Abu Dhabi: ಅಪಘಾತಕ್ಕೀಡಾದ ಏರ್ ಆಂಬುಲೆನ್ಸ್; ಇಬ್ಬರು ಪೈಲಟ್ ಸೇರಿ ನಾಲ್ವರ ದುರ್ಮರಣ
ಘಟನೆ ನಡೆದದ್ದು ಎಲ್ಲಿ? ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಅಬುಧಾಬಿ ಪೊಲೀಸರು ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಟ್ವೀಟ್ ಮೂಲಕ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ಅಬುಧಾಬಿ: ಏರ್ ಆಂಬುಲೆನ್ಸ್ (UAE Air Ambulance Crash)ವೊಂದು ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟ ದುರ್ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಜಧಾನಿ ಅಬುಧಾಬಿಯಲ್ಲಿ ನಡೆದಿದೆ. ಎಮಿರೇಟ್ ಪೊಲೀಸರೇ ಈ ಏರ್ ಆಂಬುಲೆನ್ಸ್ನ್ನು ಹಾರಿಸಿದ್ದರು. ಅಂದರೆ ಅವರ ಸೂಚನೆ ಮೇರೆಗೇ ಈ ಆಂಬುಲೆನ್ಸ್ ಪ್ರಯಾಣ ಮಾಡುತ್ತಿತ್ತು. ಶನಿವಾರ ದುರಂತ ನಡೆದಿದ್ದು, ಇದರಲ್ಲಿದ್ದ ಇಬ್ಬರು ಪೈಲಟ್ಗಳು, ಒಬ್ಬ ವೈದ್ಯ ಮತ್ತು ಒಬ್ಬ ನರ್ಸ್ ಸಾವನ್ನಪ್ಪಿದ್ದಾರೆ. ಆದರೆ ಘಟನೆ ನಡೆದದ್ದು ಎಲ್ಲಿ? ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ನೀಡಿಲ್ಲ.
ಏರ್ ಆಂಬುಲೆನ್ಸ್ ಅಪಘಾತದ ಬಗ್ಗೆ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿರುವ ಅಬುಧಾಬಿ ಪೊಲೀಸರು, ದುರಂತದಲ್ಲಿ ಇಬ್ಬರು ಪೈಲಟ್ಗಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಖಮಿಸ್ ಸಯೀದ್ ಅಲ್-ಹೋಲಿ, ಮೊಹಮ್ಮದ್ ಅಲ್-ರಶೀದಿ, ಶಾಹಿದ್ ಫಾರೂಕ್ ಘೋಲಂ ಮತ್ತು ಜೋಯೆಲ್ ಕ್ಯುಯಿ ಸಕರ್ ಮಿಂಟೊ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಏರ್ ಆಂಬುಲೆನ್ಸ್ ಪತನವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಎಮಿರೇಟ್ಸ್ ಪೊಲೀಸರು, ದಟ್ಟವಾದ ಮಂಜು ಇರುವ ಕಾರಣ ಯುನೈಟೆಡ್ ಅರಬ್ ಎಮಿರೇಟ್ಸ್ನಾದ್ಯಂತ ಹೆಚ್ಚಿನ ವೇಗವನ್ನು ನಿಷೇಧಿಸಿದ್ದಾರೆ. ದುರಂತದಲ್ಲಿ ಮೃತರಾದವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಹಾಗೇ, ಮೃತರಾದ ಎಲ್ಲರೂ ತಮ್ಮ ಸಹೋದ್ಯೋಗಿಗಳೇ ಆಗಿದ್ದು, ಕರ್ತವ್ಯದಲ್ಲಿ ಇದ್ದರು ಎಂದೂ ತಿಳಿಸಿದ್ದಾರೆ. ಅಬುಧಾಬಿಯಲ್ಲಿ ಮರಳು ಬಿರುಗಾಳಿಯಿಂದಾಗಿ ಪದೇಪದೆ ಇಂಥ ದುರಂತಗಳು ನಡೆಯುತ್ತಿರುತ್ತವೆ.
ಇದನ್ನೂ ಓದಿ: ನಾಲ್ಕು ವ್ಯಕ್ತಿಗಳು, 20 ಜಾನುವಾರುಗಳನ್ನು ಕೊಂದ ನರಭಕ್ಷಕ ಹುಲಿಯ ಬೇಟೆಗೆ ಅರಣ್ಯ ಇಲಾಖೆ ಆದೇಶ