ಅಫ್ಘಾನಿಸ್ತಾನದ ಬಹುಭಾಗವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಇನ್ನೇನು ತಮ್ಮದೇ ಸರ್ಕಾರ ರಚಿಸಿ ಆಳ್ವಿಕೆ ಶುರುಮಾಡುವ ಸನ್ನಾಹದಲ್ಲಿದ್ದಾರೆ. ತಾಲಿಬಾನ್ ಉಗ್ರರಿಗೆ ಬೆದರಿ ಅಫ್ಘಾನಿಸ್ತಾನದ ಯೋಧರು ದೇಶವನ್ನೇ ತೊರೆದು ಹೋದ ಕಾರಣ ಅಲ್ಲಿ ಅವರಿಗೆ ಪ್ರತಿರೋಧವೇ ಇಲ್ಲದಂತಾಗಿ ದರ್ಬಾರು ನಡೆಸಲು ಅನುಕೂಲವಾಗಿತ್ತು. ಆದರೆ, ಇದೀಗ ಅಫ್ಘಾನಿಸ್ತಾನದಲ್ಲಿ ಅಹ್ಮದ್ ಮಸೂದ್, ಅಮರುಲ್ಲಾ ಸಲೇಹಾ ನೇತೃತ್ವದಲ್ಲೀಗ ತಾಲಿಬಾನಿಗಳ ವಿರುದ್ಧದ ಹೋರಾಟ ಬಲ ಪಡೆಯುತ್ತಿದ್ದು, ಇದೇ ಹೊತ್ತಿನಲ್ಲಿ ತಜಕಿಸ್ತಾನಕ್ಕೆ ಹೋಗಿದ್ದ ಅಫ್ಘಾನಿಸ್ತಾನದ ಯೋಧರು ಪಂಜ್‌ಶೀರ್ ಪ್ರಾಂತ್ಯಕ್ಕೆ ಹೆಲಿಕಾಪ್ಟರ್ ಸಮೇತ ಮರಳಿ ಬಂದಿದ್ದಾರೆ.
ಪಂಜ್‌ಶೀರ್ ಪ್ರಾಂತ್ಯದ ಉತ್ತರ ಮೈತ್ರಿಪಡೆ ಅಥವಾ ಪ್ರತಿರೋಧ ಪಡೆಯಲ್ಲಿ ಸುಮಾರು 10 ಸಾವಿರ ಯೋಧರಿದ್ದಾರೆ. ಇವರ ಜತೆ 1,200 ಅಫ್ಘಾನಿಸ್ತಾನದ ಯೋಧರ ಸೇರ್ಪಡೆಯಾಗಿದ್ದು, ಪಂಜ್‌ಶೀರ್‌ಗೆ ಆಫ್ಘನ್ ರಾಷ್ಟ್ರೀಯ ಸೇನೆ ವಾಹನಗಳು ಬಂದಿವೆ. ಆಫ್ಘನ್ ಸೇನೆ ಯೋಧರು ಪಂಜ್‌ಶೀರ್ ಪ್ರಾಂತ್ಯಕ್ಕೆ ಆಗಮಿಸಿರುವುದರಿಂದ ಅಫ್ಘಾನಿಸ್ತಾನದ ರಾಷ್ಟ್ರೀಯ ಸೇನೆ ಯುದ್ಧ ಟ್ಯಾಂಕ್, ವಾಹನ, ಶಸ್ತ್ರಾಸ್ತ್ರಗಳು ಪಂಜ್‌ಶೀರ್ ಪ್ರಾಂತ್ಯದತ್ತ ರವಾನೆಯಾಗಿದ್ದುಅಮರುಲ್ಲಾ ಸಲೇಹ್ಗೆ ಯೋಧರು ಬೆಂಬಲ ನೀಡಿದ್ದಾರೆ.
ಅಹ್ಮದ್ ಮಸೂದ್, ಅಮರುಲ್ಲಾ ಸಲೇಹ್ ನೇತೃತ್ವದಲ್ಲೀಗ ಹೋರಾಟ ಆರಂಭವಾಗಲಿದ್ದು, 11,200 ಯೋಧರ ಜತೆ ತಾಲಿಬಾನ್ ವಿರುದ್ಧ ಹೋರಾಟ ಶುರುಮಾಡಲಿದ್ದಾರೆ. ಪಂಜ್‌ಶೀರ್ ಪ್ರಾಂತ್ಯದ ಒಟ್ಟು ಜನಸಂಖ್ಯೆ 1.78 ಲಕ್ಷ ಮಾತ್ರವಾಗಿದ್ದು, ತಾಲಿಬಾನ್ ಉಗ್ರರನ್ನು ಎದುರಿಸಲಾಗದೆ ತಜಕಿಸ್ತಾನಕ್ಕೆ ಹೋಗಿದ್ದ ಯೋಧರು ಈಗ ಹೆಲಿಕಾಪ್ಟರ್ ಸಮೇತ ಮರಳಿ ಬಂದಿರುವುದು ಬಲ ನೀಡಿದಂತಾಗಿದೆ.
ಏತನ್ಮಧ್ಯೆ ಅಂದ್ರಾಬ್ ಕಣಿವೆಗೆ ಆಹಾರ ಸಾಮಗ್ರಿ, ಇಂಧನ ಪೂರೈಕೆ ಸ್ಥಗಿತವಾಗಿದ್ದು ಅಲ್ಲಿನ ಪ್ರತಿ ಮನೆಯನ್ನೂ ಶೋಧಿಸುತ್ತಿರುವ ತಾಲಿಬಾನಿಗಳು ಮಕ್ಕಳು, ವೃದ್ಧರನ್ನು ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಉಗ್ರರ ಭಯದಿಂದ ಸಾವಿರಾರು ಮಹಿಳೆಯರು, ಮಕ್ಕಳು ಬೆಟ್ಟಗುಡ್ಡಗಳತ್ತ ಓಡಿಹೋಗುತ್ತಿದ್ದು, ಜೀವ ಉಳಿಸಿಕೊಳ್ಳುವುದೇ ಹರಸಾಹಸವಾಗಿದೆ.
ಅಂದ್ರಾಬ್ ಪ್ರಾಂತ್ಯದಲ್ಲಿ ಉಗ್ರರಿಂದ ಮನೆ ಮನೆ ಶೋಧವಾಗುತ್ತಿರುವ ಹೊತ್ತಿನಲ್ಲೇ ಆಫ್ಘನ್‌ನ ಮಾಜಿ ಉಪಾಧ್ಯಕ್ಷ, ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿ, ದೇವರಿಗೆ ಮಾತ್ರ ನನ್ನನ್ನು ಇಲ್ಲಿಂದ ತೆರವುಗೊಳಿಸಲು ಸಾಧ್ಯ. ಆದರೆ ನನ್ನ ದೇಹ ಈ ಮಣ್ಣಿನಲ್ಲಿ ಐಕ್ಯವಾಗುತ್ತೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ಮತ್ತು ನಾನು ಒಂದೇ . ಇಲ್ಲಿಂದ ಹೊರದಬ್ಬಲು ಯಾರಿಂದಲೂ ಆಗದು, ನಾನು ಕೂಡಾ ಹೊರಗೆ ಹೋಗಲಾರೆ. ಈ ಮಣ್ಣಿನಲ್ಲೇ ನನ್ನ ದೇಹ ಮಣ್ಣಾಗಿ ಹೋಗಲಿ ಎನ್ನುವ ಮೂಲಕ ಉಗ್ರರಿಗೆ ಹೆದರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಕೆಲ ದಿನಗಳ ಹಿಂದಷ್ಟೇ ನಾನೀಗ ಅಮೆರಿಕಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು.
(Afghanistan military forces came back with helicopters to fight against Taliban)
ಇದನ್ನೂ ಓದಿ:
ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್
ಅಮೆರಿಕದ ಕೊನೆಯ ಸೈನಿಕ ಅಫ್ಘಾನ್ ನೆಲದಲ್ಲಿ ಇರುವವರೆಗೂ ಸರ್ಕಾರ ರಚಿಸುವುದಿಲ್ಲ: ತಾಲಿಬಾನ್
Published On - 9:33 am, Tue, 24 August 21