AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ಘನ್​​ನಲ್ಲಿ ಮತ್ತಷ್ಟು ವಿಧ್ವಂಸಕ ಕೃತ್ಯಕ್ಕೆ ಸಿದ್ಧರಾದ ಉಗ್ರರು; ಹೆಡೆಮುರಿ ಕಟ್ಟಲು ಯೋಜನೆ ರೂಪಿಸುವಂತೆ ಪೆಂಟಗನ್​ಗೆ ಆದೇಶ

ಅಮೆರಿಕ ಸೇನೆಯನ್ನ ಗುರಿಯಾಗಿಸಿ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರನ್ನು ಯಾವುದೇ ಕ್ಷಣದಲ್ಲಿ ಸದೆ ಬಡಿಯಲು ಯೋಜನೆ ರೂಪಿಸಬೇಕು ಎಂದು ಅಮೆರಿಕ ಸೇನೆ ಮೇಜರ್ ಜನರಲ್​ ಕೆನ್ನೆತ್ ಮೆಕೆಂಜಿ ಹೇಳಿಕೆ ನೀಡಿದ್ದಾರೆ.

ಆಫ್ಘನ್​​ನಲ್ಲಿ ಮತ್ತಷ್ಟು ವಿಧ್ವಂಸಕ ಕೃತ್ಯಕ್ಕೆ ಸಿದ್ಧರಾದ ಉಗ್ರರು; ಹೆಡೆಮುರಿ ಕಟ್ಟಲು ಯೋಜನೆ ರೂಪಿಸುವಂತೆ ಪೆಂಟಗನ್​ಗೆ ಆದೇಶ
ಸಾಂಕೇತಿಕ ಚಿತ್ರ
TV9 Web
| Updated By: Skanda|

Updated on: Aug 27, 2021 | 10:06 AM

Share

ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಗ್ರ ಸಂಘಟನೆ ಐಸಿಸ್​-ಕೆ (ISIS-K) ಹೊಣೆ ಹೊತ್ತುಕೊಂಡಿದೆ. ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದಲ್ಲಿ (Afghanistan) ಮತ್ತಷ್ಟು ವಿಧ್ವಂಸಕ ಕೃತ್ಯಕ್ಕೆ ಉಗ್ರರು ಸಿದ್ಧರಾಗುತ್ತಿದ್ದಾರೆ ಎಂಬ ಅನುಮಾನ ದಟ್ಟವಾಗಿದ್ದು, ರಾಕೆಟ್ ಲಾಂಚರ್, ಶಸ್ತ್ರಸಜ್ಜಿತ ವಾಹನಗಳಿಂದ ದಾಳಿ ಸಾಧ್ಯತೆ ಇದೆ. ದಾಳಿ ಸಾಧ್ಯತೆ ಬಗ್ಗೆ ಅಮೆರಿಕ ಸೇನೆ ಮುನ್ಸೂಚನೆಯನ್ನೂ ನೀಡಿದ್ದು, ಐಸಿಸ್-ಕೆ ಉಗ್ರರನ್ನು ಮಟ್ಟ ಹಾಕಲು ಯೋಜನೆ ರೂಪಿಸುವಂತೆ ಪೆಂಟಗನ್​ಗೆ ಮೇಜರ್ ಜನರಲ್ ಮೆಕೆಂಜಿ ಆದೇಶ ನೀಡಿದ್ದಾರೆ.

ಅಮೆರಿಕ ಸೇನೆಯನ್ನ ಗುರಿಯಾಗಿಸಿ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರನ್ನು ಯಾವುದೇ ಕ್ಷಣದಲ್ಲಿ ಸದೆ ಬಡಿಯಲು ಯೋಜನೆ ರೂಪಿಸಬೇಕು ಎಂದು ಅಮೆರಿಕ ಸೇನೆ ಮೇಜರ್ ಜನರಲ್​ ಕೆನ್ನೆತ್ ಮೆಕೆಂಜಿ ಹೇಳಿಕೆ ನೀಡಿದ್ದಾರೆ. ಉಗ್ರರ ಮಟ್ಟಕ್ಕೆ ಪ್ಲ್ಯಾನ್ ರೂಪಿಸಲು ಪೆಂಟಗನ್​ಗೆ ಆದೇಶ ನೀಡಲಾಗಿದ್ದು, ರಾಕೆಟ್ ಲಾಂಚರ್, ಶಸ್ತ್ರಸಜ್ಜಿತ ವಾಹನಗಳಿಂದ ದಾಳಿ ಸಾಧ್ಯತೆ ಇದೆ. ಪ್ರತಿದಾಳಿಗೆ ಸಿದ್ಧರಾಗಿ ಎಂದು ಹೇಳಿದ್ದಾರೆ.

ಇನ್ನು ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ಸರಣಿ ಸ್ಫೋಟ ಪ್ರಕರಣದಲ್ಲಿ ಹುತಾತ್ಮರಾದ ಯೋಧರಿಗೆ ಅಮೆರಿಕದಿಂದ ಗೌರವ ಸಲ್ಲಿಸಲಾಗುತ್ತಿದ್ದು, ಆಗಸ್ಟ್​ 30 ರವರೆಗೆ ಶ್ವೇತಭವನದ ಮೇಲೆ ಅರ್ಧಕ್ಕೆ ಧ್ವಜ ಹಾರಿಸಲು ನಿರ್ಧರಿಸಲಾಗಿದೆ. ಅಂತೆಯೇ, ಹುತಾತ್ಮರಾದ ಅಮೆರಿಕಾ ಯೋಧರ ಬಗ್ಗೆ ಮಾತನಾಡಿದ ಅಮೆರಿಕ ವಿದೇಶಾಂಗ ಸಚಿವ ಆ್ಯಂಟೋನಿ ಬ್ಲಿಂಕೆನ್, 2001ರಿಂದ ಈವರೆಗೆ ಆಫ್ಘನ್‌ನಲ್ಲಿ 2,300 ಯೋಧರು ಹುತಾತ್ಮರಾಗಿದ್ದಾರೆ. 20 ಸಾವಿರಕ್ಕೂ ಹೆಚ್ಚು ಅಮೆರಿಕ ಯೋಧರಿಗೆ ಗಾಯಗಳಾಗಿವೆ. ಸುದೀರ್ಘ ಯುದ್ಧದಲ್ಲಿ ಸೇವೆ ಸಲ್ಲಿಸಿದ ಯೋಧರನ್ನ ಗೌರವಿಸುತ್ತೇವೆ. ಅವರ ಸೇವೆಯನ್ನು ಸದಾ ಸ್ಮರಿಸುತ್ತೇವೆ ಎಂದು ತಿಳಿಸಿದ್ದಾರೆ.

ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ಖಡಕ್​ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಎಚ್ಚರಿಸಿದ್ದಾರೆ.

ಉಗ್ರರ ಇಂತಹ ದಾಳಿಗಳಿಂದ ಅಮೆರಿಕ ಕಂಗೆಡುವುದಿಲ್ಲ. ಜನರನ್ನು ಸ್ಥಳಾಂತರ ಮಾಡುವುದನ್ನೂ ನಿಲ್ಲಿಸುವುದಿಲ್ಲ. ನೀವು ಏನೇ ಮಾಡಿದರೂ ನಾವು ಜನರನ್ನು ಸ್ಥಳಾಂತರ ಮಾಡಿಯೇ ತೀರುತ್ತೇವೆ. ಈಗಾಗಲೇ ಐಸಿಸ್-ಕೆ ವಿರುದ್ಧ ಕಾರ್ಯಾಚರಣೆಗೆ ಯೋಜನೆ ರೂಪಿಸಲು ಸೂಚಿಸಲಾಗಿದೆ. ನಾವು ಎಲ್ಲಿ ಹೊಡೆಯಬೇಕು, ಹೇಗೆ ಹೊಡೆಯಬೇಕು, ಎಷ್ಟೊತ್ತಿಗೆ ಹೊಡೆಯಬೇಕೋ ಅಷ್ಟೊತ್ತಿಗೆ ಹೊಡೆಯುತ್ತೇವೆ. ನಮ್ಮ ವಿರುದ್ಧ ಐಸಿಸ್​ ಉಗ್ರರು ಗೆಲುವು ಸಾಧಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಮರೆಯುವುದಿಲ್ಲ. ಉಗ್ರರನ್ನು ಕೊಲ್ಲುವ ಮೂಲಕ ತಕ್ತ ಶಾಸ್ತಿ ಮಾಡುತ್ತೇವೆ. ಪ್ರತಿದಿನ ನಾನು ನಮ್ಮ ಕಮಾಂಡರ್​ಗಳ ಜೊತೆ ಮಾತನಾಡುವಾಗ, ನಮ್ಮ ಕಾರ್ಯ ಸಾಧಿಸಲು ನಿಮಗೆ ಇನ್ನೇನು ನೆರವು ಬೇಕು ಎಂದು ಕೇಳುತ್ತೇನೆ. ಅವರ ಎಲ್ಲ ಬೇಡಿಕೆಗಳನ್ನ ನಾನು ಈಡೇರಿಸಿದ್ದೇನೆ. ಮೂರು ಪ್ರತ್ಯೇಕ ಬಾರಿ ಮಾತುಕತೆ ನಡೆಸಿದ್ದು, ಅವರಿಗೆ ಬೇಕಾದ ಎಲ್ಲವನ್ನೂ ಪೂರೈಸಲಾಗಿದೆ. ಇದಕ್ಕಾಗಿ ನಾನು ಅಮೆರಿಕದ ರಕ್ಷಣಾ ಇಲಾಖೆ ಮತ್ತು ಪೆಂಟಗನ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ರಕ್ಷಣೆಗೆ ಯಾರನ್ನ ಕಳುಹಿಸಬೇಕು? ನಮಗಾಗಿ ಯಾರು ಹೋಗ್ತೀರಿ? ಎಂಬ ದೇವರ ಪ್ರಶ್ನೆಗೆ ಅಮೆರಿಕ ಸೇನೆ ಹಲವಾರು ವರ್ಷಗಳಿಂದ ಉತ್ತರ ನೀಡುತ್ತಿದೆ. ದೇವರೇ ನನ್ನನ್ನು ಕಳುಹಿಸಿ ಎಂದು ಉತ್ತರಿಸಿದೆ. ನಿನಗಾಗಿ ನಾನಿದ್ದೇನೆ ನನ್ನನ್ನೇ ಕಳುಹಿಸು ಎಂದು ಹೇಳುತ್ತಿದೆ. ಹೀಗಾಗಿ ಅಮೆರಿಕ ಎಂದೂ ಹಿಂದಡಿ ಇಡುವುದಿಲ್ಲ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Taliban vs ISIS-K: ತಾಲಿಬಾನ್​​ನಿಂದ ಹೊರ ಬಂದವರೇ ಐಸಿಸ್​-ಕೆ ಸ್ಥಾಪಕ ಸದಸ್ಯರು; ಉಗ್ರರಿಗೆ ಉಗ್ರರೇ ಶತ್ರು 

Kabul Airport Blast: ಅಫ್ಘಾನಿಸ್ತಾನದಲ್ಲಿ ಸರಣಿ ಸ್ಫೋಟ: ದುಷ್ಕೃತ್ಯದ ಹೊಣೆ ಹೊತ್ತ ಐಸಿಸ್​-ಕೆ ಸಂಘಟನೆ