Covid Boosters: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತ್ತೊಂದು ಕೊವಿಡ್-19 ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅಮೆರಿಕ ನಿರ್ಧಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 19, 2021 | 10:44 PM

ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಚಳಿಗಾಲದಲ್ಲಿ ಬೂಸ್ಟರ್​ ಡೋಸ್​ಗಳ ತುರ್ತು ಬಳಕೆಗೆ ಅಮೆರಿಕ ಅನುಮೋದನೆ ನೀಡಿದೆ.

Covid Boosters: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತ್ತೊಂದು ಕೊವಿಡ್-19 ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅಮೆರಿಕ ನಿರ್ಧಾರ
ಮಾಡೆರ್ನಾ ಲಸಿಕೆ
Follow us on

ವಾಷಿಂಗ್​ಟನ್: ಕೋವಿಡ್ ಬೂಸ್ಟರ್ ಲಸಿಕೆಗಳನ್ನು ಯಾರೆಲ್ಲಾ ತೆಗೆದುಕೊಳ್ಳಬಹುದು ಎಂಬ ಪಟ್ಟಿಯನ್ನು ಅಮೆರಿಕ ಶುಕ್ರವಾರ ಅಂತಿಮಗೊಳಿಸಿದೆ. ಮುಂದಿನ ದಿನಗಳಲ್ಲಿ 18 ವರ್ಷ ದಾಟಿದ ಎಲ್ಲರೂ ತಮ್ಮ ಮೊದಲ ಡೋಸ್ ಸ್ವೀಕರಿಸಿದ ಆರು ತಿಂಗಳ ನಂತರ ಬೂಸ್ಟರ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಫಿಝರ್ ಮತ್ತು ಮಾಡೆರ್ನಾ ಲಸಿಕೆಗಳನ್ನು ಬೂಸ್ಟರ್ ಆಗಿ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಚಳಿಗಾಲದ ಈ ಸಂದರ್ಭದಲ್ಲಿ ಬೂಸ್ಟರ್​ ಡೋಸ್​ಗಳ ತುರ್ತು ಬಳಕೆಗೆ ಅನುಮೋದನೆ ನೀಡಿರುವ ಈ ಕ್ರಮವು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮಾಡೆರ್ನಾದ ಸಿಇಒ ಸ್ಟಿಫನ್ ಬಾನ್ಸೆಲ್ ಹೇಳಿದರು.

ಯಾರು ಬೂಸ್ಟರ್ ಲಸಿಕೆ ತೆಗೆದುಕೊಳ್ಳಬಹುದು ಎಂಬ ಈವರೆಗಿನ ಪಟ್ಟಿ ಗೊಂದಲಕಾರಿಯಾಗಿತ್ತು. 18 ವರ್ಷ ಅಥವಾ ಅದಕ್ಕೂ ಹೆಚ್ಚು ವಯಸ್ಸಾದವರು ಮೊದಲ ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅಮೆರಿಕ ಅವಕಾಶ ಮಾಡಿಕೊಟ್ಟಿದೆ. ಕಳೆದ ವಾರ ಫಿಝರ್ ಕಂಪನಿಯು ಎಲ್ಲರಿಗೂ ಬೂಸ್ಟರ್​ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಅಮೆರಿಕದ ಔಷಧ ನಿಯಂತ್ರಕರನ್ನು (ಎಫ್​ಡಿಎ) ಕೋರಿತ್ತು. ಈ ಬಗ್ಗೆ 10,000 ಜನರ ಮೇಲೆ ಪ್ರಯೋಗಗಳನ್ನು ನಡೆಸಿ ಸಾಕಷ್ಟು ದತ್ತಾಂಶವನ್ನೂ ಸಂಗ್ರಹಿಸಿತ್ತು.

ಸಲಹಾ ಮಂಡಳಿಯು ಕಳೆದ ತಿಂಗಳು ಈ ವಿನಂತಿಯನ್ನು ಒಪ್ಪಿಕೊಂಡಿತ್ತು. ಅನಂತರವೇ ಮಾಡೆರ್ನಾ ಬೂಸ್ಟರ್ ನೀಡಲು ಎಫ್​ಡಿಎ ಸಮ್ಮತಿಸಿತ್ತು. ಡಾ.ಅಂತೋಣಿ ಫೌಸಿ ಸೇರಿದಂತೆ ಅಮೆರಿಕ ಆರೋಗ್ಯ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಬೂಸ್ಟರ್​ ಡೋಸ್​ಗಳನ್ನು ನೀಡಬೇಕೆಂಬ ಅಂಶವನ್ನು ಪ್ರತಿಪಾದಿಸುತ್ತಿದ್ದರು. ಯುವಜನರಲ್ಲಿ ಸ್ವಲ್ಪವೇ ಸೋಂಕು ಕಾಣಿಸಿಕೊಂಡರೂ ಕೊವಿಡ್ ಹಾಗೂ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದರು.

ಜನರನ್ನು ಆಸ್ಪತ್ರೆಗಳಿಂದ ಹೊರಗೆ ಇಡಬಲ್ಲ ಯಾವುದೇ ಲಸಿಕೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಫೌಸಿ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದರು. ಅಮೆರಿಕದಲ್ಲಿ 19.5 ಕೋಟಿಗೂ ಹೆಚ್ಚು ಜನರು ಕೊವಿಡ್ ಲಸಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಂಡಿದ್ದಾರೆ. ಫಿಝರ್ ಅಥವಾ ಮಾಡೆರ್ನಾ ಲಸಿಕೆಗಳ ಎರಡು ಡೋಸ್ ಅಥವಾ ಜಾನ್​ಸನ್ ಅಂಡ್ ಜಾನ್​ಸನ್ ಲಸಿಕೆಯ ಒಂದು ಡೋಸ್ ಪಡೆದುಕೊಂಡರೆ ಲಸಿಕೆಯ ಪೂರ್ಣ ಡೋಸ್ ಪಡೆದಂತೆ ಎಂದು ಅಮೆರಿಕದಲ್ಲಿ ಪರಿಗಣಿಸಲಾಗುತ್ತದೆ. ಬೂಸ್ಟರ್ ಲಸಿಕೆ ತೆಗೆದುಕೊಳ್ಳುವವರು ಈ ಮೊದಲು ತೆಗೆದುಕೊಂಡ ಕಂಪನಿಯ ಲಸಿಕೆಯನ್ನೇ ತೆಗೆದುಕೊಳ್ಳಬೇಕಿಲ್ಲ ಎಂದು ಎಫ್​ಡಿಎ ಈ ಮೊದಲೇ ಸ್ಪಷ್ಟಪಡಿಸಿತ್ತು. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಸಲಹಾ ಮಂಡಳಿಯು ಈ ಕುರಿಚು ಚರ್ಚಿಸಿ ಬೂಸ್ಟರ್ ಡೋಸ್​ಗಳನ್ನು ವಿಸ್ತರಿತ ಜನಸಮುದಾಯಕ್ಕೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಮೊದಲ ಕೊವಿಡ್ ರೋಗಿ ವುಹಾನ್ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು: ವೈರಾಲಜಿಸ್ಟ್
ಇದನ್ನೂ ಓದಿ: ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕೊರೊನಾ ಕಂಟಕ; ಕೊವಿಡ್ ಮಾರ್ಗಸೂಚಿಗಳಿಂದ ಮಾನಸಿಕ ಒತ್ತಡ ಹೆಚ್ಚಳ