ತುಂಬು ಗರ್ಭಿಣಿಯ ಹೊಟ್ಟೆ ಬಗೆದು ಶಿಶುವನ್ನು ಹೊರತೆಗೆದಿದ್ದ ಮಹಿಳೆಗೆ ಮರಣದಂಡನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2021 | 4:54 PM

ಬಾಬಿ ಜೋ ಸ್ಟಿನ್ನೆಟ್ ಎಂಬ 8 ತಿಂಗಳ ತುಂಬು ಗರ್ಭಿಣಿಯನ್ನು 2004ರಲ್ಲಿ ಅಪಹರಿಸಿದ್ದ ಲಿಸಾ, ಹಗ್ಗದ ಸಹಾಯದಿಂದ ಗರ್ಭಿಣಿಯ ಕತ್ತು ಹಿಸುಕಿ ಕೊಂದಿದ್ದಳು. ನಂತರ ಚಾಕುವಿನಿಂದ ಆಕೆಯ ಗರ್ಭವನ್ನು ಬಗೆದು ಹೆಣ್ಣು ಶಿಶುವನ್ನು ಹೊರಗೆ ತೆಗೆದಿದ್ದಳು. ದುರ್ಘಟನೆಯಲ್ಲಿ ಬದುಕಿದ್ದ ಶಿಶುವನ್ನು ತನ್ನದೆಂದು ಬಿಂಬಿಸಲು ಪ್ರಯತ್ನಿಸಿದ್ದಳು.

ತುಂಬು ಗರ್ಭಿಣಿಯ ಹೊಟ್ಟೆ ಬಗೆದು ಶಿಶುವನ್ನು ಹೊರತೆಗೆದಿದ್ದ ಮಹಿಳೆಗೆ ಮರಣದಂಡನೆ
ಮರಣದಂಡನೆಗೆ ಒಳಗಾದ ಲೀಸಾ ಮಾಂಟ್​ಗೊಮೊರಿ
Follow us on

ಅಮೆರಿಕಾದಲ್ಲಿ ಸುಮಾರು ಏಳು ದಶಕಗಳ ನಂತರ ಮಹಿಳೆಯೊಬ್ಬಳಿಗೆ ಮರಣದಂಡನೆ ವಿಧಿಸಲಾಗಿದೆ. ಕಾನ್ಸಸ್​ ಪ್ರಾಂತ್ಯದ ಲಿಸಾ ಮಾಂಟ್​ಗೊಮೆರಿ ಎಂಬಾಕೆ ತುಂಬು ಗರ್ಭಿಣಿಯನ್ನು ಕೊಂದು, ಗರ್ಭದಿಂದ ಶಿಶುವನ್ನು ತೆಗೆದಿದ್ದಳು. ಈ ದುಷ್ಕೃತ್ಯಕ್ಕಾಗಿ ಆಕೆಗೆ ಮರಣ ದಂಡನೆ ವಿಧಿಸಿದ್ದು ಇಂದು (ಜ.13) ಮುಂಜಾನೆ 1.31ಕ್ಕೆ ಸಾವುತರುವ ಚುಚ್ಚುಮದ್ದು ನೀಡುವ ಮೂಲಕ ಶಾಶ್ವತ ನಿದ್ರೆಗೆ ತಳ್ಳಲಾಗಿದೆ.

ಬಾಬಿ ಜೋ ಸ್ಟಿನ್ನೆಟ್ ಎಂಬ 8 ತಿಂಗಳ ತುಂಬು ಗರ್ಭಿಣಿಯನ್ನು 2004ರಲ್ಲಿ ಅಪಹರಿಸಿದ್ದ ಲಿಸಾ, ಹಗ್ಗದ ಸಹಾಯದಿಂದ ಗರ್ಭಿಣಿಯ ಕತ್ತು ಹಿಸುಕಿ ಕೊಂದಿದ್ದಳು. ನಂತರ ಚಾಕುವಿನಿಂದ ಆಕೆಯ ಗರ್ಭವನ್ನು ಬಗೆದು ಹೆಣ್ಣು ಶಿಶುವನ್ನು ಹೊರಗೆ ತೆಗೆದಿದ್ದಳು. ದುರ್ಘಟನೆಯಲ್ಲಿ ಬದುಕಿದ್ದ ಶಿಶುವನ್ನು ತನ್ನದೆಂದು ಬಿಂಬಿಸಲು ಪ್ರಯತ್ನಿಸಿದ್ದಳು. ಇದೇ ಕಾರಣಕ್ಕಾಗಿ ಆಕೆಗೆ ಮರಣ ದಂಡನೆ ನೀಡಲು ಅಮೆರಿಕಾ ಸರ್ಕಾರ ನಿರ್ಧರಿಸಿತ್ತು.

ಇಂಡಿಯಾನದ ಟೆರೆ ಹಾಟೆಯಲ್ಲಿರುವ ಫೆಡರಲ್​ ಕಾರಾಗೃಹದಲ್ಲಿ ಚುಚ್ಚುಮದ್ದು ನೀಡುವ ಮುನ್ನ ಆಕೆಯ ಮುಖಗವಸು ತೆಗೆದು ಕೊನೆಯಾದಾಗಿ ಏನಾದರೂ ಹೇಳುವುದಿದೆಯೇ ಎಂದು ಕೇಳಿದ್ದರು. ಆದರೆ, ಅತ್ಯಂತ ಪೇಲವ ಮುಖಭಾವದೊಂದಿಗೆ ಏನೂ ಇಲ್ಲ ಎಂದಷ್ಟೇ ಉಸುರಿದ ಲಿಸಾ ಮಾಂಟ್​ಗೊಮೆರಿ ಮೌನಕ್ಕೆ ಶರಣಾದಳು.

ಲಿಸಾ ಮಾಂಟ್​ಗೊಮೆರಿ ಪರ ವಕೀಲ ಕೆಲ್ಲಿ ಹೆನ್ರಿ ಅತ್ಯಂತ ಕಟು ಶಬ್ಧಗಳಿಂದ ಈ ಮರಣ ದಂಡನೆಯನ್ನು ವಿರೋಧಿಸಿದ್ದಾರೆ. ರಕ್ತಪಿಪಾಸುವಿನಂತಿರುವ ಒಂದು ದುರ್ಬಲ ವ್ಯವಸ್ಥೆ ಇಂದು ರಾತ್ರಿ ನಡೆದ ದುರಂತಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಹಾಜರಿದ್ದವರೆಲ್ಲರಿಗೂ ನಾಚಿಕೆಯಾಗಬೇಕು. ಅಸ್ವಸ್ಥಗೊಂಡು, ಮಾನಸಿಕವಾಗಿ ಭ್ರಮಾಲೋಕದಲ್ಲಿದ್ದ ಒಂದು ಮಹಿಳೆಯನ್ನು ರಕ್ಷಿಸುವುದಕ್ಕೆ ಸರ್ಕಾರ ಕನಿಷ್ಟ ಪ್ರಯತ್ನವನ್ನೂ ಮಾಡಿಲ್ಲ. ಲಿಸಾಳಿಗೆ ವಿಧಿಸಿದ ಮರಣ ದಂಡನೆ ಕಾನೂನಿಗೆ ವಿರುದ್ಧವಾದದ್ದು ಎಂದು ಕಿಡಿಕಾರಿದ್ದಾರೆ.

ಕಳೆದ ಜುಲೈನಿಂದ ಇಲ್ಲಿಯವರೆಗೆ ಮರಣ ದಂಡನೆ ಸ್ವೀಕರಿಸಿದ 11ನೇ ವ್ಯಕ್ತಿ ಈಕೆ ಎಂದು ತಿಳಿದುಬಂದಿದೆ. ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಟ್ರಂಪ್​ ಮರಣ ದಂಡನೆ ಶಿಕ್ಷೆಯನ್ನು ಸಮರ್ಥಿಸುವವರಾಗಿರುವ ಕಾರಣ ಸುಮಾರು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲ ಪ್ರಕರಣಗಳನ್ನು ತಮ್ಮ ಕಾಲಾವಧಿಯಲ್ಲಿ ಕೈಗೆತ್ತಿಕೊಂಡು ಶಿಕ್ಷೆ ವಿಧಿಸಿದ್ದಾರೆ.

ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬೈಡನ್​ ಅಧಿಕಾರ ಸ್ವೀಕರಿಸಿದ ನಂತರ ಫೆಡರಲ್​ ಕಾನೂನಿನಡಿಯಲ್ಲಿ ಮರಣ ದಂಡನೆಯಂತಹ ಶಿಕ್ಷೆಗೆ ಅಂತ್ಯ ಹಾಡುವ ಸಾಧ್ಯತೆ ಇರುವುದರಿಂದ, ಮುಂದಿನ ವಾರದ ಬೈಡನ್ ಪದಗ್ರಹಣಕ್ಕೂ ಮುನ್ನವೇ ಇನ್ನೂ ಇಬ್ಬರು ಅಪರಾಧಿಗಳಿಗೆ ಶಿಕ್ಷೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

67 ವರ್ಷ ನಂತರ ಓರ್ವ ಮಹಿಳಾ ಅಪರಾಧಿಗೆ ಮರಣ ದಂಡನೆ! ಗಲ್ಲು ಹೇಗೆ ಗೊತ್ತಾ?