ದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರತೆಯ ಮುಖಗಳು ಅನಾವರಣವಾಗುತ್ತಿದೆ. ಸರ್ಕಾರಿ ಅಧಿಕಾರಿಗಳನ್ನು ತಾಲಿಬಾನಿಗಳು ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಜನರನ್ನು ನೇಣು ಹಾಕಿ ಹತ್ಯೆ ಮಾಡಿದ್ದಾರೆ. ಬಳಿಕ ಶವಗಳ ಮೇಲೆ ಗುಂಡು ಹಾರಿಸಿ ವಿಕೃತಿ ಮರೆದಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಆಮೆರಿಕಾಕ್ಕೆ ತಾಲಿಬಾನ್ ಹಿಂದೆ ಇರೋದು ಪಾಕಿಸ್ತಾನ ಎನ್ನುವ ಸತ್ಯ ಅರ್ಥವಾಗಿದೆ. ಹಕ್ಕಾನಿ ನೆಟ್ವರ್ಕ್ ಸೇರಿದಂತೆ ತಾಲಿಬಾನಿಗಳಿಗೆ ಪಾಕಿಸ್ತಾನವೇ ಆಶ್ರಯ ನೀಡಿದೆ ಎಂದು ಆಮೆರಿಕಾ ನೇರವಾಗಿ ಹೇಳಿದೆ. ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮರು ಚಿಂತನೆ ನಡೆಸುವುದಾಗಿ ಆಮೆರಿಕಾ ತಿಳಿಸಿದೆ.
ತಾಲಿಬಾನಿಗಳಿಗೆ ಪಾಕಿಸ್ತಾನವೇ ಆಶ್ರಯ ನೀಡ್ತಿದೆ ಎಂದ ಅಮೆರಿಕಾ
ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಹಾಗೂ ತಾಲಿಬಾನಿಗಳ ಹುಟ್ಟಡಗಿಸಲು ಹೋದ ಅಮೆರಿಕಾ ಬರಿಗೈಯಲ್ಲಿ ವಾಪಾಸಾಗಿದೆ. ಆದರೆ, ಅಲ್ ಖೈದಾ ಸಂಘಟನೆಯನ್ನು ಮಟ್ಟ ಹಾಕಿದ್ದೇವೆ ಎಂದು ಆಮೆರಿಕಾ ಹೇಳಿದೆ. ತಾಲಿಬಾನಿಗಳ ಅಟ್ಟಹಾಸ ಮಟ್ಟ ಹಾಕಲು ಆಮೆರಿಕಾಕ್ಕೆ ಸಾಧ್ಯವಾಗಲೇ ಇಲ್ಲ. ತಾಲಿಬಾನಿಗಳ ಹಿಂದೆ ಇರೋದು ಪಾಕಿಸ್ತಾನ ಎನ್ನುವ ಸತ್ಯ ಈಗ ಆಮೆರಿಕಾಕ್ಕೆ ಅರ್ಥವಾಗಿದೆ. ಹಕ್ಕಾನಿ ನೆಟ್ವರ್ಕ್ ಸೇರಿದಂತೆ ತಾಲಿಬಾನಿಗಳಿಗೆ ಪಾಕಿಸ್ತಾನವೇ ಆಶ್ರಯ ನೀಡಿದೆ ಎಂದು ಆಮೆರಿಕಾ ನೇರವಾಗಿ ಹೇಳಿದೆ. ಆಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಪಾಕಿಸ್ತಾನವೇ ತಾಲಿಬಾನಿಗಳಿಗೆ ಆಶ್ರಯ ನೀಡಿದೆ ಎಂದು ನೇರವಾಗಿ ಹೇಳಿದ್ದಾರೆ. ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮರು ಚಿಂತನೆ ನಡೆಸುವುದಾಗಿ ಆಮೆರಿಕಾ ವಿವರಿಸಿದೆ.
ಪಾಕಿಸ್ತಾನವು ಆಮೆರಿಕಾದ ಜೊತೆಗೆ ಸೇರಿ ಆಮೆರಿಕಾವನ್ನೇ ಸೋಲಿಸಿದೆ ಎಂದು ಜನರು ತಮಾಷೆ ಆಡಿಕೊಳ್ಳುತ್ತಿದ್ದಾರೆ. ಇದನ್ನು ಈಗ ಆಮೆರಿಕಾ ಒಪ್ಪಿಕೊಂಡಿದೆ. ಪಾಕಿಸ್ತಾನದ ದ್ವಂದ್ವ ನೀತಿ ಮತ್ತೊಮ್ಮೆ ಆಮೆರಿಕಾಕ್ಕೆ ಅರ್ಥವಾಗಿದೆ. ಈ ಹಿಂದೆಯೂ ಆಮೆರಿಕಾದ ಮೇಲಿನ ದಾಳಿಕೋರ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿದ್ದು ಇದೇ ಪಾಕಿಸ್ತಾನ. ಆದರೆ, ಪಾಕಿಸ್ತಾನ ಲಾಡೆನ್ ಬಗ್ಗೆ ಆಮೆರಿಕಾಕ್ಕೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಅಮೆರಿಕಾದ ಸೀಲ್ ಪಡೆ ಲಾಡೆನ್ನನ್ನು ಹತ್ಯೆ ಮಾಡಿದ ಬಳಿಕ ಲಾಡೆನ್ ನಮ್ಮ ನೆಲದಲ್ಲಿ ಇದ್ದ ಅನ್ನೋ ಮಾಹಿತಿಯೇ ನಮಗೆ ಇರಲಿಲ್ಲ ಎಂದು ಪಾಕಿಸ್ತಾನ ಸುಳ್ಳು ವಾದ ಮಂಡಿಸಿತ್ತು.
ಅಫ್ಘನ್ ನಲ್ಲಿ ತಾಲಿಬಾನ್ ಕ್ರೌರ್ಯ
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯಕ್ಕೆ ಕೊನೆಯೇ ಇಲ್ಲವಾಗಿದೆ. ತಾಲಿಬಾನಿಗಳ ಕ್ರೌರ್ಯದ ವಿಡಿಯೋಗಳು ನಿತ್ಯ ಹೊರಬರುತ್ತಿವೆ. ಕಾಬೂಲ್ನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಕೈ ಕಟ್ಟಿ, ಕಾರಿನ ಡಿಕ್ಕಿಯಲ್ಲಿ ಕುರಿ ತುಂಬಿಕೊಂಡು ಹೋಗುವಂತೆ ತುಂಬಿಕೊಂಡು ಹೋಗಿದ್ದಾರೆ. ಇನ್ನೂ ಇಬ್ಬರನ್ನು ಸಾರ್ವಜನಿಕವಾಗಿ ನೇಣು ಹಾಕಿದ್ದಾರೆ. ಸಾವನ್ನಪ್ಪಿದ ಬಳಿಕ ಶವಗಳ ಮೇಲೆ ತಾಲಿಬಾನ್ ಉಗ್ರರು ಗುಂಡು ಹಾರಿಸಿದ್ದಾರೆ. ತಾಲಿಬಾನಿಗಳ ವಿಕೃತತೆಗೆ ಕೊನೆ ಹಾಡುವವರೇ ಇಲ್ಲವಾಗಿದೆ. ಇಷ್ಟೆಲ್ಲಾ ಆದರೂ, ತಾಲಿಬಾನ್ ನಾಯಕರು ಮಾತ್ರ ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳಿಂದ ಮಾನವ ಹಕ್ಕುಗಳ ಉಲಂಘನೆ ಆಗಿಲ್ಲ ಎಂದು ಸುಳ್ಳುವಾದ ಮಾಡುತ್ತಿದ್ದಾರೆ.
ಇದನ್ನೂ ಓದಿ: Haqqani Network: ಮನುಷ್ಯತ್ವದ ಮುಖ ನೋಡದ ಹಕ್ಕಾನಿಗಳು ಅಫ್ಘಾನಿಸ್ತಾನದಲ್ಲಿ ಓಡಾಡುತ್ತಿದ್ದಾರೆ; ಯಾರಿವರು?
ಇದು ತಾತ್ಕಾಲಿಕ ಸರ್ಕಾರ ಎಂದ ವಕ್ತಾರ
ಅಫ್ಘಾನಿಸ್ತಾನದಲ್ಲಿ ಈಗ ಆಸ್ತಿತ್ವಕ್ಕೆ ಬಂದಿರುವುದು ಪೂರ್ಣ ಪ್ರಮಾಣದ ಸರ್ಕಾರವಲ್ಲ. ಇದೊಂದು ತಾತ್ಕಾಲಿಕ ಸರ್ಕಾರ ಮಾತ್ರ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ. ತುರ್ತಾಗಿ ಸರ್ಕಾರ ರಚಿಸಬೇಕಾದ ಅಗತ್ಯತೆ ಇತ್ತು. ಜನರಿಗೆ ಅಗತ್ಯ ಸೇವೆಗಳು ಸಿಗಬೇಕಾಗಿತ್ತು. ಹೀಗಾಗಿ ತುರ್ತಾಗಿ ಪ್ರಮುಖ ಖಾತೆಗಳಿಗೆ ಸಚಿವರನ್ನು ನೇಮಿಸಲಾಗಿದೆ. ಇನ್ನೂ ಕೆಲ ಖಾತೆಗಳು ಖಾಲಿ ಇದ್ದು, ಮುಂದಿನ ದಿನಗಳಲ್ಲಿ ಭರ್ತಿ ಮಾಡಲಾಗುತ್ತೆ ಎಂದು ಸುಹೇಲ್ ಶಾಹೀನ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಆಗಸ್ಟ್ 15ರ ಬಳಿಕ 153 ಮಾಧ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ. ತಾಲಿಬಾನ್ ಆಳ್ವಿಕೆಯಲ್ಲಿ ಮುಕ್ತ ವಾಕ್ ಸ್ವಾತಂತ್ರ್ಯ ಇಲ್ಲ. ಇದರಿಂದಾಗಿ ಕತ್ತು ಹಿಸುಕಿದ ಪರಿಸ್ಥಿತಿಯಲ್ಲಿ ಕೆಲಸ ಮಾಡಲಾಗದೇ ಮಾಧ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ.
ಅಫ್ಘಾನ್‌ಗೆ ಒಂದು ಬಿಲಿಯನ್ ಡಾಲರ್ ನೆರವು
ನಿನ್ನೆ ವಿಶ್ವಸಂಸ್ಥೆಯು ಅಫ್ಘಾನಿಸ್ತಾನದಲ್ಲಿ ಮಾನವೀಯತೆಯ ಅತಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯವು ಅಫ್ಘಾನ್‌ಗೆ ಮಾನವೀಯತೆಯಿಂದ ನೆರವು ನೀಡಬೇಕೆಂದು ಜೀನಿವಾದಲ್ಲಿ 90 ರಾಷ್ಟ್ರಗಳ ಸಭೆ ನಡೆಸಿತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಫ್ಘಾನಿಸ್ತಾನಕ್ಕೆ ಒಂದು ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡಲು ವಿವಿಧ ರಾಷ್ಟ್ರಗಳು ಒಪ್ಪಿಕೊಂಡಿವೆ. ಉಜಬೇಕಿಸ್ತಾನ 1,300 ಟನ್ ಆಹಾರಧಾನ್ಯ, ವೈದ್ಯಕೀಯ ಸಾಮಗ್ರಿಗಳ ನೆರವು ನೀಡಿದೆ. ಕತಾರ್ ದೇಶ ಈಗಾಗಲೇ ತಾಲಿಬಾನ್ ಜೊತೆಗೆ ರಾಜತಾಂತ್ರಿಕ ವ್ಯವಹಾರಗಳನ್ನು ನಡೆಸುತ್ತಿದೆ. ಕತಾರ್ ವಿದೇಶಾಂಗ ಸಚಿವ ಅಫ್ಘಾನ್‌ಗೆ ಭೇಟಿ ನೀಡಿ ತಾಲಿಬಾನ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಸೆಪ್ಟೆಂಬರ್ 24 ರಂದು ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ
ಇದೆಲ್ಲದರ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 23 ರಿಂದ ಮೂರು ದಿನಗಳ ಕಾಲ ಆಮೆರಿಕಾಕ್ಕೆ ಭೇಟಿ ನೀಡುತ್ತಿದ್ದಾರೆ. ಸೆಪ್ಟೆಂಬರ್ 23 ರಂದು ಆಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ದ್ವಿಪಕ್ಷೀಯ ಭಾಂಧವ್ಯ ವೃದ್ದಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಸೆಪ್ಟೆಂಬರ್ 24 ರಂದು ಆಮೆರಿಕಾದ ಶ್ವೇತಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್, ಜಪಾನ್ ಪ್ರಧಾನಿ ಯೋಗಶಿಧೆ ಭಾಗಿಯಾಗಲಿದ್ದಾರೆ.
ಕಳೆದ ವರ್ಷ ವರ್ಚ್ಯುಯಲ್ ಆಗಿ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆದಿತ್ತು. ಈ ಭೇಟಿಯಲ್ಲಿ ಸಭೆಯ ತೀರ್ಮಾನಗಳ ಪರಿಶೀಲನೆ ನಡೆಸಲಿದ್ದಾರೆ. ಕೊರೊನಾ ಲಸಿಕೆಯ ಉತ್ಪಾದನೆ, ಲಸಿಕೆಯ ಹಂಚಿಕೆ, ಲಸಿಕೆ ಅಭಿಯಾನದ ಬಗ್ಗೆಯೂ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಚರ್ಚೆಯಾಗಲಿದೆ. ಜೋ ಬೈಡೆನ್ ಆಮೆರಿಕಾದ ಅಧ್ಯಕ್ಷರಾದ ಬಳಿಕ ಸೆಪ್ಟೆಂಬರ್ 23 ರಂದು ಮೋದಿ- ಜೋ ಬೈಡೆನ್ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಆಮೆರಿಕಾ ಪ್ರವಾಸವನ್ನು ಕೇಂದ್ರದ ವಿದೇಶಾಂಗ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಸೆಪ್ಟೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಜನರ ಹಕ್ಕುಗಳ ಬಗ್ಗೆಯೂ ಮಾತನಾಡಲು ಅವಕಾಶ ಇದೆ. ಹೀಗಾಗಿ ನೇರ, ಪರೋಕ್ಷವಾಗಿ ಅಫ್ಘನಿಸ್ತಾನದ ಮಾನವ ಹಕ್ಕುಗಳ ಉಲಂಘನೆ, ತಾಲಿಬಾನ್ ಕ್ರೌರ್ಯದ ಬಗ್ಗೆಯೂ ಪ್ರಸ್ತಾಪ ಮಾಡುವ ನಿರೀಕ್ಷೆ ಇದೆ.
ವಿಶೇಷ ವರದಿ: ಎಸ್. ಚಂದ್ರಮೋಹನ್, ಟಿವಿ9 ನ್ಯಾಷನಲ್ ಬ್ಯುರೋ ಮುಖ್ಯಸ್ಥರು
ಇದನ್ನೂ ಓದಿ: ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ಮರುಚಿಂತನೆ ಅಗತ್ಯ: ಯುಎಸ್ ನಿಲುವಿನ ಬಗ್ಗೆ ಆ್ಯಂಟನಿ ಬ್ಲಿಂಕನ್ ಮಾಹಿತಿ
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಲೇ ಇದೆ ತಾಲಿಬಾನ್ ಕ್ರೂರತೆ; ಉಗ್ರರ ದರ್ಬಾರ್ ಹೇಗಿದೆ ಗೊತ್ತಾ?
Published On - 4:43 pm, Tue, 14 September 21