ತಾಲಿಬಾನ್ ಆಳ್ವಿಕೆಗೆ ಒಳಪಟ್ಟಿರುವ ಅಫ್ಘಾನಿಸ್ತಾನದಲ್ಲಿ (Afghanistan) ಅಗತ್ಯ ಸಾಮಾಗ್ರಿಗಳ ಬೆಲೆ ಗಗನಮುಖಿಯಾಗಿ ಸಾಗುತ್ತಿದ್ದು, ಜನ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಕಡ್ಡಾಯವಾಗಿ ಧರಿಸಬೇಕಿರುವ ಬುರ್ಕಾ (Burqa) ಬೆಲೆಯಲ್ಲೂ ಧಿಡೀರ್ ಏರಿಕೆ ಕಂಡಿದ್ದು, ತಾಲಿಬಾನ್ (Taliban) ಆಳ್ವಿಕೆ ಆರಂಭವಾದ ಮೇಲೆ ಈ ಬೆಳವಣಿಗೆ ಕಂಡುಬಂದಿದೆ. ಒಂದೆಡೆ ಹಣವೇ ಸಿಗದೆ ಜನರು ಪರದಾಡುತ್ತಿದ್ದರೆ ಇನ್ನೊಂದೆಡೆ ಬೆಲೆಯೇರಿಕೆ ಎಗ್ಗಿಲ್ಲದೇ ಆಗುತ್ತಿರುವುದು ಅಫ್ಘಾನಿಸ್ತಾನದ ಪ್ರಜೆಗಳನ್ನು ಆತಂಕಕ್ಕೆ ನೂಕಿದೆ.
ತಾಲಿಬಾನಿಯರ ಹಿಡಿತಕ್ಕೆ ಅಫ್ಘಾನಿಸ್ತಾನ ಸಿಗುವ ಮೊದಲು ಅಲ್ಲಿ ಲಭ್ಯವಾಗುತ್ತಿದ್ದ ಬುರ್ಕಾ ಬೆಲೆ 500 ರಿಂದ 600 ಅಫ್ಘನೀಸ್ (ಅಫ್ಘಾನಿಸ್ತಾನದ ಕರೆನ್ಸಿ) ಇತ್ತು. ಆದರೆ, ಯಾವಾಗ ತಾಲಿಬಾನ್ ಪ್ರಾಬಲ್ಯ ಸಾಧಿಸಿ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ತನ್ನ ಅಧಿಪತ್ಯ ಸಾಧಿಸಿತೋ ಆ ನಂತರ ಬುರ್ಕಾ ಧರಿಸುವುದು ಮತ್ತಷ್ಟು ಕಟ್ಟುನಿಟ್ಟಾಯಿತು. ಮಹಿಳೆಯರು ಕಡ್ಡಾಯವಾಗಿ ಬುರ್ಕಾ ಧರಿಸಲೇಬೇಕು ಎಂದು ಫತ್ವಾ ಹೊರಡಿಸಿದ ಕಾರಣ ಅಫ್ಘಾನಿಸ್ತಾನದಲ್ಲಿ ಈಗ ಒಂದು ಬುರ್ಕಾ ಬೆಲೆ 1,500 ರಿಂದ 2,500 ಅಫ್ಘನೀಸ್ಗೆ ತಲುಪಿದೆ. 500-600 ಅಫ್ಘನೀಸ್ ಆಸುಪಾಸಿನಲ್ಲಿದ್ದ ಬೆಲೆ 1,500-2,500 ಅಫ್ಘನೀಸ್ಗೆ ತಲುಪಿರುವುದು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದಕ್ಕೆ ಒಂದು ನಿದರ್ಶನವಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದಿಂದ ಮಹಿಳೆಯರು ಪ್ರಾಣ ಭೀತಿ ಎದುರಿಸುತ್ತಿದ್ದಾರೆ. ತಾಲಿಬಾನ್ ವಶವಾಗಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವುದಾಗಿ ತಾಲಿಬಾನ್ ಸಂಘಟನೆ ಭರವಸೆ ನೀಡಿತ್ತು. ಆದರೆ, ಉಗ್ರರ ಆಡಳಿತದಿಂದ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ನರಕ ದರ್ಶನವಾಗುತ್ತಿದೆ. ಅಫ್ಘಾನಿಸ್ತಾನದ 12ರಿಂದ 45 ವರ್ಷದೊಳಗಿನ ಮಹಿಳೆಯರನ್ನು ಮದುವೆಯಾಗಿ, ಲೈಂಗಿಕ ದಾಸಿಯರನ್ನಾಗಿ ಮಾಡಿಕೊಳ್ಳುತ್ತಿರುವ ತಾಲಿಬಾನ್ ಉಗ್ರರು ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದಾರೆ. ಮಹಿಳಾ ಪರ್ತಕರ್ತೆಯರು, ಆ್ಯಂಕರ್ಗಳನ್ನು ವಾಪಾಸ್ ಮನೆಗೆ ಕಳುಹಿಸಲಾಗಿದ್ದು, ಮಹಿಳೆಯರು ಜೀನ್ಸ್ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ.
ಅಫ್ಘಾನಿಸ್ತಾನದಲ್ಲಿರುವ ಮಹಿಳೆಯರು ಉಗುರಿಗೆ ನೇಲ್ ಪಾಲಿಶ್ ಹಚ್ಚಿಕೊಂಡರೆ ಅವರ ಕೈ ಬೆರಳನ್ನೇ ಕಟ್ ಮಾಡುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ. ಮಹಿಳೆಯರು ಜೀನ್ಸ್ ಧರಿಸುವಂತಿಲ್ಲ, ಮೈ ತುಂಬ ಬುರ್ಖಾ ಧರಿಸದೆ ಹೊರಗೆ ಓಡಾಡುವಂತಿಲ್ಲ. ಒಂದುವೇಳೆ ಈ ನಿಯಮಗಳನ್ನು ಮೀರಿದರೆ ಆ ಮಹಿಳೆಯರಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಇತ್ತೀಚೆಗೆ ಜೀನ್ಸ್ ಧರಿಸಿದ ಮಹಿಳೆಯರಿಗೆ ತಾಲಿಬಾನ್ ಉಗ್ರರು ಥಳಿಸಿದ ಘಟನೆಯೂ ನಡೆದಿತ್ತು. ಜೀನ್ಸ್ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದ್ದು, ಅದನ್ನು ಧರಿಸುವಂತಿಲ್ಲ ಎಂದು ಬಂದೂಕು ತೋರಿಸಿ, ಬೆದರಿಕೆಯೊಡ್ಡಿದ್ದರು.
ಕಂದಹಾರ್ನಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಫತ್ವಾ ಹೊರಡಿಸಲಾಗಿದ್ದು, ನೇಲ್ ಪಾಲಿಶ್ ಹಚ್ಚಿಕೊಂಡರೆ ಬೆರಳನ್ನೇ ಕತ್ತರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಹಾಗೇ, ಮಹಿಳೆಯರು ಹೈ ಹೀಲ್ಡ್ ಚಪ್ಪಲಿಗಳನ್ನು ಕೂಡ ಧರಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳಿಂದ ಅಫ್ಘಾನ್ ಮಹಿಳೆಯರ ಪರಿಸ್ಥಿತಿ ಶೋಚನೀಯವಾಗಿದೆ.
ಇದನ್ನೂ ಓದಿ:
ನೇಲ್ ಪಾಲಿಶ್ ಹಚ್ಚಿದರೆ ಅಫ್ಘಾನಿಸ್ತಾನದ ಮಹಿಳೆಯರ ಬೆರಳೇ ಕಟ್!; ತಾಲಿಬಾನ್ ಹೊಸ ನಿಯಮ
ವಿವಿಧ ಇಲಾಖೆಗಳಿಗೆ ಹಂಗಾಮಿ ಸಚಿವರನ್ನು ನೇಮಿಸಿದ ತಾಲಿಬಾನ್; ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ
(Taliban Afghanistan crisis hike in Burqa Price and all essential commodities)