ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣ ಸಮೀಪದ ಖಜೇಹ್ ಬಾಘ್ರಾ ಎಂಬಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಯಿಂದ ಮನೆಯೊಂದು ಛಿದ್ರವಾಗಿದ್ದು, ಮಗುವೊಂದು ಸಾವನ್ನಪ್ಪಿದೆ ಎಂದು ಕಾಬೂಲ್ ಪೊಲೀಸ್ ಇಲಾಖೆಯ ಮುಖ್ಯಸ್ಥ ರಶೀದ್ ಹೇಳಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಸತ್ತವರಲ್ಲಿ ಒಂದು ಮಗು ಮತ್ತು ಒಬ್ಬ ಮಹಿಳೆ ಇದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣಕ್ಕೆ ಒಂದು ಕಿಲೋಮೀಟರ್ ದೂರವಿರುವ ಕಟ್ಟಡದಿಂದ ದಟ್ಟ ಹೊಗೆ ಹೊರಬರುತ್ತಿರುವುದು ಕಾಣಿಸುತ್ತದೆ. ಈವರೆಗೆ ಯಾವುದೇ ಉಗ್ರರ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಅಮೆರಿಕ ಸೇನೆಯು ಕಾಬೂಲ್ನಲ್ಲಿ ಭಾನುವಾರ ಡ್ರೋಣ್ ದಾಳಿ ನಡೆಸಿದೆ. ಶಂಕಿತ ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಾಬೂಲ್ ವಿಮಾನ ನಿಲ್ದಾಣದತ್ತ ಹೊರಟಿದ್ದ ಹಲವು ಆತ್ಮಾಹುತಿ ಬಾಂಬರ್ಗಳಿದ್ದ ವಾಹನವನ್ನು ಡ್ರೋಣ್ ದಾಳಿಯಿಂದ ಸ್ಫೋಟಿಸಲಾಯಿತು. ಭದ್ರತೆಗೆ ಇದ್ದ ಆತಂಕವನ್ನು ಈ ಮೂಲಕ ನಿವಾರಿಸಲಾಯಿತು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ನ ವಕ್ತಾರ ಬಿಲ್ ಅರ್ಬನ್ ಹೇಳಿದ್ದಾರೆ. ಡ್ರೋಣ್ ದಾಳಿಯ ನಂತರ ಆದ ಸರಣಿ ಸ್ಫೋಟಗಳು ಆ ವಾಹನದಲ್ಲಿ ಸಾಕಷ್ಟು ಸ್ಫೋಟಕಗಳಿದ್ದವು ಎಂಬುದಕ್ಕೆ ಸಾಕ್ಷಿ. ಈ ವೇಳೆ ನಾಗರಿಕರಿಗೆ ಹಾನಿಯಾಯಿತೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಅವರು ಹೇಳಿದರು. ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಭಯೋತ್ಪಾದಕನ ಮೇಲೆ ಅಮೆರಿಕದ ಡ್ರೋಣ್ ದಾಳಿ ನಡೆಯಿತು ಎಂದು ತಾಲಿಬಾನ್ ಸಹ ಒಪ್ಪಿಕೊಂಡಿದೆ.
ಅಮೆರಿಕದ ಮಿಲಿಟರಿ ದಾಳಿ ಕುರಿತು ಪ್ರಸ್ತುತ ಅತ್ಯಲ್ಪ ಮಾಹಿತಿ ಲಭ್ಯವಿದೆ. ಅಮೆರಿಕದ ಡ್ರೋಣ್ ದಾಳಿ ಮತ್ತು ಉಗ್ರರು ನಡೆಸಿದ ರಾಕೆಟ್ ದಾಳಿಗಳು ಪ್ರತ್ಯೇಕ ಘಟನೆಗಳಾಗಿವೆ. ಆದರೆ ಎರಡೂ ಒಂದರ ಬೆನ್ನಿಗೆ ಒಂದು ನಡೆದದ್ದು ಜನರಲ್ಲಿ ಆತಂಕ ಹೆಚ್ಚಿಸಿತು. ಎರಡೂ ಸ್ಫೋಟಗಳ ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಳೆದ ಗುರುವಾರ ಉಗ್ರರು ಬಾಂಬ್ ಸ್ಫೋಟ ನಡೆಸಿದ ನಂತರ ಅಮೆರಿಕ ನಡೆಸಿದ ಎರಡನೇ ದಾಳಿಯಿದು. ನಂಗರ್ಹಾರ್ ಪ್ರಾಂತ್ಯದಲ್ಲಿ ಅಮೆರಿಕ ಪಡೆಗಳು ನಡೆಸಿದ್ದ ದಾಳಿಯಲ್ಲಿ ಕಾಬೂಲ್ ವಿಮಾನ ನಿಲ್ದಾಣದ ದಾಳಿಯನ್ನು ಸಂಘಟಿಸಿದ್ದವರನ್ನು ಕೊಲ್ಲಲಾಯಿತು ಎಂದು ಅಮೆರಿಕ ಹೇಳಿತ್ತು.
ಅಂತಿಮ ಹಂತದಲ್ಲಿ ಅಮೆರಿಕ ಸ್ಥಳಾಂತರ ಪ್ರಕ್ರಿಯೆ
ದೇಶದಿಂದ ಹೊರನಡೆಯಲು ತಾಲಿಬಾನ್ ನೀಡಿರುವ ಆಗಸ್ಟ್ 31ರ ಗಡುವು ಸಮೀಪಿಸುತ್ತಿರುವಂತೆ ಅಮೆರಿಕದ ಸ್ಥಳಾಂತರ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಅಫ್ಘಾನಿಸ್ತಾನದೊಂದಿಗೆ ಬ್ರಿಟನ್ ಈಗಾಗಲೇ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಳೆದುಕೊಂಡಿದೆ. ಕಾಬೂಲ್ನಿಂದ 2000ಕ್ಕೂ ಹೆಚ್ಚು ಬ್ರಿಟಿಷ್ ಪ್ರಜೆಗಳನ್ನು ಹೊತ್ತ ಕೊನೆಯ ವಿಮಾನಗಳು ಶನಿವಾರ ಹಾರಿದವು. ಇದರೊಂದಿಗೆ ಐದು ವರ್ಷಗಳ ಬ್ರಿಟಿಷ್ ಪಡೆಗಳ ನಿಯೋಜನೆ ಪೂರ್ಣಗೊಂಡಿದೆ.
ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಶಪಡಿಸಿಕೊಂಡಿತ್ತು. ಅನಂತರ ಹಲವು ದೇಶಗಳು ತಮ್ಮ ನಿವಾಸಿಗಳಿಗೆ ಅಫ್ಘಾನಿಸ್ತಾನದಿಂದ ಹೊರಗೆ ಬರುವಂತೆ ಕರೆ ನೀಡಿದ್ದವು.
(Rocket Attack Explosion Near Kabul Airport US Drone Attack Prevent Terror Threat)
ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ
ಇದನ್ನೂ ಓದಿ: Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?
Published On - 9:35 pm, Sun, 29 August 21