ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರದ ಪರವಾಗಿ ಮಾತನಾಡುವುದನ್ನು ಪಾಕಿಸ್ತಾನ ಮುಂದುವರಿಸಿದೆ. ತಾಲಿಬಾನ್ ನೇತೃತ್ವದ ಸರ್ಕಾರವನ್ನು ಈಗಲ್ಲದಿದ್ದರೂ ಮುಂದೆಯಾದರೂ ಅಮೆರಿಕಾ ಒಪ್ಪಿಕೊಳ್ಳಲೇಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಟಿಆರ್ಟಿ ವರ್ಲ್ಡ್ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವೊಂದು ಏಕಪಕ್ಷೀಯವಾಗಿ ತಾಲಿಬಾನ್ ಸರ್ಕಾರವನ್ನು ಗುರುತಿಸುವ ಮೂಲಕ ಏನೂ ಬದಲಾವಣೆ ಆಗಲ್ಲ. ಅಮೆರಿಕ, ಯುರೋಪ್, ಚೀನಾ ಮತ್ತು ರಷ್ಯಾ ಕೂಡ ಆದ್ಯತೆಯ ಮೇಲೆ ಗುರುತಿಸಬೇಕಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ. “ನೆರೆ ರಾಷ್ಟ್ರಗಳ ಜತೆ ಪಾಕಿಸ್ತಾನವು ಈ ಸಂಬಂಧವಾಗಿ ಮಾತುಕತೆ ನಡೆಸುತ್ತಿದೆ ಮತ್ತು ಭೇಟಿಯ ನಂತರ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು,” ಎಂದು ಖಾನ್ ಹೇಳಿರುವುದಾಗಿ ವರದಿಯಾಗಿದೆ.
ತಾಲಿಬಾನ್ನಿಂದ ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಬೂಲ್ ವಶಕ್ಕೆ ಪಡೆಯುವಾಗ ಹರಿದ ರಕ್ತದಿಂದ ನಾವು ಗಾಬರಿ ಆಗಿದ್ದೆವು ಮತ್ತು ಶಾಂತಿಯುತವಾದ ಅಧಿಕಾರ ಹಸ್ತಾಂತರ ಅನಿರೀಕ್ಷಿತವಾದದ್ದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಸಮುದಾಯವು ಅಫ್ಘಾನಿಸ್ತಾನ ಸರ್ಕಾರಕ್ಕೆ ನೆರವು ಒದಗಿಸಬೇಕು. ಏಕೆಂದರೆ ಆ ದೇಶ ಬಹುತೇಕ ವಿದೇಶೀ ಹಣಕಾಸಿನ ನೆರವಿನ ಮೇಲೆ ಅವಲಂಬಿತ ಆಗಿದೆ ಎಂದು ಹೇಳಿದ್ದಾರೆ.
“ಒಂದು ವೇಳೆ ಅಂತರರಾಷ್ಟ್ರೀಯ ಸಮುದಾಯವು ಆಫ್ಘನ್ ಜನರ ನೆರವಿಗೆ ಮುಂದೆ ಬಾರದಿದ್ದಲ್ಲಿ ಮಾನವೀಯ ಬಿಕ್ಕಟ್ಟು ಉದ್ಭವಿಸಲಿದೆ,” ಎಂದು ಇಮ್ರಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. ಪಾಕಿಸ್ತಾನವು ತಾಲಿಬಾನ್ ಅನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.