ದೋಹಾ: ಅಫ್ಘಾನಿಸ್ತಾನದಲ್ಲಿ ಪ್ರಸ್ತುತವಾಗಿ ಜಾರಿಯಲ್ಲಿರುವ ಹಿಂಸೆ ಮತ್ತು ಯುದ್ಧವನ್ನು ನಿಲ್ಲಿಸಿದರೆ ಅಧಿಕಾರವನ್ನು ಹಂಚಿಕೊಳ್ಳುವ ಅವಕಾಶ ನೀಡುವುದಾಗಿ ಸರ್ಕಾರದ ಪರ ಸಂಧಾನದ ಮಾತುಕತೆ ನಡೆಸಲು ಕತಾರ್ಗೆ ಆಗಮಿಸಿದ್ದ ಪ್ರತಿನಿಧಿಗಳು ಹೇಳಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಆಧರಿಸಿ ಆಂಗ್ಲ ಸುದ್ದಿ ಸಂಸ್ಥೆಯೊಂದು ಗುರುವಾರ ವರದಿ ಮಾಡಿದೆ.
‘ಹೌದು, ಅಫ್ಘಾನಿಸ್ತಾನದ ಸರ್ಕಾರವು ಕತಾರ್ಗೆ ಮಧ್ಯವರ್ತಿಯ ಮೂಲಕ ಒಂದು ಪ್ರಸ್ತಾಪವನ್ನು ಕಳಿಸಿದೆ. ತಾಲಿಬಾನ್ ದೇಶದಲ್ಲಿ ಹಿಂಸೆ ಮತ್ತು ಸಂಘರ್ಷವನ್ನು ನಿಲ್ಲಿಸಿದರೆ ಅಧಿಕಾರದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವ ಪ್ರಸ್ತಾವನೆ ಮಾಡಲಾಗಿದೆ,’ ಎಂದು ಮೂಲಗಳು ತಿಳಿಸಿವೆ.
ಗುರುವಾರದಂದು ತಾಲಿಬಾನ್ ಅಫ್ಘಾನಿಸ್ತಾನದ ವ್ಯೂಹಾತ್ಮಕ ನಗರ ಘಜನಿಯನ್ನು ವಶಪಡಿಸಿಕೊಂಡಿದೆ. ಸದರಿ ನಗರವು ರಾಜಧಾನಿ ಕಾಬೂಲ್ನಿಂದ ಕೇವಲ 150 ಕಿಮೀ ದೂರದಲ್ಲಿದೆ. ಕಳೆದೊಂದು ವಾರದ ಅವಧಿಯಲ್ಲಿ ತಾಲಿಬಾನ್ ಹತ್ತು ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡಿದೆಯಾದರೂ ಘಜನಿ ಪಟ್ಟಣವನ್ನು ಆಕ್ರಮಿಸಿಕೊಂಡಿರುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಆಫ್ಘನ್ ಸರ್ಕಾರದ ಆಂತರಿಕ ಸಚಿವಾಲಯವು ಘಜನಿ ತಾಲಿಬಾನಿಗಳ ವಶವಾಗಿರುವುದನ್ನು ಖಚಿತಪಡಿಸಿದೆ. ಈ ನಗರವು ಕಾಬೂಲ್-ಕಂದಾಹಾರ್ ನಡುವಿನ ಹೆದ್ದಾರಿಯಲ್ಲಿ ಸ್ಥಿತಗೊಂಡಿದೆ ಮತ್ತು ರಾಜಧಾನಿ ಹಾಗೂ ದಕ್ಷಿಣದ ಪ್ರಾಂತ್ಯಗಳ ನಡುವೆ ಪ್ರವೇಶದ್ವಾರದಂತಿದೆ.
ಮಾಧ್ಯಮದವರಿಗೆ ಕಳಿಸಿರುವ ಸಂದೇಶವೊಂದರಲ್ಲಿ ಸರ್ಕಾರದ ಬಾತ್ಮೀದಾರ ಮಿರ್ವಾಯಿಜ್ ಸ್ತಾನಿಕ್ಜಾಯಿ ಅವರು, ‘ಶತ್ರು ನಿಯಂತ್ರಣ ಸಾಧಿಸಿದ್ದಾನೆ,’ ಎಂದು ಹೇಳಿದ್ದಾರೆ. ಶತ್ರುಗಳನ್ನು ತಡೆಯುವ ಮತ್ತು ಹೋರಾಟ ಜಾರಿಯಲ್ಲಿದೆ ಅಂತಲೂ ಆವರು ಹೇಳಿದ್ದಾರೆ.
ಆಫ್ಘನ್ ಸರ್ಕಾರವು ಈಗ ಉತ್ತರ ಮತ್ತು ಪಶ್ಚಿಮ ಅಫ್ಘಾನಿಸ್ತಾನದ ಬಹುಭಾಗವನ್ನು ಪರಿಣಾಮಕಾರಿಯಾಗಿ ಕಳೆದುಕೊಂಡಿದೆ ಮತ್ತು ವಿವಾದಿತ ನಗರಗಳ ಚದುರಿದ ದ್ವೀಪಸಮೂಹವೂ ತಾಲಿಬಾನ್ ಪಾಲಾಗುವ ಅಪಾಯವನ್ನು ಎದುರಿಸುತ್ತಿದೆ.
ಎರಡು ದಶಕಗಳ ನಂತರ ಅಮೇರಿಕ ನೇತೃತ್ವದ ಸೇನೆಗಳ ಕೊನೆಯ ತುಕುಡಿ ಅಫ್ಘಾನಿಸ್ತಾನವನ್ನು ಮೇ ತಿಂಗಳಲ್ಲಿ ತೆರವುಗೊಳಿಸಿದ ನಂತರ ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಉಗ್ರ ಹೋರಾಟ ನಡೆಯುತ್ತಿದೆ.
ತಾಲಿಬಾನಿಗಳು ಘಜಿನಿಯನ್ನು ಆಕ್ರಮಿಸಿಕೊಂಡಿರುವುದು ಈಗಾಗಲೇ ಅವಿರತವಾಗಿ ಯುದ್ಧದಲ್ಲಿ ತೊಡಗಿಸಿಕೊಂಡಿರುವ ಅಫ್ಘಾನಿಸ್ತಾನದ ವಾಯುದಳದ ಮೇಲೆ ಹೆಚ್ಚಿನ ಹೇರಲಿದೆ. ತಾಲಿಬಾನಿಗಳು ಸಂಪರ್ಕ ರಸ್ತೆಗಳನ್ನು ನಾಶಮಾಡಿರುವುದರಿಂದ ವಾಯುದಳದ ವಿಮಾನಗಳೇ ಮಿಲಿಟರಿಯವರನ್ನು ಒಂದು ಪ್ರದೇಶದಿಂದ ಮತ್ತೊಂದಕ್ಕೆ ಹೊತ್ತೊಯ್ಯುತ್ತಿವೆ.
ತಾಲಿಬಾನ್ ಪರವಿರುವ ಸಾಮಾಜಿಕ ಜಾಲತಾಣಗಳಲ್ಲೂ ಅಫ್ಘಾನಿಸ್ತಾನದ ಸೇನೆ ಸೋತು ಸುಣ್ಣವಾಗುತ್ತಿರುವ ಪೋಟೋಗಳು ರಾರಾಜಿಸುತ್ತಿವೆ. ಆಫ್ಘನ್ ಪ್ರಾಂತ್ಯಗಳ ಮಿಲಿಟರಿ ನೆಲೆಗಳಲ್ಲಿ ತಾಲಿಬಾನಿಗಳು ಶಸ್ತ್ರಸಜ್ಜಿತರಾಗಿ ರಣಕೇಕೆ ಹಾಕುತ್ತಿರುವ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್