AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಈ ಹಿಂದೆ ತಪ್ಪು ಹೆಜ್ಜೆಗಳನ್ನಿಟ್ಟಿದೆ; ನಾನೂ ಮತ್ತೆ ತಪ್ಪು ಮಾಡೊಲ್ಲ, ಅಫ್ಗಾನ್ ಆಂತರಿಕ ವಿಚಾರಕ್ಕೂ ನಮಗೂ ಸಂಬಂಧವಿಲ್ಲ: ಬೈಡನ್ ಪ್ರತಿಕ್ರಿಯೆ

ಈಗೇನು ಅಫ್ಗಾನಿಸ್ತಾನದಲ್ಲಿ ಸೃಷ್ಟಿಯಾಗಿದ್ಯೋ ಸನ್ನಿವೇಶ.. ಇದಕ್ಕೆ ಮೂಲ ಕಾರಣ ಅಮೆರಿಕ. 20 ವರ್ಷ ನಿರಂತರವಾಗಿ ಅಫ್ಗಾನಿಸ್ತಾನದಲ್ಲಿ ಹಿಡಿತ ಸಾಧಿಸಿದ್ದ ಅಮೆರಿಕ ಸೇನೆಯನ್ನ, ವಾಪಸ್ ಕರೆಸಿಕೊಳ್ಳಲು ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ರು. ಹೀಗಾಗಿ ಎಲ್ಲರೂ ಅಮೆರಿಕವನ್ನ ದೂಷಿಸುತ್ತಿದ್ರು. ಇದಕ್ಕೆ ಉತ್ತರ ನೀಡಿರೋ ಬೈಡನ್, ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅದ್ರ ಡಿಟೇಲ್ಸ್ ಇಲ್ಲಿದೆ.

ಅಮೆರಿಕ ಈ ಹಿಂದೆ ತಪ್ಪು ಹೆಜ್ಜೆಗಳನ್ನಿಟ್ಟಿದೆ; ನಾನೂ ಮತ್ತೆ ತಪ್ಪು ಮಾಡೊಲ್ಲ, ಅಫ್ಗಾನ್ ಆಂತರಿಕ ವಿಚಾರಕ್ಕೂ ನಮಗೂ ಸಂಬಂಧವಿಲ್ಲ: ಬೈಡನ್ ಪ್ರತಿಕ್ರಿಯೆ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ (ಸಂಗ್ರಹ ಚಿತ್ರ)
TV9 Web
| Updated By: ಆಯೇಷಾ ಬಾನು|

Updated on: Aug 17, 2021 | 8:11 AM

Share

ಅದೊಂದು ದಾಳಿಯಿಂದ ಶುರುವಾದ ಅಮೆರಿಕದ ಪ್ರತೀಕಾರ ಇಂದು ಅಫ್ಗಾನಿಸ್ತಾನದಲ್ಲಿ(Afghanistan) ನರಕ ಸೃಷ್ಟಿಸುವ ಮಟ್ಟಿಗೆ ಮುಂದುವರಿದಿದೆ. 20 ವರ್ಷಗಳಿಂದ ಹಗೆ ಸಾಧಿಸಿದ ಅಮೆರಿಕ.. ತಾಲಿಬಾನಿಗಳ(Taliban) ನೆಲದಲ್ಲಿ ಬೀಡು ಬಿಟ್ಟಿದ್ದ ಅಲ್ ಖೈದಾ ಉಗ್ರರನ್ನ ಮಟ್ಟ ಹಾಕೋಕೆ ಮುಂದಾಗಿತ್ತು. ಅಮೆರಿಕದ ನ್ಯೂಯಾರ್ಕ್ನಲ್ಲಿದ್ದ ವಿಶ್ವ ವಾಣಿಜ್ಯ ಸಂಸ್ಥೆಯ ಟ್ವಿನ್ ಟವರ್ಗಳ ಮೇಲೆ ಅಲ್ ಖೈದಾ ಉಗ್ರರು ದಾಳಿ ಮಾಡಿದ್ರು. ಆಗ ಅಲ್ ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ವಿರುದ್ಧ ಸಮರ ಸಾರಿದ್ದ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್, ಅಫ್ಗಾನಿಸ್ತಾನಕ್ಕೆ ಅಮೆರಿಕ ಸೇನೆಯನ್ನ ನುಗ್ಗಿಸಿದ್ರು. ಅಲ್ಲಿಂದ ಶುರುವಾಗಿದ್ದ ಅಫ್ಗಾನಿಸ್ತಾನದ ಅಧಃಪತನ. ಈಗ ತಾಲಿಬಾನಿಗಳು ಕಾಬೂಲ್ ವಶಪಡಿಸಿಕೊಳ್ಳೋವರೆಗೆ ಬಂದು ನಿಂತಿದೆ.ಸದ್ಯ ಈಗ ಅಫ್ಗಾನಿಸ್ತಾನದ ಪರಿಸ್ಥಿತಿ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಪ್ರತಿಕ್ರಿಯೆ ನೀಡಿದ್ದಾರೆ.

‘ಅಫ್ಘಾನಿಸ್ತಾನದ ಪರಿಸ್ಥಿತಿಯನ್ನ ಸೂಕ್ಷವಾಗಿ ಗಮನಿಸುತ್ತಿದ್ದೇವೆ’ ಅಮೆರಿಕ ಅಧ್ಯಕ್ಷ ಜೋ ಬೈಡನ್, ನಾನು ಮತ್ತು ನನ್ನ ರಾಷ್ಟ್ರೀಯ ಭದ್ರತಾ ತಂಡ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ರೀತಿಯ ದಿಢೀರ್ ಬೆಳವಣಿಗೆಗಳು ನಡೆದರೆ ಅದನ್ನ ಎದುರಿಸಲು ರೂಪಿಸಿದ್ದ ಪೂರ್ವ ಸಿದ್ಧತೆಯನ್ನು ಜಾರಿಗೆ ತರಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.

‘ಅಲ್ ಖೈದಾ ಉಗ್ರರನ್ನ ಮಟ್ಟ ಹಾಕಲು ಅಮೆರಿಕ ಯಶಸ್ವಿ’ 20 ವರ್ಷಗಳ ಹಿಂದೆ ಅಮೆರಿಕದ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನೆಯನ್ನ ರವಾನಿಸಲಾಗಿತ್ತು. ಅಲ್ ಖೈದಾ ಉಗ್ರರು ಅಫ್ಗಾನಿಸ್ತಾನವನ್ನ ತಮ್ಮ ನೆಲೆಯನ್ನಾಗಿ ಮಾಡಿಕೊಂಡು ಮತ್ತೆ ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶ ಇದರ ಹಿಂದಿತ್ತು. ಅದರಲ್ಲಿ ಅಮೆರಿಕ ಯಶಸ್ವಿಯಾಗಿದೆ ಎಂದು ಜೋ ಬೈಡನ್ ಹೇಳಿದರು.

‘ಒಸಾಮಾ ಬಿನ್ ಲಾಡೆನ್ ಕೊಲ್ಲಲು ಅಮೆರಿಕ ಸಕ್ಸಸ್’ 10 ವರ್ಷದ ಹಿಂದೆಯೇ ಒಸಾಮಾ ಬಿನ್ ಲಾಡೆನ್ ಕೊಲ್ಲುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಅಫ್ಘಾನಿಸ್ತಾನ ಮರು ನಿರ್ಮಾಣ ಅಮೆರಿಕದ ಉದ್ದೇಶ ಆಗಿರಲಿಲ್ಲ ಎಂದರು.

ರಷ್ಯಾ, ಚೀನಾಗೆ ಪರೋಕ್ಷವಾಗಿ ಗುದ್ದು ನೀಡಿದ ಬೈಡನ್ ಅಮೆರಿಕದ ಜೊತೆ ಪೈಪೋಟಿ ನಡೆಸೋ ಚೀನಾ ಮತ್ತು ರಷ್ಯಾ, ಅಮೆರಿಕ ಅನಿರ್ದಿಷ್ಟಾವಧಿವರೆಗೆ ಅಫ್ಘಾನಿಸ್ತಾನದಲ್ಲಿ ಯುದ್ಧ ಮಾಡಲಿ, ಈ ಮೂಲಕ ತನ್ನ ಸಂಪನ್ಮೂಲವನ್ನ ವ್ಯರ್ಥ ಮಾಡಲು ಆಶಿಸುತ್ತವೆ. ಇದಕ್ಕೆ ಅವಕಾಶ ಮಾಡಿಕೊಡಲ್ಲ ಎಂದು ಜೋ ಬೈಡನ್ ಹೇಳಿದ್ರು.

‘ಆಫ್ಗಾನ್ ಸೇನೆ ಮೇಲೆ ಘನಿ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ’ ಅಫ್ಗಾನಿಸ್ತಾನದ ಅಧ್ಯಕ್ಷರಾಗಿದ್ದ ಘನಿ, ಅಫ್ಗಾನಿಸ್ತಾನ ಸೇನೆ ಹೋರಾಡುತ್ತದೆ ಎಂದು ಹೇಳಿದ್ರು. ಆದ್ರೆ, ಘನಿಯ ನಂಬಿಕೆ ತಪ್ಪಾಗಿದೆ. ನಾವು ಮತ್ತಷ್ಟು ದಿನ ಅಫ್ಗಾನಿಸ್ತಾನದಲ್ಲಿ ಇರಬೇಕು ಎಂಬುವವರಿಗೆ ಕೇಳುವ ಪ್ರಶ್ನೆ ಏನೆಂದರೆ, ಅಮೆರಿಕದ ಇನ್ನೂ ಎಷ್ಟು ತಲೆಮಾರುಗಳು, ಅಫ್ಗಾನಿಸ್ತಾನದ ನಾಗರಿಕ ಯುದ್ಧದಲ್ಲಿ ಪಾಲ್ಗೊಂಡು ಕಷ್ಟ ಅನುಭವಿಸಬೇಕು..?

ತಾಲಿಬಾನ್ಗೆ ಖಡಕ್ ಎಚ್ಚರಿಕೆ ನೀಡಿದ ಅಧ್ಯಕ್ಷ ಬೈಡನ್ ತಾಲಿಬಾನಿಗಳಿಗೆ ಈಗಾಗಲೇ ಎಚ್ಚರಿಕೆ ಕೊಡಲಾಗಿದೆ. ಒಂದು ವೇಳೆ ನಮ್ಮ ಸಿಬ್ಬಂದಿಗಾಗಲಿ, ರಕ್ಷಣಾ ಕಾರ್ಯಾಚರಣೆಯ ಮೇಲೆ ದಾಳಿ ಮಾಡಿದರೆ, ಅದಕ್ಕೆ ತಕ್ಕ ಪ್ರತೀಕಾರವನ್ನ ಅಮೆರಿಕ ತೆಗೆದುಕೊಳ್ಳದೇ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

‘ಇನ್ನಷ್ಟು ಅಮೆರಿಕನ್ನರ ಬಲಿದಾನ ಆಗಲು ನಾನು ಬಿಡಲ್ಲ’ ಅಫ್ಗಾನಿಸ್ತಾನ ಸೇನೆಗೆ ಬೇಡದ ಯುದ್ಧದಲ್ಲಿ ಇನಷ್ಟು ಅಮೆರಿಕನ್ನರು ಬಲಿದಾನ ಆಗಲು ನಾನು ಬಿಡೋದಿಲ್ಲ.. ಬಿಡಬಾರದು ಕೂಡ ಎಂದಿದ್ದಾರೆ.

ಇನ್ನೂ 20 ವರ್ಷ ಇದ್ರೂ ಇದೇ ಪರಿಸ್ಥಿತಿ ಎಂದ ಬೈಡನ್ ಒಂದು ವರ್ಷ.. ಮತ್ತೊಂದು ವರ್ಷ ಅಥವಾ ಇನ್ನೂ 20 ವರ್ಷ ಇದ್ದರೂ ಸಹ ಅಫ್ಗಾನಿಸ್ತಾನದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಹೀಗಾಗಿ ಅಫ್ಗಾನಿಸ್ತಾನದ ಸೇನೆಗೆ ಬೇಡದ ಯುದ್ಧದಲ್ಲಿ ಅಮೆರಿಕದ ಸೇನೆ ಭಾಗವಹಿಸುವುದಕ್ಕೆ ಯಾವುದೇ ಅರ್ಥವಿಲ್ಲ. ನಾನು ತೆಗೆದುಕೊಂಡಿರುವ ನಿರ್ಧಾರವನ್ನ ಎಲ್ಲರೂ ಟೀಕಿಸಬಹುದು. ನನ್ನ ವಿರುದ್ಧ ಕೇಳಿ ಬರುವ ಟೀಕೆಗಳನ್ನ ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ನಾನು ತೆಗೆದುಕೊಂಡಿರುವ ನಿರ್ಧಾರದ ಅಮೆರಿಕದ ಜನ, ಸೇನಾ ಸಿಬ್ಬಂದಿ ಮತ್ತು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿದೆ.

ಅಮೆರಿಕನ್ನರು, ಅಮೆರಿಕ ಸೇನೆ, ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿ ತಾನು ನಿರ್ಧಾರ ತೆಗೆದುಕೊಂಡಿದ್ದೇನೆ ಅಂತಾ ಹೇಳಿರೋ ಜೊ ಬೈಡನ್, ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತಾ ಖಡಕ್ ಆಗಿ ಹೇಳಿದ್ದಾರೆ. ಅಲ್ದೆ, ಇದುವರೆಗೆ ನನ್ನನ್ನು ಸೇರಿ ನಾಲ್ಕು ಜನ ಅಮೆರಿಕದ ಅಧ್ಯಕ್ಷರು ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಯುದ್ಧ ನಿಲ್ಲಿಸುವ ಕುರಿತು ಚಿಂತಿಸಿದ್ದೇವೆ. ಇದು ನನ್ನ ಅಧ್ಯಕ್ಷ ಅವಧಿಯಲ್ಲಿ ಕೊನೆಗೊಳ್ಳಲಿ. ಯುದ್ಧ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲು ಐದನೇ ಅಧ್ಯಕ್ಷರು ಬರೋದು ಬೇಡ ಅಂತಾ ಹೇಳಿ ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಫ್ಗಾನಿಸ್ತಾನದ ಇಂದಿನ ಪರಿಸ್ಥಿತಿಗೆ ಕಾರಣವೇನು? ತಾಲಿಬಾನ್ ಈ ಮಟ್ಟಕ್ಕೆ ಬೆಳಯಲು ಅಮೆರಿಕ ಕಾರಣವಾಗಿದ್ದು ಹೇಗೆ? ಇಲ್ಲಿದೆ ಉತ್ತರ