Afghanistan: ಕಂದಹಾರ್ ಷಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟ: 16 ಸಾವು
ಶಿಯಾ ಮಸೀದಿಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದ ಕುಂದುಜ್ ನಗರದಲ್ಲಿರುವ ಶಿಯಾ ಮಸೀದಿಯಲ್ಲಿ ಮಾರಣಾಂತಿಕ ಆತ್ಮಾಹುತಿ ದಾಳಿ ನಡೆದ ಒಂದು ವಾರದ ನಂತರ ಕಂದಹಾರ್ ನಗರದಲ್ಲಿಯೂ ಶುಕ್ರವಾರದ ಪ್ರಾರ್ಥನೆಗಳ ಸಂದರ್ಭ ಅಂಥದ್ದೇ ದಾಳಿ ನಡೆದಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಶಿಯಾ ಮಸೀದಿಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಎಎಫ್ಪಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯೊಂದರ ವಕ್ತಾರರು ಹೇಳಿದ್ದಾರೆ. ಕಂದಹಾರ್ನ ಇಮಾಂ ಬಾರ್ಘಾ ಮಸೀದಿಯಲ್ಲಿ ಅತಿಹೆಚ್ಚು ಜನಸಂದಣಿಯಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕಗಳು ಕೇಳಿಬಂದಿವೆ. ಘಟನೆಯ ಬಗ್ಗೆ ಸ್ಥಳೀಯ ಪತ್ರಕರ್ತರು ಹಂಚಿಕೊಂಡಿರುವ ವಿಡಿಯೊ ತುಣುಕುಗಳಲ್ಲಿ ಮೃತ ದೇಹಗಳು ಮತ್ತು ನೆಲದ ಮೇಲೆ ಮಲಗಿರುವ ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳು ಇರುವುದು ಕಂಡು ಬರುತ್ತದೆ.
ಸ್ಫೋಟದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಾಲಿಬಾನ್ ಆಡಳಿತದ ಗೃಹ ಇಲಾಖೆಯ ವಕ್ತಾರರು ಹೇಳಿದ್ದಾರೆ. ಸ್ಫೋಟದ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಹಸ್ತಕ್ಷೇಪ ಇರುವುದನ್ನು ತಳ್ಳಿಹಾಕಲು ಆಗದು ಎಂದು ಹಲವು ಸುದ್ದಿಸಂಸ್ಥೆಗಳು ಶಂಕಿಸಿವೆ. ಸುನ್ನಿ ಪ್ರಾಬಲ್ಯದ ದೇಶದಲ್ಲಿ ಅಲ್ಪಸಂಖ್ಯಾತರಾದ ಷಿಯಾ ಮುಸ್ಲಿಮರನ್ನು ಗುರಿಯಾಗಿಸಿ ಹಲವು ದಾಳಿಗಳು ನಡೆಯುತ್ತಿವೆ.
ಎಲ್ಲ ಅಲ್ಪಸಂಖ್ಯಾತರಿಗೆ ಭದ್ರತೆ ಮತ್ತು ಸುರಕ್ಷಿತ ವಾತಾವರಣದ ಭರವಸೆಯನ್ನು ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಹಿಂದೆ ಸರಿಯುವ ಮೊದಲು ತಾಲಿಬಾನ್ ನೀಡಿತ್ತು. ಆದರೆ ದೇಶದ ಮೇಲೆ ತಾಲಿಬಾನ್ ಹಿಡಿತ ಬಿಗಿಯಾದ ನಂತರ ಇಸ್ಲಾಮಿಕ್ ಸ್ಟೇಟ್-ಖೊರಸನ್ (ಐಸಿಸ್-ಕೆ) ಉಗ್ರಗಾಮಿ ಸಂಘಟನೆಯು ದಾಳಿಗಳನ್ನು ಹೆಚ್ಚಿಸಿತ್ತು. ತಾಲಿಬಾನ್ ವಿರುದ್ಧ ಹೋರಾಡುವ ಶಪಥ ಮಾಡಿರುವ ಐಸಿಸ್-ಕೆ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಆಗಸ್ಟ್ ತಿಂಗಳಲ್ಲಿ ದಾಳಿ ಮಾಡಿ 13 ಅಮೆರಿಕ ಸೈನಿಕರನ್ನು ಕೊಂದಿತ್ತು.