Donald Trump: ನೀಲಿಚಿತ್ರ ನಟಿಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣ, ಡೊನಾಲ್ಡ್ ಟ್ರಂಪ್ ಮೇಲೆ ಬಂಧನದ ತೂಗುಗತ್ತಿ, ಮುಂದೇನಾಗಬಹುದು?
ಪೋರ್ನ್ಸ್ಟಾರ್ಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಗೆ ಬಂಧನ ಭೀತಿ ಎದುರಾಗಿದೆ.
ಪೋರ್ನ್ಸ್ಟಾರ್ಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಗೆ ಬಂಧನ ಭೀತಿ ಎದುರಾಗಿದೆ. ತನ್ನೊಂದಿಗಿನ ಲೈಂಗಿಕ ಸಂಬಂಧವನ್ನು ಬಹಿರಂಗಗೊಳಿಸದೇ ಇರಲು ಡೊನಾಲ್ಡ್ ಟ್ರಂಪ್ ತನಗೆ ಹಣ ನೀಡಿದ್ದಾರೆ ಎಂದು ತನಿಖೆಯ ವೇಳೆ ಸ್ಟಾರ್ಮಿ ಡೇನಿಯಲ್ಸ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಜ್ಯೂರಿ ಸ್ಟಾರ್ಮಿ ಡೇನಿಯಲ್ಸ್ ಅವರನ್ನು ಆರೋಪಿ ಎಂದು ಉಲ್ಲೇಖಿಸಿದ್ದಾರೆ. ಅಂದರೆ ಈ ಪ್ರಕರಣದಲ್ಲಿ ಅವರು ಈಗ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಟ್ರಂಪ್ ಅವರನ್ನು ಆರೋಪಿಯನ್ನಾಗಿ ಮಾಡುವ ಮೊದಲೇ, ಅವರ ಬಂಧನದ ಬಗ್ಗೆ ಅವರೇ ಭವಿಷ್ಯ ನುಡಿದಿದ್ದರು.
ಒಂದು ವಾರದ ಹಿಂದೆ ಮ್ಯಾನ್‌ಹ್ಯಾಟನ್‌ನಲ್ಲಿ, ತಮ್ಮ ಬಂಧನದ ಬಗ್ಗೆ ಮಾತನಾಡಿದ್ದರು ಮತ್ತು ಅದನ್ನು ತೀವ್ರವಾಗಿ ವಿರೋಧಿಸಲು ಬೆಂಬಲಿಗರನ್ನು ಕೇಳಿದ್ದರು. ಇದೆಲ್ಲಾ ವಿರೋಧಿಗಳ ಕುತಂತ್ರವಾಗಿದ್ದು, 2024ರ ಚುನಾವಣೆಯಲ್ಲಿ ಅವರನ್ನು ನಿಲ್ಲಿಸುವ ಕಸರತ್ತು ಎಂದು ಹೇಳಿದ್ದರು.
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಟ್ರಂಪ್ ಹಣ ನೀಡಿದ ಪ್ರಕರಣ 2016 ರ ಹಿಂದಿನದು. ವಾಸ್ತವವಾಗಿ, ಟ್ರಂಪ್ ಈ ಪೋರ್ನ್ ಸ್ಟಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಮಾತು ಮುನ್ನೆಲೆಗೆ ಬಂದಿದ್ದು, ಅದನ್ನು ಮರೆಮಾಚಲು ಅವರು ಸ್ಟಾರ್ಮಿಗೆ ಹಣ ನೀಡಿದ್ದಾರೆ ಎಂದು ಹೇಳಲಾಗಿದೆ. 2006ರಲ್ಲಿ ಟ್ರಂಪ್ ಮತ್ತು ಅವರ ನಡುವೆ ಸಂಬಂಧವಿತ್ತು ಎಂಬುದನ್ನು ಸ್ಟ್ರೋಮಿ ಬಹಿರಂಗಪಡಿಸಿದ್ದರು.
ತನ್ನನ್ನು ಟಿವಿ ಸ್ಟಾರ್ ಮಾಡುವ ಭರವಸೆಯ ಮೇರೆಗೆ ಟ್ರಂಪ್ ದೈಹಿಕ ಸಂಬಂಧ ಹೊಂದಿದ್ದರು ಎಂದು ಪೋರ್ನ್ ಸ್ಟಾರ್ ಆರೋಪಿಸಿದ್ದರು. ಆದರೆ, ಟ್ರಂಪ್ ಇದನ್ನು ನಿರಾಕರಿಸಿದ್ದಾರೆ.
ಟ್ರಂಪ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಒಂದೊಮ್ಮೆ ಆಯ್ಕೆಯಾದರೆ ಅಮೆರಿಕದ ಅಧ್ಯಕ್ಷರಾಗಿ ಜೈಲಿನಿಂದಲೇ ಆಡಳಿತ ನಡೆಸುತ್ತಾರೆ ಎಂದು ಕಾನೂನು ತಜ್ಞರನ್ನು ಉಲ್ಲೇಖಿಸಿ ಟೈಮ್ ಹೇಳಿದೆ.
ಘಟನೆ ಏನು? ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಪೋರ್ನ್ ಸ್ಟಾರ್‌ಗಳಿಗೆ ಹಣ ಪಾವತಿಸಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಟ್ರಂಪ್ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಹೊರಬರದಂತೆ ತಡೆಯಲು ಅವರಿಗೆ ಹಣ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಡೊನಾಲ್ಡ್ ಟ್ರಂಪ್ 130,000 ಡಾಲರ್ ಪಾವತಿಸಿದ್ದಾರೆ ಎಂದು ಗ್ರ್ಯಾಂಡ್ ಜ್ಯೂರಿ ಒಪ್ಪಿಕೊಂಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆ ಸಮಯದಲ್ಲಿ ಡೇನಿಯಲ್ಸ್ 27 ವರ್ಷ ವಯಸ್ಸು ಮತ್ತು ಟ್ರಂಪ್ 60 ವರ್ಷ ವಯಸ್ಸಿನವರಾಗಿದ್ದರು. ಆಗಷ್ಟೇ ಅವರ ಮೂರನೇ ಪತ್ನಿ ಮೆಲಾನಿಯಾ ತಮ್ಮ ಮಗ ಬ್ಯಾರನ್‌ಗೆ ಜನ್ಮ ನೀಡಿದ್ದರು.
ಟ್ರಂಪ್ ಅವರ ವಿರುದ್ಧದ ಆರೋಪಗಳೇನಿವೆ? ಯಾವುದರಡಿಯಲ್ಲಿ ಮೊಕದ್ದಮೆ ಹೂಡಲಾಗುವುದು ಎಂಬ ವಿವರವಾದ ಮಾಹಿತಿ ಇದುವರೆಗೂ ತಿಳಿದುಬಂದಿಲ್ಲ. ಟ್ರಂಪ್ ಅವರ ವಿರುದ್ಧದ ಆರೋಪಗಳೇನು ಎಂಬುದನ್ನು ಇನ್ನೂ ತಿಳಿಸಿಲ್ಲ ಎಂದು ಟ್ರಂಪ್ ಅವರ ಕಾನೂನು ತಂಡ ಕೂಡ ಹೇಳಿದೆ.
ಮುಂದೇನಾಗಬಹುದು?
-ಡೊನಾಲ್ಡ್ ಟ್ರಂಪ್ ಅವರ ವಕೀಲರು ಹೇಳಿದಂತೆ ಒಂದೊಮ್ಮೆ ತನಿಖೆಯಲ್ಲಿ ಆರೋಪ ಸಾಬೀತಾದರೆ ಕಾನೂನು ಬದ್ಧವಾಗಿ ನಡೆದುಕೊಳ್ಳಲಾಗುವುದು. ಹೀಗಾಗಿ ಟ್ರಂಪ್ ಶರಣಾಗುವ ಸಾಧ್ಯತೆ ಇದೆ.
-ಈ ಸಂಬಂಧ ಈಗಾಗಲೇ ನ್ಯೂಯಾರ್ಕ್ ಪೊಲೀಸರು ಬೆರಳಚ್ಚು ಪಡೆಯುವುದು ಹಾಗೂ ಇತರೆ ಕ್ರಮಗಳನ್ನು ಪಾಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
-ಹಾಗೆಯೇ ಪ್ರತಿಭಟನೆಗಳನ್ನು ತಡೆಯಲು ಕೆಲವು ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಟ್ರಂಪ್ ಬಳಿಕ ದೇಶದಲ್ಲಿ ಆಗಬಹುದಾದ ತೀವ್ರತರವಾದ ಪ್ರತಿಭಟನೆಗಳನ್ನು ತಡೆಯಲು ನ್ಯೂಯಾರ್ಕ್ ಹಾಗೂ ಇತರ ಕಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
-ಅಮೆರಿಕದ ಗುಪ್ತಚರ ಕೂಡ ಸಾಕಷ್ಟು ಕಟ್ಟೆಚ್ಚರವಹಿಸಿದೆ.
-ಅಮೆರಿಕದ ಮಾಜಿ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ದಿನಂಪ್ರತಿ ಟ್ರಂಪ್ಗೆ ಸರ್ಕಾರದ ಭದ್ರತೆ ಇರುತ್ತದೆ. ಹೀಗಾಗಿ ಅವರನ್ನು ಬೇಡಿ ತೊಡಿಸಿ ಕರೆತರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಟ್ರಂಪ್ ಮುಂದಿರುವ ಆಯ್ಕೆಗಳೇನು?
ಈ ಪ್ರಕರಣದಲ್ಲಿ ರಾಜಿ ಮಾಜಿಕೊಳ್ಳಲು ಈಗಲೂ ಟ್ರಂಪ್ ಪ್ರಯತ್ನಿಸುವ ಸಾಧ್ಯತೆ ಇದೆ, ಇನ್ನೊಂದೆಡೆ ಟ್ರಂಪ್ ವಿರುದ್ಧದ ಸಾಕ್ಷಿಧಾರ ಕೊಹೆನ್ ಕೂಡ ಅಪರಾಧದ ಹಿನ್ನೆಲೆ ಹೊಂದಿರುವುದರಿಂದ ಕೋರ್ಟ್ ಆ ಸಾಕ್ಷ್ಯವನ್ನು ಹೇಗೆ ಪರಿಗಣಿಸುತ್ತದೆ ಎಂಬುದು ಪ್ರಮುಖವಾಗಲಿದೆ. ಇದೇ ಟ್ರಂಪ್ ಪರ ವಕೀಲರಿಗೆ ಪ್ರಮುಖ ದಾಳವಾಗಲಿದೆ.
ಅಮೆರಿಕ ಅಸಂವಿಧಾನದ ಐದನೇ ತಿದ್ದುಪಡಿ ಪ್ರಕಾರ ತನ್ನ ವ್ಯಾವಹಾರಿಕ ಒಪ್ಪಂದಗಳನ್ನು ಬಹಿರಂಗವಾಗಿ ಹೇಳದಿರುವ ನಿರ್ಧಾರವನ್ನು ಕೂಡ ಮಾಡಬಹುದು.
ಎಲ್ಲರಿಗೂ ತಾವು ನಿರಪರಾಧಿ ಎಂದು ಸಾಬೀತುಪಡಿಸುವ ಹಕ್ಕಿದೆ. ಆದಾಗ್ಯೂ, ಟ್ರಂಪ್ ಪ್ರಕರಣದ ಬಗ್ಗೆ ಮಾತನಾಡದಂತೆ ತಡೆಯಲು ನ್ಯಾಯಾಧೀಶರು ಗ್ಯಾಗ್ ಆರ್ಡರ್ ಅನ್ನು ಸಹ ಹೊರಡಿಸಬಹುದು.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ಎಷ್ಟು ಗಂಭೀರವಾಗಿದೆ ಎಂಬುದನ್ನು ನ್ಯಾಯಾಲಯವು ನೋಡುತ್ತದೆ. ಅದರ ಆಧಾರದ ಮೇಲೆ ಮಾತ್ರ ನ್ಯಾಯಾಲಯ ಬಿಡುಗಡೆ ಮಾಡಬಹುದು.
ಒಂದೊಮ್ಮೆ ಟ್ರಂಪ್ ಪರವಾಗಿ ತೀರ್ಪು ಬರದಿದ್ದರೆ ಸುಪ್ರೀಂಕೋರ್ಟ್ಗೆ ಅಪೀಲು ಹೋಗಬಹುದು, ಮೇಲುಸ್ತುವಾರಿಯಲ್ಲಿ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ನಡೆದರೂ ಅದು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳಬಹುದು.
ಮತ್ತೊಂದೆಡೆ, ಟ್ರಂಪ್ ವಿರುದ್ಧದ ಆರೋಪಗಳು ಸಾಬೀತಾದರೆ, ಅವರಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಬಹುದು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:44 am, Fri, 31 March 23