AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಡ್‌ಲೈನ್‌ಗೂ 24 ತಾಸು ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕಾ ಸೇನೆ, ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನ್​​

ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

ಡೆಡ್‌ಲೈನ್‌ಗೂ 24 ತಾಸು ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕಾ ಸೇನೆ, ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನ್​​
ಸಾಂಕೇತಿಕ ಚಿತ್ರ
TV9 Web
| Updated By: ಡಾ. ಭಾಸ್ಕರ ಹೆಗಡೆ|

Updated on:Aug 31, 2021 | 12:42 PM

Share

ತಾಲಿಬಾನಿಗಳ ಕೈವಶವಾಗಿರುವ ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ಜಾಗ ಖಾಲಿ ಮಾಡಿದೆ. ತಾಲಿಬಾನ್​ ಉಗ್ರರು ನೀಡಿದ್ದ ಗಡುವಿಗಿಂತ 24 ತಾಸು ಮುಂಚಿತವಾಗಿ ಅಮೆರಿಕಾ ಸೇನೆ ಕಾಬೂಲ್ ಏರ್‌ಪೋರ್ಟ್‌ನಿಂದ ತೆರಳಿದ್ದು, ನಿನ್ನೆ ರಾತ್ರಿ ಅಮೆರಿಕದ 3 ವಿಮಾನಗಳಲ್ಲಿ ಯೋಧರನ್ನು ಶಿಫ್ಟ್ ಮಾಡಲಾಗಿದೆ. ಅಮೆರಿಕಾ ಸೇನೆ ಹೊರಡುತ್ತಿದ್ದಂತೆಯೇ ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬಳಸಿದ್ದ ಎಲ್ಲ ಯುದ್ಧೋಪಕರಣಗಳು ಮತ್ತು ವೈಮಾನಿಕ ವಾಹನಗಳನ್ನು ವಾಪಸ್ ಕೊಂಡೊಯ್ಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೃಹತ್ ಪ್ರಮಾಣದ ಯುದ್ಧೋಪಕರಣಗಳು ಅಫ್ಘಾನಿಸ್ತಾನದ ತಾಲಿಬಾನಿಯರ ವಶಕ್ಕೆ ಸಿಕ್ಕಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಬಿಟ್ಟು ಹೋಗಿರುವ ಸುಮಾರು 200 ವಿಮಾನ, ಹೆಲಿಕಾಪ್ಟರ್​ಗಳು ಹಾಗೂ 85 ಶತಕೋಟಿ ಡಾಲರ್ ಮೌಲ್ಯದ ಯುದ್ಧೋಪಕರಣಗಳು ತಾಲಿಬಾನ್ ವಶಕ್ಕೆ ಬಂದಿವೆ ಎಂದು ಹೇಳಲಾಗಿದೆ. ತಾಲಿಬಾನ್ ಕೈಸೇರಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರ್ಣ ವಿವರ ಇನ್ನೂ ಸಿಕ್ಕಿಲ್ಲ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ಕೈವಶವಾಗಿ 15 ದಿನ ಕಳೆದರೂ ತಾಲಿಬಾನ್ ಸಂಘಟನೆಯ ಪರಮೋಚ್ಛ ನಾಯಕ ಹೇಬಿತುಲ್ಲಾ ಅಖುಂದಾಜಾ ಈವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೇಬಿತುಲ್ಲಾ ಅಖುಂದಾಜಾ ಕಂದಹಾರ್‌ ನಗರದಲ್ಲಿದ್ದಾರೆ. ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾನೆ.

ಅತಂತ್ರರಾದ ಜನರು ಅಫ್ಘಾನಿಸ್ತಾನದ ಜನರು ದೇಶಬಿಟ್ಟು ಹೊರನಡೆಯುತ್ತಿರುವುದು ಈಗ ದೊಡ್ಡ ಸುದ್ದಿಯಾಗುತ್ತಿದೆಯಾದರೂ, ಕಳೆದ ಹತ್ತಾರು ವರ್ಷಗಳಿಂದ ಈ ವಿದ್ಯಮಾನ ನಡೆಯುತ್ತಲೇ ಇದೆ. ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಒಕ್ಕೂಟದ ಆಕ್ರಮಣ, ಅದಕ್ಕೆ ಮುಜಾಹಿದ್ದೀನ್​ಗಳ ಪ್ರತಿರೋಧ, ನಂತರ ತಾಲಿಬಾನಿಗಳ ಮೇಲುಗೈ, ಅಮೆರಿಕದಿಂದ ಮೊದಲ 20 ವರ್ಷಗಳ ಹಿಂದೆ ತಾಲಿಬಾನ್ ಸರ್ಕಾರದ ಪತನ, ಇದೀಗ ತಾಲಿಬಾನಿಗಳಿಂದ ಅಮೆರಿಕ ಬೆಂಬಲಿತ ಸರ್ಕಾರದ ಪತನ ಸೇರಿದಂತೆ ಪ್ರತಿ ಸ್ಥಿತ್ಯಂತರವೂ ಲಕ್ಷಾಂತರ ನಿರಾಶ್ರಿತರನ್ನು ಹುಟ್ಟುಹಾಕಿದೆ.

ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿಯೇ ಯುದ್ಧದಾಹಿ ವಾರ್​ಲಾರ್ಡ್​ಗಳ ಕಾಟದಿಂದ ಹೈರಾಣಾಗಿ ಸ್ವಂತ, ಮನೆ, ಭೂಮಿ ಕಳೆದುಕೊಂಡು ಸ್ವದೇಶದಲ್ಲಿಯೇ ನಿರಾಶ್ರಿತರಾದವರ ಸಂಖ್ಯೆಯೂ ಬೃಹತ್ ಪ್ರಮಾಣದಲ್ಲಿದೆ. ಅಫ್ಘಾನ್ ನಿರಾಶ್ರಿತರ ಬಗ್ಗೆ ಅಫ್ಘಾನಿಸ್ತಾನದ ಮಾನವ ಹಕ್ಕು ಆಯೋಗದ ಮುಖ್ಯಸ್ಥ ಶಹರ್​ಜಾದ್ ಅಹಮದ್ ‘ದಿ ಕಾನ್​ವರ್ಸೇಶನ್’ ಜಾಲತಾಣಕ್ಕೆ ಸುದೀರ್ಘ ಲೇಖನ ಬರೆದಿದ್ದಾರೆ.

ಯಾವ ದೇಶದಲ್ಲಿ ಎಷ್ಟು ಮಂದಿಗೆ ಆಶ್ರಯ? 2020ರಲ್ಲಿ ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಆಶ್ರಯ ಕೊಟ್ಟ ಮೊದಲ 10 ದೇಶಗಳ ವಿವರ ಹೀಗಿದೆ. ಪಾಕಿಸ್ತಾನ 14,38,432, ಇರಾನ್ 7,78,000, ಜರ್ಮನಿ 1,47,994, ಆಸ್ಟ್ರಿಯಾ 40,096, ಫ್ರಾನ್ಸ್​ 31,546, ಸ್ವೀಡನ್ 29,927, ಗ್ರೀಸ್ 21,456, ಸ್ವಿಟ್ಜರ್​ಲೆಂಡ್ 14,523, ಇಟಲಿ 12,096, ಆಸ್ಟ್ರೇಲಿಯಾ 10,659. ಭಾರತವು 2020ರಲ್ಲಿ 8,275 ಮಂದಿಗೆ ಆಶ್ರಯ ನೀಡಿದೆ. ಅಮೆರಿಕ ಕೇವಲ 1,592 ಮಂದಿಗೆ ಆಶ್ರಯ ನೀಡಿದೆ.

ನಾಯಿ ಬೆಕ್ಕುಗಳು ಏರ್​ಲಿಫ್ಟ್​ ಅಫ್ಘಾನಿಸ್ತಾನದಲ್ಲಿದ್ದ ಬ್ರಿಟನ್ ನಾಗರಿಕ ಪೆನ್ ಫಾರ್ಥಿಂಗ್ ಸಾಕಿಕೊಂಡಿದ್ದ 170 ನಾಯಿ, ಬೆಕ್ಕುಗಳನ್ನು ಏರ್​ಲಿಫ್ಟ್ ಮಾಡಲಾಗಿದೆ. ಏರ್​ಲಿಫ್ಟ್​ಗಾಗಿ ದೇಣಿಗೆ ಮೂಲಕ ಹಣ ಸಂಗ್ರಹಿಸಲಾಗಿತ್ತು. ಆಫ್ಘನ್‌ನಲ್ಲಿ ಬ್ರಿಟನ್ ಸೇನೆ ಯೋಧನಾಗಿದ್ದ ಫಾರ್ಥಿಂಗ್​ಗೆ ನಾಯಿ-ಬೆಕ್ಕುಗಳ ಬಗ್ಗೆ ಪ್ರೀತಿಯಿತ್ತು.

(US Military forces vacate Afghanistan Taliban took over the control of Kabul Airport)

ಇದನ್ನೂ ಓದಿ: ನೆಲೆಗಾಗಿ ಅಲೆದಾಟ: ಅಫ್ಘಾನ್ ನಿರಾಶ್ರಿತರ ಬಗ್ಗೆ ಅಮೆರಿಕದ ಉದಾಸೀನ ಧೋರಣೆ 

ಅಫ್ಘಾನ್​ನಿಂದ ಅಮೆರಿಕ ಪಡೆಗಳು ಹಿಂದೆ ಸರಿದ ನಂತರ ಜಮ್ಮು ಕಾಶ್ಮೀರದಲ್ಲಿ ಹೆಚ್ಚಾಯ್ತು ಉಗ್ರರ ಉಪಟಳ

Published On - 7:56 am, Tue, 31 August 21