ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್
ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೋರಾಟಗಾರರು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದೊಂದು ಯುದ್ಧಭೂಮಿಯಂತಾಗಿದ್ದು, ಈಗಾಗಲೇ ಹಲವು ಗಣ್ಯರ ಜೀವ ಹೋಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು (Taliban Fighters) ತಮ್ಮ ಬಾಹುಳ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಹೊತ್ತಲ್ಲಿ, ಯುಎಸ್ ಅಧ್ಯಕ್ಷ ಜೋ ಬೈಡನ್ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಅಫ್ಘಾನಿಸ್ತಾನ (Afghanistan)ದಿಂದ ತಮ್ಮ ಸೇನೆಯನ್ನು ಹಿಂಪಡೆಯುವ ತೀರ್ಮಾನವನ್ನು ಬದಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಸೆಪ್ಟೆಂಬರ್ 11ರೊಳಗೆ ಯುಎಸ್ ಸೇನೆ (US Military)ಯನ್ನು ಹಿಂಪಡೆಯಬೇಕು ಎಂದು ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ. ಹಾಗೇ, ಯುದ್ಧ ಸನ್ನಿವೇಶ ಇರುವ ಅಫ್ಘಾನಿಸ್ತಾನದಿಂದ ಈಗಾಗಲೇ ಶೇ.90ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಂಡಿದ್ದಾಗಿ, ಯುಎಸ್ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್ ತಿಳಿಸಿದೆ.
ನಾವು ಕಳೆದ 20ವರ್ಷಗಳಲ್ಲಿ 3 ಲಕ್ಷಕ್ಕೂ ಅಧಿಕ ಅಫ್ಘಾನ್ ಸೈನಿಕರಿಗೆ ತರಬೇತಿ ನೀಡಿದ್ದೇವೆ..ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದೇವೆ. ಅದಕ್ಕಾಗಿ ಟ್ರಿಲಿಯನ್ಸ್ ಡಾಲರ್ಗಳಷ್ಟು ಹಣ ವ್ಯಯಿಸಿದ್ದೇವೆ. ಅಮೆರಿಕ ಸೇನಾಪಡೆಯ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಜೋ ಬೈಡನ್ ಹೇಳಿದ್ದಾರೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲಿ ಉನ್ನತ ರಾಜಕೀಯ ಪಕ್ಷಗಳು ಒಂದಾಗಬೇಕು ಎಂದೂ ತಿಳಿಸಿದ್ದಾರೆ.
ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೋರಾಟಗಾರರು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದೊಂದು ಯುದ್ಧಭೂಮಿಯಂತಾಗಿದ್ದು, ಈಗಾಗಲೇ ಹಲವು ಗಣ್ಯರ ಜೀವ ಹೋಗಿದೆ. ಈ ಮಧ್ಯೆ ಬೈಡನ್ ತಾವು ಸೇನೆ ವಾಪಸ್ ಪಡೆಯುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ನಮ್ಮ ಕಡೆಯಿಂದ ಅಗತ್ಯ ಸಹಕಾರ ಇದ್ದೇ ಇರುತ್ತದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಭೇಟಿ ಆಗಲಿರುವ ಸಚಿವ ಆನಂದ್ ಸಿಂಗ್; ಅಸಾಮಾಧಾನ ಬಗೆಹರಿಸುವ ವಿಶ್ವಾಸದಲ್ಲಿ ಬಸವರಾಜ ಬೊಮ್ಮಾಯಿ
Published On - 5:25 pm, Wed, 11 August 21