ಅಫ್ಘಾನಿಸ್ತಾನದ ಸಹಸ್ರಾರು ಜನ ದೇಶದ ಗಡಿದಾಟಿ ಪಾಕಿಸ್ತಾನದೊಳಗೆ ಹೋಗುತ್ತಿರುವ ದೃಶ್ಯಗಳನ್ನು ಉಪಗ್ರಹ ಸೆರೆಹಿಡಿದಿದೆ

TV9 Digital Desk

| Edited By: Arun Kumar Belly

Updated on: Sep 13, 2021 | 11:51 PM

ಸ್ಪಿನ್ ಬೊಲ್ದಾಕ್ ಪ್ರದೇಶದಲ್ಲಿ ಅತಿಹೆಚ್ಚು ಪ್ರಮಾಣದ ಚಟುವಟಿಕೆ ಕಂಡುಬರುತ್ತಿದೆ. ಸದರಿ ಪ್ರದೇಶದಲ್ಲಿ ಜನಸಂಚಾರ ವಿಪರೀತ ಹೆಚ್ಚಾಗಿದೆ.

ಅಫ್ಘಾನಿಸ್ತಾನದ ಸಹಸ್ರಾರು ಜನ ದೇಶದ ಗಡಿದಾಟಿ ಪಾಕಿಸ್ತಾನದೊಳಗೆ ಹೋಗುತ್ತಿರುವ ದೃಶ್ಯಗಳನ್ನು ಉಪಗ್ರಹ ಸೆರೆಹಿಡಿದಿದೆ
ಪಾಕಿಸ್ತಾನದ ಗಡಿಭಾಗದಲ್ಲಿ ಆಫ್ಘನ್ನರು

ನವದೆಹಲಿ: ಎರಡು ವಾರಗಳ ಹಿಂದೆ ಅಫ್ಘಾನಿಸ್ತಾನದ ಸಾವಿರಾರು ಹತಾಷ ಜನರು ಯಾವಾಗ ಇಲ್ಲಿಂದ ಪಾರಾದೆವೋ ಅಂತ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವೆಗಳಂತೆ ಜಮಾಯಿಸಿದ್ದನ್ನು ಇಡೀ ವಿಶ್ವವೇ ನೋಡಿತು. ಎಲ್ಲ ಮಾಧ್ಯಮಗಳಲ್ಲಿ ಅದೇ ಸುದ್ದಿ. ಆದರೆ, ವಿಮಾನ ನಿಲ್ದಾಣವನ್ನು ತಾಲಿಬಾನಿಗಳು ವಶಡಿಸಿಕೊಂಡು ಅಂತರರಾಷ್ಟ್ರೀಯ ವಿಮಾನಗಳ ಸೇವೆ ಸ್ಥಗಿತಗೊಂಡ ನಂತರ ಆ ಜನರ ಗತಿ ಏನಾಯಿತು ಅನ್ನೋದು ಯಾರಿಗೂ ಗೊತ್ತಾಗಲಿಲ್ಲ. ಅಲ್ಲಿದ್ದ ಜನ ಎಲ್ಲಿಗೆ ಹೋದರು ಅಂತ ಸುದ್ದಿ ಮಾಧ್ಯಮಗಳು ವರದಿ ಮಾಡಲಿಲ್ಲ. ಆದರೆ, ಎನ್ ಡಿ ಟಿವಿಗೆ ಲಭ್ಯವಾಗಿರುವ ಉಪಗ್ರಹದ ಇಮೇಜ್ಗಳಲ್ಲಿ ಆಫ್ಘನ್ ಜನ ಅಫ್ಘಾನಿಸ್ತಾನಕ್ಕೆ ಅಂಟಿಕೊಂಡಿರುವ ಪಾಕಿಸ್ತಾನದ ಗಡಿ ಭಾಗದಲ್ಲಿ ಜಮಾವಣೆಗೊಂಡಿರುವುದು ಮತ್ತು ಪಾಕಿಸ್ತಾನದೊಳಗೆ ಹೋಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಉಜ್ಬೇಕಿಸ್ತಾನ, ತಜಿಕಿಸ್ತಾನ ಗಡಿ ಪ್ರದೇಶಗಳಲ್ಲೂ ಆಫ್ಘನ್ ಜನ ಕಾಣಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸ್ಪಿನ್ ಬೊಲ್ದಾಕ್ ಪ್ರದೇಶದಲ್ಲಿರುವ ಚಮನ್ ಗಡಿಭಾಗದ ಮೇಲೆ ಪೋಕಸ್ ಮಾಡಿ ಸ್ಯಾಟೆಲೈಟ್ ಸೆರೆಹಿಡಿದಿರುವ ಇಮೇಜ್ಗಳಲ್ಲಿ ಅದೇ ಹತಾಷ ಆಫ್ಘನ್ನರು ಪಾಕಿಸ್ತಾನದೊಳಗೆ ಹೋಗಲು ಕಾದಿರುವುದು, ಹೋಗುತ್ತಿರುವುದು ಕಾಣುತ್ತಿದೆ. ಅವರಲ್ಲಿ ದೇಶ ತೊರೆಯುವ ಧಾವಂತ ಸ್ಪಷ್ಟವಾಗಿದೆ.

ಸ್ಪಿನ್ ಬೊಲ್ದಾಕ್ ಪ್ರದೇಶ ಹೊರತಾಗಿ, ಅಫ್ಘಾನಿಸ್ತಾನ ತಜಿಕಿಸ್ತಾನ ಜೊತೆ ಶಿರ್ ಖಾನ್ ಗಡಿಭಾಗ ಮತ್ತು ಇರಾನ್ ಜೊತೆ ಇಸ್ಲಾಂ ಕಲಾ ಮತ್ತು ಪಾಕಿಸ್ತಾನೊಂದಿಗೆ ತೊರ್ಖಮ್ ಪ್ರದೇಶಗಳಲ್ಲಿ ಆಫ್ಘಾನಿಸ್ತಾನ ಗಡಿಯನ್ನು ಹಂಚಿಕೊಂಡಿದೆ.

ಸ್ಪಿನ್ ಬೊಲ್ದಾಕ್ ಪ್ರದೇಶದಲ್ಲಿ ಅತಿಹೆಚ್ಚು ಪ್ರಮಾಣದ ಚಟುವಟಿಕೆ ಕಂಡುಬರುತ್ತಿದೆ. ಸದರಿ ಪ್ರದೇಶದಲ್ಲಿ ಜನಸಂಚಾರ ವಿಪರೀತ ಹೆಚ್ಚಾಗಿದೆ. ಕಳೆದರೆಡು ವಾರಗಳಿಂದ ಅಫ್ಘಾನಿಸ್ತಾನದ ಜನ ತಮ್ಮ ಕುಟುಂಬಗಳು, ಸಾಮಾನು ಸರಂಜಾಮುಗಳನ್ನು ಹೊತ್ತು ಕಾಬೂಲ್ ಮತ್ತು ಬೇರೆ ಊರುಗಳಿಂದ ಪಾಕಿಸ್ತಾನಕ್ಕೆ ವಲಸೆ ಹೋಗುತ್ತಿದ್ದಾರೆ. ಗಡಿಭಾಗದಲ್ಲಿ ಹಾಕಿರುವ ತಾತ್ಕಾಲಿಕ ಡೇರೆಗಳಲ್ಲಿರುವ ಜನ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

ಸೆಪ್ಟೆಂಬರ್ 6 ರಂದು ಉಪಗ್ರಹದಿಂದ ಲಭ್ಯವಾಗಿರುವ ಚಿತ್ರದಲ್ಲಿ ಅಫ್ಘಾನಿಸ್ತಾನದ ಕಡೆಯಿರುವ ಗಡಿಭಾಗದಲ್ಲಿ ಅಸಂಖ್ಯಾತ ಜನ ಇರುವುದು ಕಾಣುತ್ತಿದೆ. ಪಾಕಿಸ್ತಾನವು ಇತ್ತೀಚಿಗೆ ಚಮನ್ ಗಡಿಭಾಗವನ್ನು ಮುಚ್ಚಿಬಿಟ್ಟಿದೆ.

ಉಪಗ್ರಹ ಸೆರೆ ಹಿಡಿದಿರುವ ಚಿತ್ರಗಳು ಆಫ್ಘನ್ ಜನರಲ್ಲಿ ಮನೆಮಾಡಿರುವ ಭೀತಿ, ಆತಂಕವನ್ನು ಸಾರಿ ಹೇಳುತ್ತವೆ. ತಾಲಿಬಾನಿಗಳ ದಮನಕಾರಿ ಆಡಳಿತದಲ್ಲಿ ಬದುಕಲಾರೆವು ಅನ್ನೋದು ಅವರಿಗೆ ಖಚಿತವಾಗಿಬಿಟ್ಟಿದೆ.

ಕಳೆದ ತಿಂಗಳು ತಾಲಿಬಾನಿಗಳು ಅಪ್ಘಾನಿಸ್ತಾನದ ಆಡಳಿತವನ್ನು ತಮ್ಮ ಕೈಗೆತ್ತಿಕೊಂಡ ನಂತರ ಅಲ್ಲಿನ ಜನ ಹಿಂಡುಹಿಂಡಾಗಿ ದೇಶ ತೊರೆಯುತ್ತಿದ್ದಾರೆ. 20 ವರ್ಷಗಳ ಹಿಂದೆ ತಾವು ನಡೆಸಿದ 5 ವರ್ಷಗಳ ಆಡಳಿತದಲ್ಲಿ ಜಾರಿಮಾಡಿದ್ದ ಕಠಿಣ ಕಾಯ್ದೆಗಳನ್ನು ಹೇರುವುದಿಲ್ಲ ಎಂದು ತಾಲಿಬಾನ್ ನಾಯಕರು ಹೇಳುತ್ತಿರುವರಾದರೂ, ಹೆಣ್ಣುಮಕ್ಕಳ ವಿಷಯದಲ್ಲಿ ಅವರು ತಳೆದಿರುವ ನಿಲುವುಗಳು ಅವರ ಅಸಲು ಮನಸ್ಥಿತಿಗೆ ಕನ್ನಡಿ ಹಿಡಿದಂತಿವೆ.

ಅವರು ಹೇಳುತ್ತಿರೋದೆ ಬೇರೆ ಅಫ್ಘಾನಿಸ್ತಾನದಲ್ಲಿರುವ ವಾಸ್ತವ ಸಂಗತಿಯೇ ಬೇರೆ.

ಇದನ್ನೂ ಓದಿ: Afghan Women: ನನ್ನ ಬಟ್ಟೆ ನನ್ನ ಇಷ್ಟ: ತಾಲಿಬಾನ್ ಹೇರಿದ ವಸ್ತ್ರಸಂಹಿತೆಗೆ ಸೆಡ್ಡು ಹೊಡೆದ ಅಫ್ಘಾನ್ ಮಹಿಳೆಯರು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada