AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್​ನಿಂದ ಅಮೆರಿಕ ಪಡೆಗಳು ಹಿಂದೆ ಸರಿದ ನಂತರ ಜಮ್ಮು ಕಾಶ್ಮೀರದಲ್ಲಿ ಹೆಚ್ಚಾಯ್ತು ಉಗ್ರರ ಉಪಟಳ

ನಿಖರ ಪ್ಲಾನಿಂಗ್​ನೊಂದಿಗೆ ಉಗ್ರಗಾಮಿಗಳ ಆರು ತಂಡಗಳು ಕಾಶ್ಮೀರ ಕಣಿವೆಯೊಳಗೆ ನುಸುಳಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅಫ್ಘಾನ್​ನಿಂದ ಅಮೆರಿಕ ಪಡೆಗಳು ಹಿಂದೆ ಸರಿದ ನಂತರ ಜಮ್ಮು ಕಾಶ್ಮೀರದಲ್ಲಿ ಹೆಚ್ಚಾಯ್ತು ಉಗ್ರರ ಉಪಟಳ
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 30, 2021 | 7:39 PM

Share

ದೆಹಲಿ: ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾ ಪಡೆಗಳು ಹಿಂದಿರುಗಿದ ನಂತರ ವಿಶ್ವದ ರಕ್ಷಣಾ ವಲಯದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ವರದಿಯಾಗುತ್ತಿವೆ. ಜಮ್ಮು ಕಾಶ್ಮೀರದಲ್ಲಿ ಈ ಬೆಳವಣಿಗೆಯ ಪರಿಣಾಮ ಈಗಾಗಲೇ ಕಾಣಿಸಿಕೊಂಡಿದೆ. ನಿಖರ ಪ್ಲಾನಿಂಗ್​ನೊಂದಿಗೆ ಉಗ್ರಗಾಮಿಗಳ ಆರು ತಂಡಗಳು ಕಾಶ್ಮೀರ ಕಣಿವೆಯೊಳಗೆ ನುಸುಳಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಮಾಹಿತಿಯನ್ನು ದೇಶದ ವಿವಿಧ ಏಜೆನ್ಸಿಗಳ ಸಮನ್ವಯಕ್ಕಾಗಿ ಸ್ಥಾಪಿಸಿರುವ ವಿಶೇಷ ಸಂಸ್ಥೆಯು ಪರಿಶೀಲಿಸುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಎನ್​ಡಿಟಿವಿ ಜಾಲತಾಣ ವರದಿ ಮಾಡಿದೆ.

ಕಾಶ್ಮೀರದಲ್ಲಿ ಈಗಾಗಲೇ ಇರುವ ಭಯೋತ್ಪಾದಕರ ಜೊತೆಗೆ ಹೆಚ್ಚುವರಿಯಾಗಿ ಸುಮಾರು 30 ಮಂದಿ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆಯನ್ನು ಭದ್ರತಾ ಪಡೆಗಳು ಗುರುತಿಸಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಣಿವೆಯಲ್ಲಿ ಹಿಂಸಾಚಾರದ ಪ್ರಮಾಣ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಿಂದ ಪ್ರತಿದಿನ ಎಂಬಂತೆ ಭದ್ರತಾ ಪಡೆಗಳ ಮೇಲೆ ಸುಧಾರಿತ ಸ್ಫೋಟಕಗಳಿಂದ ದಾಳಿ ನಡೆಸುವುದು ಅಥವಾ ರಾಜಕೀಯ ನಾಯಕರ ಮೇಲೆ ದಾಳಿಗಳು ವರದಿಯಾಗುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅವರ ಪ್ರಕಾರ ಭಯೋತ್ಪಾದನೆಯ ಚಿಮ್ಮುಹಲಗೆಗಳು ಎಂದು ಕರೆಯಲಾಗುವ ಪ್ರದೇಶಗಳಲ್ಲಿಯೂ ಉಗ್ರರ ಚಟುವಟಿಕೆಗಳು ಹೆಚ್ಚಾಗಿವೆ. ಕಳೆದ ಫೆಬ್ರುವರಿಯಂದು ಜಾರಿಗೆ ಬಂದ ಕದನ ವಿರಾಮದ ನಂತರ ಇಂಥ ಬಹುತೇಕ ತರಬೇತಿ ಕೇಂದ್ರಗಳು ನಿಷ್ಕ್ರಿಯವಾಗಿದ್ದವು. ಆದರೆ ಈಗ ಇಲ್ಲಿ ಚಟುವಟಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಗಡಿ ನಿಯಂತ್ರಣಾ ರೇಖೆಯ ಬಳಿ ಸುಮಾರು 300 ಭಯೋತ್ಪಾದಕರು ಮತ್ತೆ ಇಂಥ ಶಿಬಿರಗಳಿಗೆ ಬಂದಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ನಮಗೆ ಮಾಹಿತಿ ತಿಳಿದಿದೆ. ಪರಿಸ್ಥಿತಿ ನಿರ್ವಹಿಸಲು ಸಿದ್ಧರಾಗಿದ್ದೇವೆ ಎಂದು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ನೇತೃತ್ವ ವಹಿಸಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಲಿಬಾನಿಗಳು ಎರಡು ವಾರಗಳ ಹಿಂದೆ ಕಾಬೂಲ್ ವಶಪಡಿಸಿಕೊಂಡ ನಂತರ ಭಾರತದಲ್ಲಿಯೂ ಹಲವು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ತಾಲಿಬಾನಿಗಳ ಜೊತೆಗೆ ಹೋರಾಡಲು ಹೋಗಿದ್ದ ಇಬ್ಬರು ಯುವಕರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹಿಂದಿರುಗುವ ವಿಡಿಯೊ ಒಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲರ ಗಮನ ಸೆಳೆದಿತ್ತು. ಕಾಬೂಲ್ ಗೆದ್ದ ನಂತರ ವಾಪಸಾದ ಇವರಿಗೆ ಯುದ್ಧ ಜಯಿಸುವ ನಾಯಕರಿಗೆ ಸಿಗುವಂಥ ಸ್ವಾಗತ ಸಿಕ್ಕಿತ್ತು.

ಹೊಸಬರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಸೆಳೆಯಲು ಸಾಮಾಜಿಕ ಮಾಧ್ಯಮಗಳನ್ನು ಉಗ್ರರು ಗಾಳವಾಗಿ ಬಳಸುತ್ತಿದ್ದಾರೆ. ತಾಲಿಬಾನಿಗಳ ಪರ ಹೋರಾಡಿದವರ ವಿಡಿಯೊ ಕ್ಲಿಪ್​ಗಳು ಮತ್ತು ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಭದ್ರತಾ ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಈಚೆಗೆ ಸುಮಾರು 60 ಯುವಕರು ಮನೆಗಳಿಂದ ನಾಪತ್ತೆಯಾಗಿರುವುದು ಜಮ್ಮು ಕಾಶ್ಮೀರದ ಪೊಲೀಸರ ನಿದ್ದೆಗೆಡಿಸಿದೆ. ‘ಯಾವುದೋ ಕೆಲಸದ ಮೇಲೆ ಹೋಗುವುದಾಗಿ ಹೇಳಿ ಹೊರಟ ಈ ಯುವಕರು ಇದೀಗ ನಾಪತ್ತೆಯಾಗಿದ್ದಾರೆ. ಇದೊಂದು ಸಮಸ್ಯೆಯಾಗಿದೆ. ದಾರಿತಪ್ಪಿ ಭಯೋತ್ಪಾದಕ ಗುಂಪುಗಳಿಗೆ ಸೇರಿಕೊಂಡಿರುವ ಯುವಕರು ಹಿಂಸೆಯನ್ನು ತ್ಯಜಿಸಿ ಮನೆಗಳಿಗೆ ಹಿಂದಿರುಗಬೇಕು ಎಂದು ಕೋರುತ್ತಿದ್ದೇವೆ ಎಂಬ ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಅವರ ಹೇಳಿಕೆಯನ್ನೂ ಎನ್​ಡಿಟಿವಿ ವರದಿ ಮಾಡಿವೆ.

(Terror Attacks Rise In Jammu and Kashmir As American forces Pulls Out Of Afghanistan)

ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ

ಇದನ್ನೂ ಓದಿ: ತಾಲಿಬಾನ್ ನಾಯಕರನ್ನು ಭೇಟಿಯಾಗಿ ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೋರಿದ ಉಗ್ರ ಮಸೂದ್ ಅಜರ್