ದೆಹಲಿ: ತಾಲಿಬಾನ್ ಹಿಡಿತಕ್ಕೆ ಅಫ್ಘಾನಿಸ್ತಾನ ಸಿಲುಕುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿರುವ ಖ್ಯಾತ ಪಾಪ್ ತಾರೆ ಅರ್ಯಾನಾ ಸಯೀದಾ ಉಗ್ರ ಸಂಘಟನೆಗಳಿಗೆ ನೆರವಾಗುತ್ತಿರುವ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದಾರೆ. ತಾಲಿಬಾನ್ಗೆ ಎಲ್ಲ ರೀತಿಯ ನೆರವು ನೀಡುತ್ತಿರುವ ಪಾಕಿಸ್ತಾನವೇ ಅಫ್ಘಾನಿಸ್ತಾನದ ಈಗಿನ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಿದ ಭಾರತಕ್ಕೆ ನಾವು ಕೃತಜ್ಞರು ಎಂದು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ಏನು ಮಾಡುತ್ತಿದೆ ಎಂಬ ಬಗ್ಗೆ ನನಗೆ ಗೊತ್ತಿದೆ. ತಾಲಿಬಾನ್ಗೆ ಶಕ್ತಿ ತುಂಬಿದ್ದು ಪಾಕಿಸ್ತಾನ. ನಮ್ಮ ಸರ್ಕಾರವು ತಾಲಿಬಾನಿಗಳನ್ನು ಮಟ್ಟಹಾಕಲು ಮುಂದಾದಾಗ ಅಲ್ಲಿ ನಮಗೆ ಪಾಕಿಸ್ತಾನಿಯರು ಕಾಣಿಸುತ್ತಿದ್ದರು. ಇನ್ನಾದರೂ ಅವರು ತಮ್ಮಪಾಡಿಗೆ ತಾವಿದ್ದು, ಅಫ್ಘಾನಿಸ್ತಾನದ ತಂಟೆಗೆ ಬರುವುದಿಲ್ಲ ಎಂದುಕೊಂಡಿದ್ದೇನೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.
ತಾಲಿಬಾನ್ ಉಗ್ರಗಾಮಿಗಳಿಗೆ ಪಾಕಿಸ್ತಾನವು ತರಬೇತಿ ನೀಡುತ್ತಿದೆ ಎಂದು ಆರೋಪಿಸಿದ ಅವರು, ತಾಲಿಬಾನ್ನ ಮುಖ್ಯ ನೆಲೆ ಪಾಕಿಸ್ತಾನದಲ್ಲಿಯೇ ಇದೆ. ವಿಶ್ವ ಸಮುದಾಯ ಇನ್ನು ಮುಂದಾದರೂ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನಿಲ್ಲಿಸಬೇಕು. ಪಾಕಿಸ್ತಾನಕ್ಕೆ ಸಿಗುವ ಹಣ ತಾಲಿಬಾನ್ಗೆ ಹರಿದುಬರುತ್ತಿದೆ ಎಂದು ದೂರಿದರು.
ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಸಾಧ್ಯತೆಯ ಕುರಿತು ವಿಶ್ವ ಸಮುದಾಯವು ಸಮಾಲೋಚನೆ ನಡೆಸಬೇಕು. ಅಫ್ಘಾನಿಸ್ತಾನದ ವಿದ್ಯಮಾನಗಳಲ್ಲಿ ಮೂಗು ತೂರಿಸದಂತೆ ಪಾಕಿಸ್ತಾನವನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಅಫ್ಘಾನಿಸ್ತಾನದ ಜನರ ಬದುಕು ಸುಧಾರಿಸಲು ಭಾರತ ಸರ್ಕಾರ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಭಾರತವನ್ನು ನಿಜವಾದ ಗೆಳೆಯ ಎಂದು ಬಣ್ಣಿಸಿದರು.
‘ಭಾರತವು ಬಹುಕಾಲದಿಂದ ನಮಗೆ ಹಿತಬಯಸುತ್ತಿದೆ. ನಮ್ಮ ಜೊತೆಗೆ ನಿಜವಾದ ಮಿತ್ರನಂತೆ ಭಾರತ ವರ್ತಿಸಿದೆ. ಅಫ್ಘಾನಿಸ್ತಾನದ ನಿರಾಶ್ರಿತರು ಸೇರಿದಂತೆ ಎಲ್ಲ ಪೌರರ ವಿಚಾರದಲ್ಲೂ ಭಾರತ ಸದ್ಭಾವನೆಯಿಂದ ವರ್ತಿಸಿದೆ. ವಿಶ್ವ ವೇದಿಕೆಗಳಲ್ಲಿ ನಮ್ಮ ದೇಶದ ಪರವಾಗಿ ಭಾರತ ಧ್ವನಿಯೆತ್ತಿದೆ. ನಾವು ಭಾರತಕ್ಕೆ ಕೃತಜ್ಞರಾಗಿದ್ದೇವೆ. ನಮ್ಮ ನೆರೆಹೊರೆಯಲ್ಲಿರುವ ಬೇರೆ ಯಾವುದೇ ದೇಶವು ಭಾರತದಷ್ಟು ಪ್ರೀತಿಯಿಂದ ವರ್ತಿಸಲಿಲ್ಲ’ ಎಂದು ಅವರು ಹೇಳಿದರು.
ಅರ್ಯಾನಾ ಸಯೀದಾ 2015ರಲ್ಲಿ ಕ್ರೀಡಾಂಗಣವೊಂದರಲ್ಲಿ ಹಾಡು ಹೇಳಿದ್ದರು. ಈ ಮೂಲಕ ತಾಲಿಬಾನ್ ಹೇರಿದ್ದ ಮೂರು ನಿರ್ಬಂಧಗಳನ್ನು ಒಂದೇ ಸಲಕ್ಕೆ ತೊಡೆದುಹಾಕಿದ್ದರು. ಹಿಜಾಬ್ ಧರಿಸದಿರುವುದು, ಮಹಿಳೆಯೊಬ್ಬರು ಹಾಡುವುದು ಮತ್ತು ಕ್ರೀಡಾಂಗಣದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ತಾಲಿಬಾನ್ ಆಡಳಿತದಲ್ಲಿ ನಿರ್ಬಂಧವಿತ್ತು.
(Afghanistan pop star Aryana Sayeed blames Pakistan for Taliban says India is our true friend)
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ
ಇದನ್ನೂ ಓದಿ: Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್ಶೀರ್