ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ; 3 ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲೆ 5ನೇ ದಾಳಿ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದುವರಿದಿದ್ದು, ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಕೊಪಾಲಿಯಾ ಬಜಾರ್‌ನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆದಿದೆ. ಹತ್ಯೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚಿನ ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಸದಸ್ಯರ ಮೇಲಿನ ಸರಣಿ ಹಲ್ಲೆಗಳ ನಡುವೆ ಈ ಹತ್ಯೆ ಸಂಭವಿಸಿದೆ. ಫೆಬ್ರವರಿ 12ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಢಾಕಾ, ಜನವರಿ 5: ಬಾಂಗ್ಲಾದೇಶದಲ್ಲಿ ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯ ಗುಂಡಿನ ದಾಳಿ ನಡೆದಿದ್ದು, ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಅಲ್ಲಿ ನಡೆದ ಅಶಾಂತಿಯ ಬಳಿಕ ಬಾಂಗ್ಲಾದೇಶದಲ್ಲಿ (Bangladesh) ನಡೆದ 5ನೇ ಘಟನೆ ಇದಾಗಿದೆ. ಮೃತ ವ್ಯಕ್ತಿಯನ್ನು ರಾಣಾ ಪ್ರತಾಪ್ ಬೈರಾಗಿ ಎಂದು ಗುರುತಿಸಲಾಗಿದ್ದು, ಇಂದು ಮಧ್ಯಾಹ್ನ ಜೆಸ್ಸೋರ್ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಕೆಲವು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಬೈರಾಗಿ ಅರುವಾ ಗ್ರಾಮದ ನಿವಾಸಿಯಾಗಿದ್ದು ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ಅವರು ಮಾರುಕಟ್ಟೆಯಲ್ಲಿದ್ದಾಗ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯ ನಂತರ, ದಾಳಿಕೋರರು ಓಡಿಹೋದರು. ಹಲ್ಲೆಯಿಂದಾಗಿ ಬೈರಾಗಿ ಸ್ಥಳದಲ್ಲೇ ಸಾವನ್ನಪ್ಪಿದರು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬೈರಾಗಿಯ ಹತ್ಯೆ ಬಾಂಗ್ಲಾದೇಶದಲ್ಲಿ ನಡೆದ ಐದನೇ ಘಟನೆಯಾಗಿದ್ದು, ಮೊದಲನೆಯದಾಗಿ, ಡಿಸೆಂಬರ್ 18ರಂದು ಮೈಮೆನ್ಸಿಂಗ್‌ನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹಲ್ಲೆ ನಡೆಸಿ ಥಳಿಸಿ ಕೊಂದಿತ್ತು. ಈ ಘಟನೆಯ 6 ದಿನಗಳ ನಂತರ ಪಂಗ್ಶಾ ಉಪಜಿಲ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಅಮೃತ್ ಮೊಂಡಲ್ ಅವರನ್ನು ದೇವರ ದೂಷಣೆಯ ಆರೋಪದ ಮೇಲೆ ಗುಂಪು ಥಳಿಸಿ ಕೊಂದಿತ್ತು.
ಬಳಿಕ, ಬಜೇಂದ್ರ ಬಿಸ್ವಾಸ್ ಅವರನ್ನು ಮೈಮೆನ್ಸಿಂಗ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಈ ತಿಂಗಳ ಆರಂಭದಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದ 50 ವರ್ಷದ ಹಿಂದೂ ಉದ್ಯಮಿ ಖೋಕೋನ್ ದಾಸ್ ಅವರ ಮೇಲೂ ಗುಂಪೊಂದು ಹಲ್ಲೆ ನಡೆಸಿ ಬೆಂಕಿ ಹಚ್ಚಿತು. ಕೆಲವು ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ ನಂತರ ಅವರು ಶನಿವಾರ (ಜನವರಿ 3) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಕಳೆದ ತಿಂಗಳು, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಅವರು ನೆರೆಯ ದೇಶದಲ್ಲಿ ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರದ ಅಡಿಯಲ್ಲಿ ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿ ಘಟನೆಗಳು ವರದಿಯಾಗಿವೆ ಎಂದು ಹೇಳಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
