರ ಹಂಚಿಕೆಗಾಗಿ ಅಂತರಿಕ ಫೈಟ್ ಕೂಡ ನಡೆಯುತ್ತಿದೆ. ತಾಲಿಬಾನ್ ಉಗ್ರಗಾಮಿ ಸಂಘಟನೆಯಲ್ಲೂ ಅಂತರಿಕವಾಗಿ ಎರಡು ಬಣಗಳಿವೆ. ಪಾಕಿಸ್ತಾನದ ಬೆಂಬಲಿತ ಹಕ್ಕಾನಿ ನೆಟ್ ವರ್ಕ್ ಒಂದು ಕಡೆಯಾದರೇ, ಅಫ್ಘಾನಿಸ್ತಾನದ ತಾಲಿಬಾನ್ ನಾಯಕರು ಮತ್ತೊಂದು ಬಣ. ಈ ಎರಡು ಬಣಗಳ ನಡುವೆ ಈಗ ಅಧಿಕಾರ ಹಂಚಿಕೆಯಲ್ಲಿ ಮೇಲುಗೈ ಸಾಧಿಸಲು ಪೈಪೋಟಿ ನಡೆಯುತ್ತಿದೆ. ಜೊತೆಗೆ ಮುಲ್ಲಾ ಓಮರ್ ಪುತ್ರ ಯಾಕೂಬ್ ಹಾಗೂ ಮುಲ್ಲಾ ಘನಿ ಬಾರದರ್ ನಡುವೆಯೂ ಭಿನ್ನಾಭಿಪ್ರಾಯ ಇದೆ. ದೋಹಾದಲ್ಲಿ ಲಕ್ಸುರಿ ಜೀವನ ನಡೆಸುತ್ತಿರುವವರು, ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪಡೆ ವಿರುದ್ಧ ತಳಮಟ್ಟದಲ್ಲಿ ಹೋರಾಡಿದವರನ್ನು ನಿಯಂತ್ರಿಸುವುದು ಬೇಡ ಎಂದು ಯಾಕೂಬ್ ಹೇಳಿದ್ದಾನೆ. ದೋಹಾದಲ್ಲಿ ಮುಲ್ಲಾ ಅಬ್ದುಲ್ ಘನಿ ಬಾರದರ್ ಹಾಗೂ ಶೇರ್ ಮೊಹಮ್ಮದ್ ಸ್ಟಾನಕಜೈ ತಾಲಿಬಾನ್ ರಾಜಕೀಯ ಕಚೇರಿಯನ್ನು ನೋಡಿಕೊಳ್ಳುತ್ತಿದ್ದರು. ಆಮೆರಿಕದ ಜೊತೆ ಶಾಂತಿ ಸಂಧಾನ ಮಾತುಕತೆ ನಡೆಸಿದ್ದರು.

ಈಗ ರಾಜಧಾನಿ ಕಾಬೂಲ್ ಅನ್ನು ಹಕ್ಕಾನಿ ನೆಟ್ ವರ್ಕ್ ನಿಯಂತ್ರಿಸುತ್ತಿದೆ. ಮುಲ್ಲಾ ಯಾಕೂಬ್ ಓಮರ್, ಕಂದಹಾರ್ ನಗರವನ್ನು ನಿಯಂತ್ರಿಸುತ್ತಿದ್ದಾನೆ. ತಾಲಿಬಾನ್ ಹೊಸ ಸರ್ಕಾರದಲ್ಲಿ ಅಫ್ಘಾನ್ ಪರವಾದ ಕಂದಹಾರ್ ನಾಯಕರು ಹಾಗೂ ಪಾಕಿಸ್ತಾನ ಪರವಾದ ಹಕ್ಕಾನಿ ನೆಟ್​ವರ್ಕ್ ನಾಯಕರಿಬ್ಬರೂ ಇರುತ್ತಾರೆ. ಇನ್ನೂ ಒಂದೆರೆಡು ದಿನಗಳಲ್ಲೇ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಶೇರ್ ಮೊಹಮ್ಮದ್ ಸ್ಟಾನಕಜೈ ನಿನ್ನೆಯೇ ಹೇಳಿದ್ದಾನೆ. ಶೇರ್ ಮೊಹಮ್ಮದ್ ಸ್ಟಾನಕಜೈಗೆ ವಿದೇಶಾಂಗ ಸಚಿವ ಸ್ಥಾನ ನೀಡಬಹುದೆಂದು ಕೂಡ ಹೇಳಲಾಗುತ್ತಿದೆ. ಶೇರ್ ಮೊಹಮ್ಮದ್ ಸ್ಟಾನಕಜೈ ಭಾರತದ ಡೆಹಾರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಟ್ರೇನಿಂಗ್‌ ಪಡೆದಿರುವವನು. ಅಫ್ಘಾನ್ ತಾಲಿಬಾನಿಗಳ ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಹುದ್ದೆ ಸಿಗುತ್ತದೆ ಎಂಬ ಬಗ್ಗೆ ಕುತೂಹಲವೂ ಇದೆ. ಈಗಾಗಲೇ ಕಾಬೂಲ್​ನ ಪ್ರೆಸಿಡೆನ್ಸಿಯಲ್ ಪ್ಯಾಲೇಸ್​ನಲ್ಲಿ ಸರ್ಕಾರ ರಚನೆಯ ಸಮಾರಂಭಕ್ಕೆ ವೇದಿಕೆ ಸಿದ್ಧಪಡಿಸುವ ಕಾರ್ಯ ಕೂಡ ಭರದಿಂದ ನಡೆಯುತ್ತಿದೆ. ಅಫ್ಘಾನಿಸ್ತಾನದ ವಾರ್ತಾ ಮತ್ತು ಸಂಸ್ಕೃತಿ ಇಲಾಖೆಯಿಂದ ವೇದಿಕೆ ಸಿದ್ದಪಡಿಸಲಾಗುತ್ತಿದೆ.

ಇನ್ನೂ ತಾಲಿಬಾನ್ ನಾಯಕರಿಗೆ ನಾವು ಕಸ್ಟೋಡಿಯನ್​ಗಳು ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಶೇಖ್ ರಶೀದ್ ಹೇಳಿದ್ದಾರೆ. ನಾವು ಸುದೀರ್ಘ ಕಾಲದಿಂದ ತಾಲಿಬಾನ್ ನಾಯಕರ ಬಗ್ಗೆ ಕೇರ್ ತೆಗೆದುಕೊಂಡಿದ್ದೇವೆ. ತಾಲಿಬಾನ್ ನಾಯಕರಿಗೆ ಪಾಕಿಸ್ತಾನದಲ್ಲಿ ಆಶ್ರಯ, ಶಿಕ್ಷಣ ಹಾಗೂ ಮನೆ ಸೇರಿದಂತೆ ಎಲ್ಲವನ್ನೂ ನೀಡಿದ್ದೇವೆ. ತಾಲಿಬಾನ್ ನಾಯಕರಿಗಾಗಿ ಎಲ್ಲವನ್ನೂ ಮಾಡಿದ್ದೇವೆ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಶೇಖ್ ರಸೀದ್ ಹೇಳಿದ್ದಾರೆ. ಈ ಮೂಲಕ ಆಮೆರಿಕಾದ ವಿರುದ್ಧ ತಾಲಿಬಾನಿಗಳಿಗೆ ಪಾಕಿಸ್ತಾನ ಎಲ್ಲ ಬೆಂಬಲ ನೀಡಿತ್ತು ಎನ್ನುವುದನ್ನ ನೇರವಾಗಿಯೇ ಒಪ್ಪಿಕೊಂಡಂತೆ ಆಗಿದೆ.

ಅಫ್ಘಾನಿಸ್ತಾನದ ನಿಮರೋಜ್ ಪ್ರಾಂತ್ಯದಲ್ಲಿ ಜನರು ಹಣ ಇಲ್ಲದೇ ಪರದಾಡುತ್ತಿದ್ದಾರೆ. ಮನೆಯ ಬೆಡ್ ಶೀಟ್, ಪಾತ್ರೆ, ಪಗಡೆ, ಕುರ್ಚಿ, ಟೇಬಲ್ ಸೇರಿದಂತೆ ಎಲ್ಲವನ್ನೂ ಬೀದಿಯಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಅಫ್ಘಾನ್ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಎಲ್ಲವನ್ನೂ ಮಾರಾಟ ಮಾಡಿ ವಿದೇಶಗಳಿಗೆ ಹೋಗಲು ಜನರ ಯತ್ನಿಸುತ್ತಿದ್ದಾರೆ. ನಿಮರೋಜ್ ಪ್ರಾಂತ್ಯದ ಮೂಲಕ ಗಡಿ ದಾಟಿ ಇರಾನ್ ದೇಶಕ್ಕೆ ಹೋಗಲು ಯತ್ನಿಸುತ್ತಿದ್ದಾರೆ. ಇರಾನ್ ಗಡಿಯಲ್ಲಿ ಸಾವಿರಾರು ಅಫ್ಘಾನ್ ಜನರು ಗಡಿ ದಾಟಲು ಕಾದು ಕುಳಿತಿದ್ದಾರೆ. ಆದರೇ, ಅಫ್ಘಾನ್ ಜನರನ್ನು ಇರಾನ್ ದೇಶದೊಳಕ್ಕೆ ಬಿಟ್ಟುಕೊಳ್ಳದೇ ವಾಪಸ್ ಅಫ್ಘಾನಿಸ್ತಾನಕ್ಕೆ ಕಳಿಸಲಾಗುತ್ತಿದೆ. ಅಫ್ಘಾನಿಸ್ತಾನದ ಯುನಿರ್ವಸಿಟಿಗಳ ವಿದ್ಯಾರ್ಥಿಗಳು ಇರಾನ್​ಗೆ ಹೋಗಲು ಯತ್ನಿಸಿ ವಿಫಲರಾಗಿದ್ದಾರೆ.

ಅಫ್ಘಾನಿಸ್ತಾನದ ಆಸ್ಪತ್ರೆಗಳಲ್ಲಿ ಈಗ ಮಹಿಳಾ ವೈದ್ಯರು, ನರ್ಸ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಉದ್ಯೋಗಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಾಲಿಬಾನ್ ಕರೆ ಕೊಟ್ಟ ಬಳಿಕ ಆರೋಗ್ಯ ಇಲಾಖೆಯ ಮಹಿಳಾ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನಿನ್ನೆ ಕಂದಹಾರ್ ನಲ್ಲಿ ತಮ್ಮ ಬಳಿ ಮಿಲಿಟರಿ ವಾಹನ, ಶಸ್ತ್ರಾಸ್ತ್ರಗಳ ಪರೇಡ್ ನಡೆಸಿದ್ದ ತಾಲಿಬಾನ್ ಉಗ್ರಗಾಮಿಗಳು ಇಂದು ಕುಂದಜ್ ಪ್ರಾಂತ್ಯದಲ್ಲಿ ಮಿಲಿಟರಿ ವಾಹನ, ಶಸ್ತ್ರಾಸ್ತ್ರಗಳ ಪರೇಡ್ ನಡೆಸಿದ್ದಾರೆ. ಆಮೆರಿಕಾ ಬಿಟ್ಟುಹೋಗಿರುವ ಮಿಲಿಟರಿ ವಾಹನ, ಶಸ್ತ್ರಾಸ್ತ್ರ ಈಗ ತಾಲಿಬಾನ್ ವಶವಾಗಿದ್ದು, ಇವುಗಳನ್ನು ಜಗತ್ತಿನ ಎದುರು ಪ್ರದರ್ಶಿಸುತ್ತಿದೆ.

ಅಫ್ಘಾನಿಸ್ತಾನದ ತಾಲಿಬಾನ್​ಗಳ ವಶಕ್ಕೆ ಬರದೆ ಇರುವ ಪಂಜಶೀರ್ ಪ್ರಾಂತ್ಯದ ಮೇಲೆ ತಾಲಿಬಾನಿಗಳ ದಾಳಿ ಮುಂದುವರಿದಿದೆ. ಎಲ್ಲ ದಿಕ್ಕುಗಳಿಂದಲೂ ಪಂಜಶೀರ್ ಪ್ರಾಂತ್ಯವನ್ನು ತಾಲಿಬಾನಿಗಳು ಸುತ್ತುವರಿದಿದ್ದಾರೆ. ನಾರ್ದರ್ನ್ ಅಲೈಯನ್ಸ್ ಹಾಗೂ ನ್ಯಾಷನಲ್ ರೆಸಿಸಿಟೆನ್ಸ್ ಪೋರ್ಸ್ ತಾಲಿಬಾನಿಗಳ ವಿರುದ್ಧ ಪ್ರತಿದಾಳಿ ನಡೆಸಿದೆ. ಈ ಪ್ರತಿದಾಳಿಯಲ್ಲಿ ಇದುವರೆಗೂ 350 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. 280 ತಾಲಿಬಾನ್ ಉಗ್ರರಿಗೆ ಗಾಯಗಳಾಗಿವೆ. 35 ಮಂದಿ ತಾಲಿಬಾನ್ ಉಗ್ರರನ್ನು ನಾರ್ದನ್ ಅಲೈಯನ್ಸ್ ಹಾಗೂ ನ್ಯಾಷನಲ್ ರೆಸಿಸ್ಟನ್ಸ್ ಫೋರ್ಸ್ ಸೆರೆ ಹಿಡಿದಿವೆ. ಪಂಜಶೀರ್ ಪ್ರಾಂತ್ಯದ ರಕ್ಷಣೆ ಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇವೆ ಎಂದು ನ್ಯಾಷನಲ್ ರೆಸಿಸ್ಟನ್ಸ್​ ಫೋರ್ಸ್ ಹೇಳಿದೆ.

(ವಿಶೇಷ ವರದಿ: ಚಂದ್ರಮೋಹನ್)

ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದ ಗೌಪ್ಯ ಸ್ಥಳದಿಂದ ಅಮೆರಿಕನ್ನರು, ಅಫ್ಘಾನ್​ ಕಮಾಂಡೋಗಳನ್ನು ರಹಸ್ಯವಾಗಿ ಶಿಫ್ಟ್​ ಮಾಡಿದ್ದು ಹೇಗೆ?

Afghanistan Crisis: ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನ್ ಸರ್ಕಾರ ರಚನೆ ಸಾಧ್ಯತೆ

(Afghanistan Crisis Taliban To Reveal New Afghanistan Government haqqani network vs Taliban)

Published On - 7:19 pm, Thu, 2 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್