ನರೇಂದ್ರ ಮೋದಿ ಜೊತೆಗೆ ಕಮಲಾ ಹ್ಯಾರಿಸ್ ಮಾತುಕತೆ: ಇದೇ ತಿಂಗಳಲ್ಲಿ ಭಾರತಕ್ಕೆ ಅಮೆರಿಕದಿಂದ ಇನ್ನಷ್ಟು ಕೊವಿಡ್ ಲಸಿಕೆ
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಈ ವೇಳೆ ಅಮೆರಿಕವು ವಿಶ್ವದ ವಿವಿಧ ದೇಶಗಳಿಗೆ 2.5 ಕೋಟಿ ಡೋಸ್ ಕೊವಿಡ್-19 ಲಸಿಕೆ ನೀಡಲು ಉದ್ದೇಶಿಸಿರುವ ವಿಚಾರವನ್ನು ತಿಳಿಸಿದರು.
ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಈ ವೇಳೆ ಜಾಗತಿಕ ಲಸಿಕೆ ಹಂಚಿಕೆ ಕಾರ್ಯತಂತ್ರದಡಿ ಅಮೆರಿಕವು ವಿಶ್ವದ ವಿವಿಧ ದೇಶಗಳಿಗೆ 2.5 ಕೋಟಿ ಡೋಸ್ ಕೊವಿಡ್-19 ಲಸಿಕೆ ನೀಡಲು ಉದ್ದೇಶಿಸಿರುವ ವಿಚಾರವನ್ನು ತಿಳಿಸಿದರು. ಮೋದಿ ಅವರ ಜೊತೆಗೆ ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರ್ಯೂಸ್ ಮೆನ್ಯೂವಲ್, ಗ್ವಾಟೆಮಾಲಾ ಅಧ್ಯಕ್ಷ ಅಲೆಜಾಂಡ್ರೊ ಗಿಯಾಮ್ಮಟೈ, ಟ್ರಿನಿಡಾಡ್ ಹಾಗೂ ಟೊಬೆಗೊ ಪ್ರಧಾನಿ ಕೀತ್ ರೌಲೆ ಅವರೊಂದಿಗೂ ಕಮಲಾ ಮಾತನಾಡಿದರು.
‘ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರವು ಮೊದಲ 2.5 ಕೋಟಿ ಡೋಸ್ ಲಸಿಕೆಯನ್ನು ನಾಲ್ಕು ದೇಶಗಳೊಂದಿಗೆ ಹಂಚಿಕೊಳ್ಳಲು ಉದ್ದೇಶಿಸಿದೆ. ಜೂನ್ ಅಂತ್ಯದ ಒಳಗೆ 8 ಕೋಟಿ ಡೋಸ್ ಲಸಿಕೆಯನ್ನು ವಿಶ್ವದ ವಿವಿಧ ದೇಶಗಳಿಗೆ ಅಮೆರಿಕ ಸರಬರಾಜು ಮಾಡಲಿದೆ’ ಎಂದು ಕಮಲಾ ಹ್ಯಾರಿಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದರು.
ವಿಶ್ವಸಂಸ್ಥೆಯ ಕೊವ್ಯಾಕ್ಸ್ ಯೋಜನೆಯ ಮೂಲಕ ಅಥವಾ ನೇರವಾಗಿ ಈ ನಾಲ್ಕೂ ದೇಶಗಳು ಅಮೆರಿಕದಿಂದ ಲಸಿಕೆ ಸ್ವೀಕರಿಸಬಹುದಾಗಿದೆ ಎಂದು ಬೈಡನ್ ಆಡಳಿತ ಸ್ಪಷ್ಟಪಡಿಸಿದೆ. ಮೊದಲ ಹಂತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ 2.5 ಕೋಟಿ ಡೋಸ್ ಲಸಿಕೆ ಪೈಕಿ 1.9 ಕೋಟಿ ಡೋಸ್ ಕೊವ್ಯಾಕ್ಸ್ ಮೂಲಕ ವಿವಿಧ ದೇಶಗಳಿಗೆ ತಲುಪಲಿದೆ. ಉಳಿದ 60 ಲಕ್ಷ ಡೋಸ್ ಲಸಿಕೆಯು ಕೆನಡಾ, ಮೆಕ್ಸಿಕೊ, ಭಾರತ ಮತ್ತು ಕೊರಿಯಾ ದೇಶಗಳಿಗೆ ಪೂರೈಕೆಯಾಗಲಿದ್ದು ಜೂನ್ ತಿಂಗಳೊಳಗೆ ಭಾರತಕ್ಕೆ ಲಸಿಕೆ ನೀಡಲಿದೆ. ಏಷ್ಯಾದ ರಾಷ್ಟ್ರಗಳಿಗೆ 70 ಲಕ್ಷ ಡೋಸ್ ಲಸಿಕೆ ಹಾಗೂ ಆಫ್ರಿಕಾಗೆ 50 ಲಕ್ಷ ಡೋಸ್ ಕೊವಿಡ್ ಲಸಿಕೆ ಹಂಚಿಕೆ ಮಾಡಲಾಗುತ್ತೆ ಎಂದು ಅಮೆರಿಕ ಸರ್ಕಾರದ ಪ್ರಕಟಣೆ ತಿಳಿಸಿದೆ.
Spoke to @VP Kamala Harris a short while ago. I deeply appreciate the assurance of vaccine supplies to India as part of the US Strategy for Global Vaccine Sharing. I also thanked her for the all the support and solidarity from the US government, businesses and Indian diaspora.
— Narendra Modi (@narendramodi) June 3, 2021
ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಿದರು. ‘ಅಮೆರಿಕ ಸರ್ಕಾರದೊಂದಿಗೆ ಭಾರತವು ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದೆ. ವಾಣಿಜ್ಯ ಮತ್ತು ಅನಿವಾಸಿ ಭಾರತೀಯರ ಬಗ್ಗೆ ನಾವು ಮಾತನಾಡಿದೆವು. ಭಾರತ-ಅಮೆರಿಕ ನಡುವಣ ಲಸಿಕೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಕೊವಿಡ್ ನಂತರದ ಜಾಗತಿಕ ಆರೋಗ್ಯ ಹಾಗೂ ಆರ್ಥಿಕ ಪುನಶ್ಚೇತನದ ಬಗ್ಗೆ ಚರ್ಚಿಸಿದೆವು’ ಎಂದು ಮೋದಿ ಹೇಳಿದ್ದಾರೆ.
(American Vice President Kamala Harris calls Prime Minister Narendra Modi to share Covid vaccines with India)
ಇದನ್ನೂ ಓದಿ: ಕೊವಿಡ್ ಲಸಿಕೆಯ ಅಭಾವ, ಮೇ ತಿಂಗಳಲ್ಲಿ ಏರ್ ಇಂಡಿಯಾದ ಐವರು ಸೀನಿಯರ್ ಪೈಲಟ್ಗಳು ಸೋಂಕಿಗೆ ಬಲಿ
ಇದನ್ನೂ ಓದಿ: ಜೂನ್ನಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ 45.09 ಲಕ್ಷ ಡೋಸ್ ಲಸಿಕೆ ನೀಡಿಕೆ ಭರವಸೆ
Published On - 11:00 pm, Thu, 3 June 21