ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕರೊಂದಿಗೆ ಅಮೆರಿಕ ಅಧ್ಯಕ್ಷರ ಮಾತುಕತೆ; ನಾನೂ ಬರಬಹುದಾ ಎಂದು ಪ್ರಶ್ನಿಸಿದ ಜೋ ಬೈಡನ್
ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಜಾರ್ಜಿಯಾದ ಅಟ್ಲಾಂಟಾ ನಗರದಲ್ಲಿರುವ ಇಂಡಿಯನ್ ರೆಸ್ಟೋರೆಂಟ್ ‘ನಾನ್ಸ್ಟಾಪ್’ (Naan Stop)ನ ಮಾಲೀಕರ ಬಳಿ ವಿಡಿಯೋ ಮೂಲಕ ಮಾತುಕತೆ ನಡೆಸಿದರು.
ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನಾದ್ಯಂತ ಸಣ್ಣ ಉದ್ಯಮಗಳು ಸಂಕಷ್ಟದಲ್ಲಿವೆ. ಅದರಲ್ಲೂ ಹೋಟೆಲ್, ರೆಸ್ಟೋರೆಂಟ್ನಂಥ ಉದ್ಯಮಗಳು ಇವತ್ತಿಗೂ ಚೇತರಿಸಿಕೊಳ್ಳಲು ಪರದಾಡುತ್ತಿವೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಭಾರತೀಯ ಮೂಲದ ರೆಸ್ಟೋರೆಂಟ್ಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.. ! ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು ಜಾರ್ಜಿಯಾದ ಅಟ್ಲಾಂಟಾ ನಗರದಲ್ಲಿರುವ ಇಂಡಿಯನ್ ರೆಸ್ಟೋರೆಂಟ್ ‘ನಾನ್ಸ್ಟಾಪ್’ (Naan Stop)ನ ಮಾಲೀಕರ ಬಳಿ ವಿಡಿಯೋ ಮೂಲಕ ಮಾತುಕತೆ ನಡೆಸಿದರು. ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ಉದ್ಯಮದ ಮೇಲಾದ ಪರಿಣಾಮದ ಬಗ್ಗೆ ವಿವರಣೆ ಕೇಳಿದ್ದಲ್ಲದೆ, ಸಮಸ್ಯೆಗಳನ್ನು ಆಲಿಸಿದ್ದಾರೆ.
ಅಟ್ಲಾಂಟಾದಲ್ಲಿರುವ ಭಾರತೀಯ ಮೂಲದ ನಾನ್ ಸ್ಟಾಪ್ (Naan Stop) ರೆಸ್ಟೋರೆಂಟ್ ಮಾಲೀಕರಾದ ನೀಲ್ ಮತ್ತು ಸಮೀರ್ ಇದ್ನಾನಿ ಜತೆಗೆ ಜೋ ಬೈಡನ್ ವರ್ಚ್ಯುವಲ್ ಆಗಿ ಮಾತನಾಡಿದ ವಿಡಿಯೋವನ್ನು ವೈಟ್ ಹೌಸ್ ಬಿಡುಗಡೆ ಮಾಡಿದೆ. ನೀಲ್ ಹಾಗೂ ಸಮೀರ್ರನ್ನು ಮಾತನಾಡಿಸಿದ ಜೋ ಬೈಡನ್, ನೀವು ಹೇಗಿದ್ದೀರಿ?, ನಿಮ್ಮ ಉದ್ಯಮ ಹೇಗೆ ಸಾಗುತ್ತಿದೆ?, ರೆಸ್ಟೋರೆಂಟ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಅಗತ್ಯತೆಗಳು ಏನು? ನಾನು ಅಟ್ಲಾಂಟಾಗೆ ಬಂದಾಗ ನಿಮ್ಮ ರೆಸ್ಟೋರೆಂಟ್ಗೆ ಭೇಟಿ ಕೊಡಲು ಇಚ್ಚಿಸುತ್ತೇನೆ. ಬರಬಹುದಾ? ಎಂದು ಪ್ರಶ್ನಿಸಿದ್ದಾರೆ.
ಹಾಗೇ ಜೋ ಬೈಡನ್ ಜತೆ ಮಾತುಕತೆ ನಡೆಸಿದ ನೀಲ್ ಮತ್ತು ಸಮೀರ್ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದ ನಮ್ಮ ಬಿಜಿನೆಸ್ ಶೇ.75ರಷ್ಟು ಕಡಿಮೆಯಾಗಿದೆ. ನಮ್ಮಲ್ಲಿ ಮೊದಲು 20-25ರಷ್ಟು ಉದ್ಯೋಗಿಗಳಿದ್ದರು, ಈಗ ಅದು 15ಕ್ಕೆ ಇಳಿದಿದೆ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಕೊರೊನಾ ವ್ಯಾಕ್ಸಿನ್ ಸಿಗುವಂತಾಗಲಿ. ಇದರಿಂದ ಜನರು ಧೈರ್ಯದಿಂದ ಹೊರಗೆ ಹೋಗಬಹುದು ಎಂದೂ ಕೇಳಿದ್ದಾರೆ.
ನೀಲ್ ಮತ್ತು ಸಮೀರ್ ತಮ್ಮ ಸಂಕಷ್ಟವನ್ನು ಹೇಳಿಕೊಂಡ ಬಳಿಕ ಪ್ರತಿಕ್ರಿಯೆ ನೀಡಿದ ಜೋ ಬೈಡನ್, ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೀಡಾದವರನ್ನು ಪಾರು ಮಾಡುವುದು ಹೇಗೆ ಎಂಬ ಬಗ್ಗೆ ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದ್ದಾರೆ. ಹಾಗೇ, ಸಣ್ಣ ಉದ್ಯಮಗಳಿಗೆ ಹತ್ತಾರು ಶತಕೋಟಿ ಡಾಲರ್ಗಳಷ್ಟು ನೆರವು ನೀಡುವ ಯೋಜನೆಯೂ ಇದೆ ಎಂದು ಹೇಳಿದ್ದಾರೆ.
ನಾನ್ಸ್ಟಾಪ್ ಕಳೆದ 10 ವರ್ಷಗಳಿಂದಲೂ ಅಟ್ಲಾಂಟಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಟ್ಲಾಂಟಾದಲ್ಲಿಯೇ ಒಟ್ಟು ಮೂರು ಕಡೆಗಳಲ್ಲಿ ಈ ರೆಸ್ಟೋರೆಂಟ್ ಇದೆ.
PM Narendra Modi | ಅಮೆರಿಕದ ನೂತನ ಅಧ್ಯಕ್ಷರಿಗೆ ದೂರವಾಣಿ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
Published On - 7:18 pm, Mon, 15 February 21