ಚೀನಾದಲ್ಲಿ ಪ್ರವಾಹ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, ರೆಡ್ ಅಲರ್ಟ್ ಘೋಷಣೆ
China Flood: ರಕ್ಷಣಾ ಸಿಬ್ಬಂದಿಯನ್ನು ಸುಯಿಜೌ, ಕ್ಸಿಯಾಂಗ್ಯಾಂಗ್ ಮತ್ತು ಕ್ಸಿಯೋಗನ್ ನಗರಗಳು ಸೇರಿದಂತೆ ಅತ್ಯಂತ ಹಾನಿಗೊಳಗಾದ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಚೀನಾದ ತುರ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ. ಯಿಚೆಂಗ್ ನಗರದಲ್ಲಿ ಕೂಡ ಗುರುವಾರ 400 ಮಿಲಿಮೀಟರ್ ದಾಖಲೆಯ ಮಳೆಯಾಗಿದೆ.
ಶಾಂಘೈ: ಮಧ್ಯ ಚೀನಾದ ಹುಬೈ (Hubei )ಪ್ರಾಂತ್ಯದ ಐದು ನಗರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 21 ಜನರು ಸಾವಿಗೀಡಾಗಿದ್ದು ಸುಮಾರು 6,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿದೆ. ಪ್ರಾಂತ್ಯದ ಉತ್ತರಭಾಗದಲ್ಲಿರುವ ಸುಯಿಜೌ ನಗರದ ಭಾಗವಾದ ಲಿಯುಲಿನ್ ಪಟ್ಟಣದಲ್ಲಿ ಸಾವುಗಳು ವರದಿಯಾಗಿವೆ. 2,700 ಕ್ಕೂ ಹೆಚ್ಚು ಮನೆಗಳು ಮತ್ತು ಅಂಗಡಿಗಳು ಪ್ರವಾಹದಿಂದ ಹಾನಿಗೊಳಗಾಗಿವೆ . ವಿದ್ಯುತ್, ಸಾರಿಗೆ ಮತ್ತು ಸಂವಹನಗಳು ಕೂಡ ಅಸ್ತವ್ಯಸ್ತಗೊಂಡಿವೆ ಎಂದು ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಕ್ಷಣಾ ಸಿಬ್ಬಂದಿಯನ್ನು ಸುಯಿಜೌ, ಕ್ಸಿಯಾಂಗ್ಯಾಂಗ್ ಮತ್ತು ಕ್ಸಿಯೋಗನ್ ನಗರಗಳು ಸೇರಿದಂತೆ ಅತ್ಯಂತ ಹಾನಿಗೊಳಗಾದ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಚೀನಾದ ತುರ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ. ಯಿಚೆಂಗ್ ನಗರದಲ್ಲಿ ಕೂಡ ಗುರುವಾರ 400 ಮಿಲಿಮೀಟರ್ ದಾಖಲೆಯ ಮಳೆಯಾಗಿದೆ.
ಅಧಿಕೃತ ಚೀನಾ ಸುದ್ದಿ ಸೇವೆಯ ಪ್ರಕಾರ, ಹುಬೈನಲ್ಲಿರುವ 774 ಜಲಾಶಯಗಳು ಗುರುವಾರ ಸಂಜೆಯ ವೇಳೆಗೆ ತಮ್ಮ ಪ್ರವಾಹದ ಎಚ್ಚರಿಕೆಯ ಮಟ್ಟವನ್ನು ಮೀರಿವೆ. ಪ್ರಾಂತ್ಯದಲ್ಲಿನ ಹವಾಮಾನ ವೈಪರೀತ್ಯವು ವ್ಯಾಪಕ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ ಮತ್ತು 3,600 ಕ್ಕೂ ಹೆಚ್ಚು ಮನೆಗಳು ಮತ್ತು 8,110 ಹೆಕ್ಟೇರ್ ಬೆಳೆಗಳನ್ನು ಹಾನಿಗೊಳಿಸಿದೆ. ಒಟ್ಟು ನಷ್ಟ 108 ಮಿಲಿಯನ್ ಯುವಾನ್ ( 1.667 ಕೋಟಿ ಡಾಲರ್ ) ಎಂದು ಅಂದಾಜಿಸಲಾಗಿದೆ ಎಂದು ಪ್ರಾಂತ್ಯದ ತುರ್ತು ನಿರ್ವಹಣಾ ಬ್ಯೂರೋವನ್ನು ಉಲ್ಲೇಖಿಸಿ ಅಧಿಕೃತ ಚೀನಾ ಡೈಲಿ ಶುಕ್ರವಾರ ವರದಿ ಮಾಡಿದೆ.
ಚೀನಾ ತನ್ನ ಆರ್ದ್ರ ಬೇಸಿಗೆಯ ತಿಂಗಳುಗಳಲ್ಲಿ ನಿಯಮಿತವಾಗಿ ಪ್ರವಾಹವನ್ನು ಅನುಭವಿಸುತ್ತದೆ. ಆದರೆ ಹವಾಮಾನ ಬದಲಾವಣೆಯ ಪರಿಣಾಮವಾಗಿ ಇದು ಈಗ ಆಗಾಗ್ಗೆ ಆಗುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ನೈರುತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ ಸುಮಾರು 80,000 ಜನರನ್ನು ಸ್ಥಳಾಂತರಿಸಲಾಯಿತು. ಕಳೆದ ತಿಂಗಳು ಹೆನಾನ್‌ನಲ್ಲಿ ದಾಖಲೆಯ ಮಳೆ 300 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಪ್ರವಾಹಕ್ಕೆ ಕಾರಣವಾಯಿತು.
ಯಾಂಗ್‌ಟೀ ನದಿಯ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಯಿದ್ದು, ಮುಂದಿನ ವಾರದವರೆಗೂ ಭಾರೀ ಮಳೆ ಬಿರುಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಚೀನಾ ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜ್ಯದ ಹವಾಮಾನ ಮುನ್ಸೂಚನೆ ಅಧಿಕಾರಿಗಳು ಗುರುವಾರ ತಡರಾತ್ರಿ ಭೂವೈಜ್ಞಾನಿಕ ವಿಪತ್ತಿನ ಎಚ್ಚರಿಕೆಯನ್ನು ನೀಡಿದರು. ಅಪಾಯದ ಪ್ರದೇಶಗಳಲ್ಲಿ ಕೇಂದ್ರ ಪ್ರಾಂತ್ಯಗಳಾದ ಹುಬೈ, ಹುನಾನ್, ಹೆನಾನ್ ಮತ್ತು ಅನ್ಹುಯಿ, ಚೋಂಗ್‌ಕಿಂಗ್, ಸಿಚುವಾನ್ ಮತ್ತು ಗಿಜೌ ಮತ್ತು ಪೂರ್ವ ಕರಾವಳಿಯ ಝೆಜಿಯಾಂಗ್ ಸೇರಿವೆ.
ಇದನ್ನೂ ಓದಿ: ಚೀನಾದ ವ್ಯಾನ್ಶೆಂಗ್ ಆರ್ಡೋವಿಸಿಯನ್ ಥೀಮ್ ಪಾರ್ಕ್ ಕೇವಲ ಸಾಹಸಿ ಪ್ರವೃತ್ತಿಯವರಿಗೆ ಮಾತ್ರ ಮಾಡಿದ್ದಿರಬೇಕು!
ಇದನ್ನೂ ಓದಿ: KL Rahul: ಪ್ರಿಯ ಸ್ನೇಹಿತ ಕೆ.ಎಲ್.ರಾಹುಲ್ ಲಾರ್ಡ್ಸ್ನಲ್ಲಿ ಸಿಡಿಸಿರುವ ಭರ್ಜರಿ ಶತಕಕ್ಕೆ ಆಥಿಯಾ ರಿಯಾಕ್ಷನ್ ಹೇಗಿತ್ತು?
(China flood death toll hits 21 Five cities in the central Chinese province of Hubei have declared red alerts)