ಚೀನಾ- ತೈವಾನ್ ಉದ್ವಿಗ್ನತೆ ಬೆನ್ನಲ್ಲೇ ತೈವಾನ್‌ನ ರಕ್ಷಣಾ ಅಧಿಕಾರಿ ಹೋಟೆಲ್ ರೂಂನಲ್ಲಿ ಶವವಾಗಿ ಪತ್ತೆ
ಔ ಯಾಂಗ್ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆಗಾಗಿ ಈ ವರ್ಷದ ಆರಂಭದಲ್ಲಿ ಮಿಲಿಟರಿ ಒಡೆತನದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥರಾಗಿ ತಮ್ಮ ಅಧಿಕಾರ ವಹಿಸಿಕೊಂಡಿದ್ದರು.
ತೈವಾನ್: ಚೀನಾ-ತೈವಾನ್ ಉದ್ವಿಗ್ನತೆ ಮಧ್ಯೆ ತೈವಾನ್ (Taiwan) ಉನ್ನತ ರಕ್ಷಣಾಧಿಕಾರಿಯೊಬ್ಬರ ಶವ ಹೋಟೆಲ್ನಲ್ಲಿ ಪತ್ತೆಯಾಗಿದೆ. ಕ್ಷಿಪಣಿ ಅಭಿವೃದ್ಧಿ ತಂಡದ ನೇತೃತ್ವ ವಹಿಸಿದ್ದ ಅಧಿಕಾರಿ ನಿಗೂಢವಾಗಿ ಸಾವನ್ನಪ್ಪಿದ್ದು, ಆ ಅಧಿಕಾರಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ (Yang Li-hsing) ಇಂದು (ಶನಿವಾರ) ಬೆಳಿಗ್ಗೆ ದಕ್ಷಿಣ ತೈವಾನ್‌ನ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತೈವಾನ್‌ನ ಅಧಿಕಾರಿಗಳು ರಕ್ಷಣಾಧಿಕಾರಿಯ ಸಾವಿನ ಕಾರಣವನ್ನು ಹುಡುಕುತ್ತಿದ್ದಾರೆ. ಔ ಯಾಂಗ್ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆಗಾಗಿ ಈ ವರ್ಷದ ಆರಂಭದಲ್ಲಿ ಮಿಲಿಟರಿ ಒಡೆತನದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥರಾಗಿ ತಮ್ಮ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ: BIG NEWS: ತೈವಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ಚೀನಾ
ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ನಂತರ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆಯ ನಡುವೆ ರಕ್ಷಣಾಧಿಕಾರಿಯ ಸಾವು ಬೆಳಕಿಗೆ ಬಂದಿದೆ. ನ್ಯಾನ್ಸಿ ಪೆಲೋಸಿ ಭೇಟಿಯ ಒಂದು ದಿನದ ನಂತರ, ತೈವಾನ್‌ನ ರಕ್ಷಣಾ ಸಚಿವಾಲಯವು 27 ಚೀನಾದ ಫೈಟರ್ ಜೆಟ್‌ಗಳು ಅದರ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ ಎಂದು ವರದಿಯಾಗಿದೆ. ಚೀನಾದ ನೌಕಾಪಡೆಯು 6 ಜೆ-11 ಯುದ್ಧವಿಮಾನಗಳು, 5 ಜೆ-16 ಫೈಟರ್ ಜೆಟ್‌ಗಳು ಮತ್ತು 16 ಎಸ್‌ಯು-30 ಫೈಟರ್ ಜೆಟ್‌ಗಳನ್ನು ಒಳಗೊಂಡಿತ್ತು.
ತೈವಾನ್‌ನಲ್ಲಿ ಇರುವ ಆಸ್ಟ್ರೋನೇಷಿಯನ್ ಬುಡಕಟ್ಟು ಜನರು, ಅವರು ಆಧುನಿಕ ದಿನದ ದಕ್ಷಿಣ ಚೀನಾದಿಂದ ಬಂದವರು ಎಂದು ಭಾವಿಸಲಾಗಿದೆ. 17ನೇ ಶತಮಾನದಿಂದ ಗಮನಾರ್ಹ ಸಂಖ್ಯೆಯ ವಲಸಿಗರು ಚೀನಾದಿಂದ ಬರಲು ಪ್ರಾರಂಭಿಸಿದರು. ಹೆಚ್ಚಿನವರು ಫುಜಿಯಾನ್ (ಫುಕಿಯನ್) ಪ್ರಾಂತ್ಯದಿಂದ ಹೊಕ್ಲೋ ಚೈನೀಸ್ ಅಥವಾ ಹಕ್ಕಾ ಚೈನೀಸ್, ಹೆಚ್ಚಾಗಿ ಗುವಾಂಗ್‌ಡಾಂಗ್‌ನಿಂದ ಬಂದವರು. ತೈವಾನ್ ದ್ವೀಪವು ಚೀನಾದ ಭಾಗವೇ ಆಗಿತ್ತು. ಆದರೆ 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆದರೆ, ಚೀನಾ ತೈವಾನ್ ದ್ವೀಪವನ್ನು ತನ್ನ ಸ್ವಂತ ಪ್ರದೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ ತೈವಾನ್ ಅನ್ನು ವಶಕ್ಕೆ ಪಡೆಯಲು ಮಿಲಿಟರಿ ಕಾರ್ಯಾಚರಣೆ ಮಾಡಲು ಹಿಂಜರಿಯಲ್ಲ ಎಂದೂ ಘೋಷಿಸಿದೆ.
ಚೀನಾ ಎಷ್ಟೇ ಒತ್ತಡ ಹೇರಿದರೂ ಅದರ ಭಾಗವಾಗುವುದಿಲ್ಲ ಎಂದು ತೈವಾನ್ ಈಗಾಗಲೇ ಘೋಷಿಸಿದೆ. ಮತ್ತೊಂದು ಕಡೆ ತೈವಾನನ್ನು ತನ್ನ ಜತೆ ವಿಲೀನಗೊಳಿಸಲು ಚೀನಾ ಒತ್ತಡ ಹೇರುತ್ತಿದೆ. 1949ರಿಂದಲೇ ತೈವಾನ್ ತನ್ನನ್ನು ತಾನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಪ್ರಜಾಪ್ರಭುತ್ವ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಪ್ರಸ್ತುತ ತೈವಾನ್ ರಾಷ್ಟ್ರಪತಿಯಾಗಿ ಚೆನ್ ಶುಇ-ಬಿಯಾನ್, ಉಪ ರಾಷ್ಟ್ರಪತಿಯಾಗಿ ಅನೆಟ್ ಲು ಹಾಗೂ ಪ್ರಧಾನಿಯಾಗಿ ಸು ತ್ಸೆಂಗ್ ಚಾಂಗ್ ಅಧಿಕಾರ ನಿರ್ವಹಿಸುತ್ತಿದ್ದಾರೆ.
ಕಳೆದ ಜನವರಿ 23ರಂದು ಚೀನಾದ 23 ಯುದ್ಧ ವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. ಕಳೆದ ವರ್ಷ, 2021ರಲ್ಲಿ ಒಟ್ಟು 969 ಬಾರಿ ತೈವಾನ್ ವಾಯುಗಡಿಯಲ್ಲಿ ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿದ್ದವು. 2020ರಲ್ಲಿ 380 ಬಾರಿ ಚೀನಾದ ಯುದ್ಧವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. 2022ರಲ್ಲಿ ಈವರೆಗೆ ತೈವಾನ್ ಮೇಲೆ 465 ಬಾರಿ ಚೀನಾದ ಯುದ್ಧ ವಿಮಾನಗಳು ಹಾರಾಡಿವೆ.